More

    ಕುಷ್ಠರೋಗದತ್ತ ವೈಜ್ಞಾನಿಕ ಚಿಂತನೆ ಇರಲಿ


    ಚಿತ್ರದುರ್ಗ: ಸಾರ್ವಜನಿಕರಲ್ಲಿ ಕುಷ್ಠರೋಗದ ಬಗ್ಗೆ ಇರುವ ಅವೈಜ್ಞಾನಿಕ ನಂಬಿಕೆಗಳನ್ನು ಹೋಗಲಾಡಿಸಬೇಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಹೇಳಿದರು.
    ಅಭಿಯಾನ ಕುರಿತಂತೆ ಡಿಸಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಮೂಢನಂಬಿಕೆ ತೊರೆದು, ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದರು.
    ಪ್ರತಿ ವರ್ಷ ಜ.30ರಿಂದ ಫೆ.13ರ ವರೆಗೆ ಅಭಿಯಾನ ನಡೆಸಲಾಗುತ್ತಿದೆ. ಬಹುಔಷಧ ಚಿಕಿತ್ಸಾ ವಿಧಾನದ ಮೂಲಕ ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ವೈದ್ಯರು,ಸಿಬ್ಬಂದಿ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದು ಹೇಳಿದರು.
    ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಕುಷ್ಠರೋಗದ ಕುರಿತಂತೆ ಸಮುದಾಯದಲ್ಲಿ ಅರಿವು ಮೂಡಿಸಲು ಜ.30ರಿಂದ ಫೆ.13ರವರೆಗೆ ಹಮ್ಮಿಕೊಂಡಿರುವ ಸ್ಪರ್ಶ್ ಕುಷ್ಠ ರೋಗ ಜಾಗೃತಿ ಅಭಿಯಾನವನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
    ಜಿಲ್ಲಾದ್ಯಂತ ಈ ಅಭಿಯಾನವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಅಂತರ್ ಇಲಾಖಾ ಸಮನ್ವಯ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು, ಜಿಲ್ಲೆಯನ್ನು ಕುಷ್ಠರೋಗ ಮುಕ್ತಗೊಳಿಸಲು ಶ್ರಮಿಸಬೇಕೆಂದು ತಾಕೀತು ಮಾಡಿದರು.
    ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಜಿ.ಒ.ನಾಗರಾಜ್ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಕುಷ್ಠರೋಗ ಮುಕ್ತ ಸಮಾಜಕ್ಕೆ ಶ್ರಮಿಸಿದ್ದರು. ಅವರ ಸ್ಮರಣಾರ್ಥ ಸ್ಪರ್ಶ್ ಕುಷ್ಠರೋಗ ಅರಿವು ಪಾಕ್ಷಿಕ ಆಚರಿಸಲಾಗುತ್ತಿದೆ ಎಂದರು.
    ಗಾಂಧೀಜಿ ಕುಷ್ಠರೋಗದ ಕುರಿತು ಸಮಾಜದಲ್ಲಿರುವ ಮೂಢನಂಬಿಕೆಗಳ ವಿರುದ್ಧ ಹೋರಾಟ ನಡೆಸಿದ್ದರು. ಕಳಂಕ ಕೊನೆಗೊಳಿಸಿ ಘನತೆಯನ್ನು ಎತ್ತಿ ಹಿಡಿಯಿರಿ ಎನ್ನುವುದು ಈ ಬಾರಿಯ ಘೋಷವಾಕ್ಯವಾಗಿದೆ ಎಂದು ಹೇಳಿದರು.
    ಮಹಾತ್ಮ ಗಾಂಧೀಜಿ ಕನಸಾದ ಕುಷ್ಠರೋಗ ಮುಕ್ತ ಭಾರತ ಕಟ್ಟಲು ಶ್ರಮಿಸುತ್ತೇನೆ ಎಂಬ ಪ್ರತಿಜ್ಞಾವಿಧಿಯನ್ನು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಬೋಧಿಸಿದರು.
    ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಿ.ಒ.ಸುಧಾ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಬಿ.ವಿ.ಗಿರೀಶ್, ಡಾ.ವೆಂಕಟೇಶ್, ಡಾ.ರೇಖಾ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಕಚೇರಿ ಡಿಎನ್‌ಟಿ ತಂಡದ ಮೇಲ್ವಿಚಾರಕರಾದ ವೈ.ತಿಪ್ಪೇಶಿ, ಎಂ.ಚಂದ್ರಪ್ಪ, ಕೆ.ರಾಜೇಂದ್ರ, ಮಂಜುನಾಥ್, ಪ್ರಸಾದ್, ಯು.ಕಿರಣ್, ಚಳ್ಳಕೆರೆ ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಅಮೃತರಾಜ್, ಹೊಸದುರ್ಗ ಸಿದ್ದರಾಮಪ್ಪ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts