More

    ಕಿವಿ ಮೇಲೆ ಜನರಿಡುವ ಮೊದಲೇ ಹೂವು ಮುಡಿದ ಕಾಂಗ್ರೆಸ್

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಈಗಾಗಲೇ ಜನರು ಕಾಂಗ್ರೆಸ್​ನವರ ಕಿವಿ ಮೇಲೆ ಹೂವು ಇಡಲು ತೀರ್ವನಿಸಿದ್ದಾರೆ. ಇದನ್ನು ಅರಿತು ಮೊದಲು ತಾವೇ ಕಿವಿಯ ಮೇಲೆ ಹೂವು ಇಟ್ಟುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.

    ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನವರು ಇನ್ಮುಂದೆ ಕಿವಿ ಮೇಲೆ ಹೂವಿಟ್ಟುಕೊಂಡೇ ಓಡಾಡಬೇಕಾಗುತ್ತದೆ. ಇಡೀ ದೇಶದಲ್ಲಿ ಕಾಂಗ್ರೆಸ್, ಜನರಿಂದ ತಿರಸ್ಕೃತಗೊಂಡಿದೆ. ಇಷ್ಟಿದ್ದರೂ ಕಾಂಗ್ರೆಸ್​ನವರು ಬಜೆಟ್ ಮಂಡನೆ ವೇಳೆ ಕಿವಿ ಮೇಲೆ ಹೂವಿಟ್ಟುಕೊಂಡು ಸದನಕ್ಕೆ ಬಂದಿದ್ದಾರೆ. ಎಲ್ಲ ಕಡೆ ಅವರಿಗೆ ಜನರು ಈಗಾಗಲೇ ಹೂವು ಇಟ್ಟಿದ್ದಾರೆ ಎಂದರು.

    ನೆಹರು ನಿಧನರಾದ ಬಳಿಕ ಇಂದಿರಾ ಗಾಂಧಿ ಅವರಪ್ಪನ ಹೆಸರೇಳಿ ಜನರ ಕಿವಿಗೆ ಹೂವಿಟ್ಟರು. ಇಂದಿರಾಗಾಂಧಿ ನಂತರ ರಾಜೀವ್​ಗಾಂಧಿ ಹೂವಿಟ್ಟರು. ಇದನ್ನೆಲ್ಲ ಜನರು ನೋಡಿದ್ದಾರೆ. ಸ್ವಂತ ಶಕ್ತಿಯ ಮೇಲೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಉದಾಹರಣೆ ಇಲ್ಲ ಎಂದು ಹರಿಹಾಯ್ದರು.

    ಪೇಶ್ವೆ ಡಿಎನ್​ಎ ಮೂಲದವರನ್ನು ಸಿಎಂ ಮಾಡಲು ಬಿಜೆಪಿ ಹೊರಟಿದೆ ಎಂಬ ಎಚ್​ಡಿಕೆ ಹೇಳಿಕೆಗೆ ಉತ್ತರಿಸಿದ ಜೋಶಿ, ಇಂಥ ಅಪ್ರಬುದ್ಧ ಹೇಳಿಕೆಗಳಿಗೆ ನಾನು ಉತ್ತರಿಸುವುದಿಲ್ಲ. ಪ್ರಧಾನಿ ಮೋದಿ ಅವರ ಕೈಕೆಳಗೆ ಕೆಲಸ ಮಾಡಲು ನನಗೆ ಅತ್ಯಂತ ಖುಷಿಯಿದೆ. ಅದು ನನ್ನ ಸೌಭಾಗ್ಯವೂ ಹೌದು. ಮೋದಿ ಅವರಂತಹ ನಾಯಕರು ಸಿಗೋದು ಶತಮಾನಕ್ಕೊಬ್ಬರು. ಮೋದಿ ನೇತೃತ್ವದಲ್ಲಿ ಭಾರತ ನಂಬರ್ ಒನ್​ನತ್ತ ದಾಪುಗಾಲು ಹಾಕುತ್ತಿದೆ ಎಂದು ಹೇಳಿದರು. ಕಲ್ಲಿದ್ದಲು ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಗಳಾಗಿದ್ದೇವೆ. ಇಡೀ ವಿಶ್ವವೇ ಮೋದಿ ಅವರನ್ನು ನಿಬ್ಬೆರಗಾಗಿ ನೋಡುತ್ತಿದೆ. ಹೀಗಿರುವಾಗ ನಾನು ರಾಜ್ಯ ರಾಜಕಾರಣದತ್ತ ಬರುವುದಿಲ್ಲ. ನಾನು ಮುಖ್ಯಮಂತ್ರಿ ಆಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

    ಸಿದ್ಧರಾಮಯ್ಯ ಅವರನ್ನು ಮುಗಿಸಬೇಕೆಂಬ ಅಶ್ವತ್ಥನಾರಾಯಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಶ್ವತ್ಥನಾರಾಯಣ ಅವರೇ ಈ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ಆ ಅರ್ಥದಲ್ಲಿ ಹೇಳಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮುಗಿಸಬೇಕೆಂದು ಹೇಳಿದ್ದಾರೆ. ಹೀಗಾಗಿ ಅದನ್ನು ಬೆಳೆಸಿಕೊಂಡು ಹೋಗುವುದು ಸರಿಯಲ್ಲ. ಬಾಯಿ ತಪ್ಪಿ ಈ ರೀತಿ ಹೇಳಿಕೆ ನೀಡಿದ್ದಾರೆ. ಸಿದ್ಧರಾಮಯ್ಯ ಅವರು ಹಲವಾರು ಬಾರಿ ಮೋದಿ ಸೇರಿ ಬಿಜೆಪಿ ನಾಯಕರಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಆರೋಪ-ಪ್ರತ್ಯಾರೋಪ ತಾರಕಕ್ಕೇರಿವೆ. ಈ ಮಟ್ಟಕ್ಕಿಳಿದು ಮಾತನಾಡುವುದು ಯಾರಿಗೂ ತರವಲ್ಲ ಎಂದರು.

    ಜೋಶಿ ಕಚೇರಿಯಲ್ಲಿಯೇ ಭ್ರಷ್ಟಚಾರ ನಡೆಯುತ್ತಿದೆ ಎಂಬ ಬೋಜೇಗೌಡ ಆರೋಪ ತಿರಸ್ಕರಿಸಿದ ಜೋಶಿ, ಬೋಜೇಗೌಡ ಆಧಾರ ರಹಿತ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ಶೀಘ್ರವೇ ನೋಟಿಸ್ ಕಳಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts