More

    ಕುರಿ, ಮೇಕೆ ಸಾವಿಗೆ ಪರಿಹಾರ ಮೊತ್ತ ಹೆಚ್ಚಿಸಿ

    ಬೀದರ್: ಕುರಿ ಮತ್ತು ಮೇಕೆಗಳು ಮೃತಪಟ್ಟಾಗ ಸಾಕಣೆದಾರರಿಗೆ ನೀಡುವ ಪರಿಹಾರ ಮೊತ್ತ ಹೆಚ್ಚಿಸಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ ಒತ್ತಾಯಿಸಿದ್ದಾರೆ.

    ವಿಧಾನಸೌಧದಲ್ಲಿ ಸೋಮವಾರ ನಡೆದ ಕಲಾಪದ ಪ್ರಶ್ನೋತ್ತರದ ವೇಳೆ ಕುರಿ, ಮೇಕೆ ಸಾಕಣೆದಾರರ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆ ಕೇಳಿದ ಅವರು, ಹೆಚ್ಚಾಗಿ ಹಾಲುಮತ, ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗದ ಬಡವರು ಕುರಿ, ಮೇಕೆ ಸಾಕಣೆ ಮಾಡುತ್ತಾರೆ. ಈ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಕುರಿ, ಮೇಕೆ ಮೃತಪಟ್ಟರೆ ತಲಾ 5000 ರೂ. ಪರಿಹಾರ ನೀಡಲಾಗುತ್ತಿತ್ತು. ಆದರೀಗ ಸಕರ್ಾರ ಕರೊನಾ ನೆಪವೊಡ್ಡಿ ಮೂರು ವರ್ಷಗಳಿಂದ ಪರಿಹಾರ ನೀಡಿಲ್ಲ ಎಂದು ಗಮನ ಸೆಳೆದರು.

    ಪರಿಹಾರ ಇಲ್ಲದೆ ಸಾಕಣೆದಾರರು ಸಂಕಷ್ಟದಲ್ಲಿದ್ದಾರೆ. ಕುರಿ, ಮೇಕೆ ಮರಿ ಮೃತಪಟ್ಟರೆ 2500 ರೂ., ದೊಡ್ಡ ಕುರಿ, ಮೇಕೆಗೆ 5 ಸಾವಿರ ರೂ. ಪರಿಹಾರವಿದೆ. ಆದರೀಗ ಕುರಿ, ಮೇಕೆ 20 ಸಾವಿರ ರೂ.ಗಿಂತ ಹೆಚ್ಚಿನ ಬೆಲೆ ಬಾಳುತ್ತಿವೆ. ಹೀಗಾಗಿ ಪರಿಹಾರ ಮೊತ್ತವನ್ನು ಕನಿಷ್ಠ 10 ಸಾವಿರ ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

    ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಕುರಿ, ಮೇಕೆ ಸಾಕಣೆಗೆ ಸಹಾಯಧನವನ್ನು 75 ಸಾವಿರ ರೂ.ಗೆ ಹೆಚ್ಚಿಸಬೇಕು. ತೆಲಂಗಾಣದಲ್ಲಿ ಕುರಿ, ಮೇಕೆ ಸಾಕಣೆಗೆ ಶೇ.90 ಸಬ್ಸಿಡಿ, 1.35 ಲಕ್ಷ ರೂ. ಸಹಾಯಧನ ನೀಡಲಾಗುತ್ತಿದೆ. ಹೀಗಾಗಿ ನಮ್ಮಲ್ಲೂ ಸಹಾಯಧನ ಏರಿಸಬೇಕೆಂದು ಸರ್ಕಾರದ ಗಮನ ಸೆಳೆದರು.

    ಸಭೆ ನಡೆಸಿ ತೀರ್ಮಾನ ಕೈಗೊಳ್ಳುವೆ: ಶಾಸಕ ಬಂಡೆಪ್ಪ ಖಾಶೆಂಪುರ ಪ್ರಶ್ನೆಗೆ ಉತ್ತರಿಸಿದ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್, ಪರಿಹಾರ ಮೊತ್ತ ಜಾಸ್ತಿ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಕೂಡಲೇ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುವೆ ಮತ್ತು ಇತರ ಬೇಡಿಕೆಗಳತ್ತಲೂ ಗಮನಹರಿಸುವೆ ಎಂದು ಭರವಸೆ ನೀಡಿದ್ದಾರೆ.

    ವೃತ್ತಿಯಲ್ಲಿ ನಾನೂ ಕುರುಬ: ಖಾಶೆಂಪುರ ಪ್ರಶ್ನೆಗೆ ಉಪ ಪ್ರಶ್ನೆ ಕೇಳಿದ ಸುರಪುರ ಶಾಸಕ ನರಸಿಂಹ ನಾಯಕ(ರಾಜುಗೌಡ), ಬಂಡೆಪ್ಪಣ್ಣ ಹೇಳುತ್ತಿರುವುದಲ್ಲಿ ಸತ್ಯವಿದೆ. ಅವರು ಜಾತಿಯಲ್ಲಿ ಕುರುಬರು, ನಾನು ವೃತ್ತಿಯಲ್ಲಿ ಕುರುಬ. ನಾನು 7000 ಕುರಿ ಸಾಕಿದ್ದೇನೆ. ಅದರಲ್ಲಿ ಈ ವರ್ಷ 1400 ಅಸುನೀಗಿವೆ. ನಾವು ಹೇಗೋ ತಡೆದುಕೊಳ್ಳುತ್ತೇವೆ. ಆದರೆ ಬಡ ಕುರಿಗಾಹಿಗಳಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಸ್ಥಗಿತಗೊಂಡ ಪರಿಹಾರ ನೀಡುವ ಜತೆಗೆ ಮೊತ್ತವನ್ನು 10 ಸಾವಿರ ರೂ.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

    ಬ್ಯಾಂಕ್​ಗಳಲ್ಲಿ ಹಣ ಹೂಡಿಕೆ ಮಾಡಿದರೆ 10 ವರ್ಷಗಳಲ್ಲಿ ಡಬಲ್ ಆಗುತ್ತೆ. ಆದರೆ ಕುರಿ, ಮೇಕೆ ಸಾಕಣೆ ಮಾಡಿದರೆ ಒಂದು ವರ್ಷದಲ್ಲೇ ಡಬಲ್ ಆಗುತ್ತದೆ. ಹೀಗಾಗಿ ಕುರಿ, ಮೇಕೆ ಸಾಕಣೆಗೆ ಉತ್ತೇಜಿಸುವ ಕೆಲಸವನ್ನು ಸರ್ಕಾರ ಮಾಡಬೇಕು.
    | ಬಂಡೆಪ್ಪ ಖಾಶೆಂಪುರ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts