More

    ಕುಗ್ರಾಮದಲ್ಲಿ ಭರವಸೆಯ ಆಶಾಕಿರಣ

    ಸುಭಾಷ ಧೂಪದಹೊಂಡ ಕಾರವಾರ

    ಜಿಲ್ಲಾಧಿಕಾರಿ ಶನಿವಾರ ಕೈಗೊಂಡ ಗ್ರಾಮ ವಾಸ್ತವ್ಯವು ಮೇದಿನಿಯ ಮುಗ್ಧ ಜನರಲ್ಲಿ ಭರವಸೆಯ ಆಶಾಕಿರಣ ಮೂಡಿಸಿದೆ. ಈ ಭಾಗದ ಜನರ ಬೇಡಿಕೆಗಳಿಗೆ ಸ್ಪಂದಿಸುವ ಮಹತ್ತರ ಜವಾಬ್ದಾರಿಯು ಈಗ ಅಧಿಕಾರಿಗಳ ಹೆಗಲೇರಿದೆ.

    ಕುಮಟಾ ತಾಲೂಕಿನ ಸೊಪ್ಪಿನ ಹೊಸಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ದೊಡ್ಮನೆ ಮುಖ್ಯ ರಸ್ತೆಯಿಂದ 8 ಕಿ.ಮೀ. ದೂರದಲ್ಲಿ ಗುಡ್ಡದ ಮೇಲೆ ಕಗ್ಗಾಡಿನಲ್ಲಿರುವ ಊರು ಮೇದಿನಿ.

    ಊರಿನಲ್ಲಿ ಸಮೃದ್ಧ ನೀರು, ಗದ್ದೆ ಮೊದಲಾದವು ಇವೆ. ಆದರೆ, ಇಂದಿನ ಅಗತ್ಯ ನಾಗರಿಕ ಸೌಲಭ್ಯಗಳಿಲ್ಲ. ಇದು ಸಹಜವಾಗಿ ಜನರಲ್ಲಿ ಬೇಸರ ಮೂಡಿಸಿದೆ.

    ಗ್ರಾಮದಲ್ಲಿ ಐದನೇ ತರಗತಿವರೆಗೆ ಓದಲು ವ್ಯವಸ್ಥೆ ಇದೆ. ಹೆಚ್ಚು ಓದಬೇಕು ಎಂದರೆ ಮಕ್ಕಳು ಬೇರೆ ಊರಿಗೆ ಹೋಗಿ ಸಂಬಂಧಿಕರ ಮನೆಯಲ್ಲಿ ಅಥವಾ ಹಾಸ್ಟೆಲ್​ನಲ್ಲಿ ಉಳಿದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದರಿಂದಾಗಿ ಕಲಿಯುವ ಆಸೆ ಇದ್ದರೂ ಹೆಚ್ಚು ಕಲಿಯದೇ ಶಾಲೆ ಬಿಟ್ಟವರು ಸಾಕಷ್ಟು. ಈಗ ಅಂತೂ ಕಷ್ಟಪಟ್ಟು ನಾಲ್ವರು ಯುವಕರು, ಒಬ್ಬ ಯುವತಿ ಈ ಊರಿನಲ್ಲಿ ಪದವಿ ಪಡೆದಿದ್ದಾರೆ.

    ಮಳೆಗಾಲದ ಆರು ತಿಂಗಳು ಈ ಗ್ರಾಮಕ್ಕೆ ಯಾವುದೇ ದೊಡ್ಡ ವಾಹನ ಹೋಗಲು ಸಾಧ್ಯವಿಲ್ಲ. ವಿದ್ಯುತ್ ಕೂಡ ಇರುವುದಿಲ್ಲ. ಹೀಗಾಗಿ, ಹೊರ ಜಗತ್ತಿನ ಸಂಪರ್ಕ ಕಳೆದುಕೊಳ್ಳುತ್ತದೆ ಈ ಗ್ರಾಮ. ಎಲ್ಲೇ ತಿರುಗಿದರೂ ಮೊಬೈಲ್​ಫೋನ್ ಸಂಪರ್ಕ ಸಿಗುವುದಿಲ್ಲ. ತಮಗೆ ಈ ಎಲ್ಲ ಮೂಲಸೌಲಭ್ಯ ನೀಡುವಂತೆ ಅದೆಷ್ಟೋ ಬಾರಿ ತಾಲೂಕು ಕೇಂದ್ರದ ಅಧಿಕಾರಿಗಳನ್ನು ಎಡತಾಕಿ ಮನವಿ ಮಾಡಿದ್ದಾರೆ ಇಲ್ಲಿನ ಜನ. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದರು. ತಾವೇ ಬಂದು ಗ್ರಾಮ ವಾಸ್ತವ್ಯ ಮಾಡುತ್ತೇನೆ ಎಂದು ಅವರು ನೀಡಿದ್ದ ಭರವಸೆಯೂ ಈಡೇರಲಿಲ್ಲ. ಇದರಿಂದ ಊರಿನ ಹತ್ತಾರು ಯುವಕರು ಜೀವನದ ಉತ್ಸಾಹ ಕಳೆದುಕೊಂಡಿದ್ದರು. ಶನಿವಾರ ಗ್ರಾಮ ವಾಸ್ತವ್ಯ ಮಾಡಿದ ಜಿಲ್ಲಾಧಿಕಾರಿ ಹಲವು ಭರವಸೆ ನೀಡಿದ್ದಾರೆ. ಇದರಿಂದ ಆಡಳಿತದ ಮೇಲೆ ವಿಶ್ವಾಸ ಕಳೆದುಕೊಂಡಿದ್ದ ಇಲ್ಲಿನ ಜನರಿಗೆ ನಮ್ಮೂರಿಗೂ ಏನೋ ಒಂದು ಆಗುತ್ತದೆ ಎಂಬ ಭರವಸೆಯಂತೂ ಹುಟ್ಟಿದೆ.

    ಕೊಟ್ಟೆ ಕಡುಬು ಭೋಜನ: ಅಧಿಕಾರಿಗಳು ಹಾಗೂ ಪತ್ರಕರ್ತರಿಗೆ ಶನಿವಾರ ರಾತ್ರಿ ಗ್ರಾಮಸ್ಥರು ಬಾಳೆ ಎಲೆಯಲ್ಲಿ ತಯಾರಿಸಿದ ಕೊಟ್ಟೆ ಕಡುಬು, ಅಕ್ಕಿ ರೊಟ್ಟಿ, ವಡೆ, ಸಣ್ಣಕ್ಕಿ ಅನ್ನ ಮುಂತಾದ ಅಪರೂಪದ ದೇಸೀ ಭೋಜನ ವ್ಯವಸ್ಥೆಯನ್ನು ಮಾಡಿದರು. ರಾತ್ರಿ ಫೈರ್ ಕ್ಯಾಂಪ್ ಮಾಡಿ ಅಧಿಕಾರಿಗಳು ಗ್ರಾಮಸ್ಥರೊಟ್ಟಿಗೆ ರ್ಚಚಿಸಿದರು.

    21 ವರ್ಷದಿಂದ ಇದ್ದಾರೆ ಮಾಸ್ತರು: ಕುಗ್ರಾಮ ಮೇದಿನಿಯಲ್ಲಿ ಕಳೆದ 21 ವರ್ಷದಿಂದ ಗಜಾನನ ಪಟಗಾರ ಎಂಬ ಶಿಕ್ಷಕರು ವಾಸ್ತವ್ಯ ಹೂಡಿ ಮಕ್ಕಳಿಗೆ ಶಿಕ್ಷಣ ನೀಡಿ ಮಾದರಿ ಯಾಗಿದ್ದಾರೆ. ಕುಮಟಾ ತಾಲೂಕಿನ ಮಾಸೂರು ಮೂಲದವರಾದ ಅವರಿಗೆ, ಶಾಲೆಯ ಪಕ್ಕದ ಒಂದು ಸಣ್ಣ ಕೊಠಡಿಯೇ ವಾಸದ ಕೋಣೆಯಾಗಿದೆ. ಶಾಲೆಯಲ್ಲಿ 8 ಮಕ್ಕಳಿದ್ದಾರೆ. ಬಿಸಿಯೂಟದ ದಿನಸಿಯೂ ಗ್ರಾಮಕ್ಕೆ ತಲುಪುವುದಿಲ್ಲ. ಪಟಗಾರ ಮಾಸ್ತರು ವಾರಕ್ಕೆರಡು ದಿನ ಬಂದು ಅದನ್ನು ಹೊತ್ತು 8 ಕಿಮೀ ಘಟ್ಟ ಹತ್ತುತ್ತಾರೆ. ‘ಸರ್ಕಾರ ನನ್ನ ವರ್ಗಾವಣೆ ಮಾಡಲು ಹೋಗಿಲ್ಲ. ನಾನೂ ವರ್ಗಾವಣೆ ಕೇಳಿಲ್ಲ. ಇದುವರೆಗೆ ಸುಮಾರು 250 ಮಕ್ಕಳಿಗೆ ಕಲಿಸಿದ ಸಮಾಧಾನ ನನಗಿದೆ’ ಎಂದು ಹೆಮ್ಮೆಪಡುತ್ತಾರೆ ಅವರು.

    ಮೇದಿನಿ ಕೋಟೆಗೆ ಟ್ರೆಕ್ಕಿಂಗ್: ಮೇದಿನಿ ಗ್ರಾಮದಿಂದ ಸುಮಾರು 2.5 ಕಿಮೀ ಘಟ್ಟ ಹತ್ತಿದರೆ ಸಿದ್ದಾಪುರ ಬಿಳಗಿ ಅರಸರ ಕಾಲದ ಕೋಟೆಯೊಂದಿದೆ. ಅರಸರ ಆಳುಗಳಾಗಿ ಮೇದಿನಿ ಗ್ರಾಮಕ್ಕೆ ಬಂದುಳಿದ ಕುಟುಂಬದವರು ನಾವು ಎಂಬುದು ಗ್ರಾಮಸ್ಥರ ನಂಬಿಕೆ. ಕೋಟೆಯ ಬಗ್ಗೆ ಅವರ ಬಾಯಲ್ಲಿ ಅಪರೂಪದ ದಂತ ಕತೆಗಳಿವೆ. ಭಾನುವಾರ ಬೆಳಗ್ಗೆ ಜಿಲ್ಲಾಧಿಕಾರಿ, ಡಾ.ಹರೀಶ ಕುಮಾರ ಕೆ. ಜಿಪಂ ಸಿಇಒ ಎಂ.ರೋಶನ್ ಹಾಗೂ ಡಿಎಫ್​ಒ ಗಣಪತಿ ಕೋಟೆಗೆ ಟ್ರೆಕ್ಕಿಂಗ್ ಮಾಡಿದರು. ಕೋಟೆಯ ಅವಶೇಷಗಳು, ಅಲ್ಲಿರುವ ಸುರಂಗ, ಮಹಾಸತಿ ಕಲ್ಲುಗಳನ್ನು ನೋಡಿ ಖುಷಿಪಟ್ಟರು.

    ಡಿಸಿಯ ಭರವಸೆಗಳು: *ಗ್ರಾಮದ 54 ಕುಟುಂಬಗಳ ಸರ್ವೆಯನ್ನು ಕುಮಟಾ ಎಸಿ ಮೂಲಕ ಮಾಡಿ, ವೃದ್ಧಾಪ್ಯ ವೇತನದಂತಹ ವೈಯಕ್ತಿಕ ಸವಲತ್ತು ಎಲ್ಲರಿಗೂ ಸಿಗುವಂತೆ ಮಾಡುವುದು. * ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದಲ್ಲಿ ಕಾಮಗಾರಿ ಕೈಗೊಳ್ಳಲು ಅವಕಾಶ. *ಕಾಯಂ ರಸ್ತೆ ಅಭಿವೃದ್ಧಿಗೆ 12 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಒತ್ತಾಯ. * ಶಾಲೆ,ಕಾಲೇಜ್ ಓದುವ ವಿದ್ಯಾರ್ಥಿಗಳಿಗೆ ಆದ್ಯತೆಯಲ್ಲಿ ಹಾಸ್ಟೆಲ್ ಸೌಲಭ್ಯ. * ಮೂವರು ಅಂಗವಿಕಲರಿಗೆ ಮಾಶಾಸನಕ್ಕೆ ಕ್ರಮ. * ಮೇದಿನಿ ಸಣ್ಣಕ್ಕಿಗೆ ಪೇಟೆಂಟ್ ತರಲು ಪ್ರಯತ್ನ. * ತಿಂಗಳಿಗೆ ಎರಡು ಬಾರಿ ವೈದ್ಯರು ಗ್ರಾಮಕ್ಕೆ ಭೇಟಿ ನೀಡುವಂತೆ ಕ್ರಮ. * ಸಭಾ ಭವನ ನಿರ್ವಣಕ್ಕೆ ಶಾಸಕರ ನಿಧಿಯಿಂದ ಅನುದಾನ ಕೊಡಿಸಲು ಯತ್ನ. * ಶಾಶ್ವತ ನೀರಾವರಿ ಯೋಜನೆಗೆ ಕ್ರಮ.

    ಆಗಬೇಕಾದ್ದೇನು?: 1) ಪಡಿತರಕ್ಕಾಗಿ 10 ಕಿ.ಮೀ. ದೂರದ ಸೊಪ್ಪಿನ ಹೊಸಳ್ಳಿಗೆ ಗ್ರಾಮಸ್ಥರು ಹೋಗಬೇಕಿತ್ತು. ಈಗ ಪಡಿತರವನ್ನು ಊರಿಗೇ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಇದು ಶಾಶ್ವತವಾಗಿ ಮುಂದುವರಿಯಬೇಕಿದೆ.

    2) ಬೇಸಿಗೆಯಲ್ಲಿ ಶಾಲೆ ಹಾಗೂ ಕೆಲವು ಮನೆಗಳಿಗೆ ನೀರು ಸಿಗದು. ಗ್ರಾಮದಲ್ಲಿ ಚಿಲುಮೆ ನೀರು ಸಾಕಷ್ಟಿದೆ. ಒಂದು ಹರಿ ನೀರಾವರಿ ಯೋಜನೆಯಾಗಬೇಕಿದೆ.

    3) ಸದ್ಯ ಜಿಲ್ಲಾಧಿಕಾರಿಗಳು 10 ಲಕ್ಷ ರೂ. ಮಂಜೂರು ಮಾಡಿದ್ದು, ಜೆಸಿಬಿ ಬಳಸಿ ಕಚ್ಚಾ ರಸ್ತೆ ಅಗಲೀಕರಣ ಮಾಡಲಾಗಿದೆ. ಆದರೆ, ಇದು ಮಳೆಗಾಲಯದಲ್ಲಿ ಉಳಿಯುವ ಭರವಸೆ ಇಲ್ಲ. ಶೀಘ್ರವೇ ಸಿಮೆಂಟ್ ಅಥವಾ ಡಾಂಬರು ರಸ್ತೆಯನ್ನು ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

    ಮೇದಿನಿಯನ್ನು ಕುಮಟಾ ಪಟ್ಟಣ ಮಾಡಿ ಎಂದರೆ ಆಗದು. ಆದರೆ, ಕನಿಷ್ಠ ಸೌಕರ್ಯ ನೀಡಲು ನಾವು ಬದ್ಧ. ನಾವು ಇಲ್ಲಿ ಕಾಯಂ ಇರುತ್ತೇವೆ ಎಂದಲ್ಲ. ಮೂಲ ಸೌಕರ್ಯಕ್ಕಾಗಿ ಪ್ರಯತ್ನ ಮಾಡಲು ರಾಜಕೀಯೇತರ ತಂಡ ಸಿದ್ಧವಾಗಬೇಕು. | ಡಾ. ಹರೀಶ ಕುಮಾರ ಕೆ. ಡಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts