More

    ಕಾಲಭೈರವೇಶ್ವರಸ್ವಾಮಿಗೆ ಎಚ್‌ಡಿಕೆ ಪೂಜೆ : ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಆರ್ಶೀವಾದ ಪಡೆದ ಮಾಜಿ ಸಿಎಂ

    ಮಂಡ್ಯ : ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಭೇಟಿ ನೀಡಿ ಶ್ರೀ ಕಾಲಭೈರವೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.


    ಆದಿಚುಂಚನಗಿರಿ ಮಠಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕುಟುಂಬದವರು ಕಳೆದ ಅಮಾವಾಸ್ಯೆಯಂದು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದರು. ಆದರೆ ಆ ವೇಳೆ ಎಚ್‌ಡಿಕೆ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಭಾನುವಾರ ಶ್ರೀ ಕಾಲಭೈರವೇಶ್ವರಸ್ವಾಮಿಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.


    ಶ್ರೀ ಕಾಲಭೈರವೇಶ್ವರಸ್ವಾಮಿ ಹಾಗೂ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಪ್ರತಿಮೆಯಿರುವ ರಥವನ್ನು ಮಠದ ಒಳಾಂಗಣದಲ್ಲಿ ಎಳೆದ ಎಚ್‌ಡಿಕೆ, ಬಳಿಕ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಗದ್ದುಗೆಗೆ ತೆರಳಿ ಪೂಜೆ ಸಲ್ಲಿಸಿ ಮಠದಲ್ಲಿಯೇ ಪ್ರಸಾದ ಸ್ವೀಕರಿಸಿದರು. ನಂತರ ಶ್ರೀಗಳೊಂದಿಗೆ 20 ನಿಮಿಷಗಳ ಕಾಲ ಗೌಪ್ಯ ಮಾತುಕತೆ ನಡೆಸಿದರು.
    ಶಾಸಕ ಸುರೇಶ್‌ಗೌಡ, ಮಾಜಿ ಎಂಎಲ್ಸಿ ಕೆ.ಟಿ.ಶ್ರೀಕಂಠೇಗೌಡ, ಮನ್ಮುಲ್ ನಿರ್ದೇಶಕ ನೆಲ್ಲಿಗೆರೆಬಾಲು, ಮುಖಂಡರಾದ ಗೌರೀಶ್, ಸದ್ದಾಂ, ಮಂಜುನಾಥ್ ಇದ್ದರು.


    ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ನನ್ನ ಸಮಾಜದ ಧಾರ್ಮಿಕ ಕ್ಷೇತ್ರ ಆದಿಚುಂಚನಗಿರಿ. ನಮ್ಮ ಕುಟುಂಬದ ರಕ್ಷಕ ಕಾಲಭೈರವೇಶ್ವರಸ್ವಾಮಿಯಾಗಿರುವುದರಿಂದ ಆತನ ದರ್ಶನಕ್ಕೆ ಬಂದಿದ್ದೇನೆ. ಅಮಾವಾಸ್ಯೆ ಪೂಜೆಗೆ ನಾನು ಬರಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಮತದಾನಕ್ಕೂ ಮುನ್ನ ಕಾಲಭೈರವೇಶ್ವರಸ್ವಾಮಿ ದರ್ಶನ ಹಾಗೂ ಶ್ರೀಗಳ ಆಶೀರ್ವಾದ ಪಡೆಯಲು ಕ್ಷೇತ್ರಕ್ಕೆ ಬಂದಿದ್ದೇನೆ. ಸೋಮವಾರದಿಂದ ರಾಜ್ಯಾದ್ಯಂತ ಪ್ರವಾಸ ಮುಂದುವರಿಯುತ್ತದೆ. ರಾಜ್ಯದಲ್ಲಿ ನಮಗೆ ಸ್ವತಂತ್ರ ಸರ್ಕಾರ ರಚನೆ ಮಾಡಲು ಶಕ್ತಿ ಕೊಡು ಎಂದು ಕಾಲಭೈರವೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.


    ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡೂ ರಾಷ್ಟ್ರೀಯ ಪಕ್ಷಗಳಿಂದ ನಾಡಿನ ಜನತೆಯ ಸಮಸ್ಯೆಗಳಿಗೆ ಪರಿಹಾರವಿಲ್ಲದಂತಾಗಿದ್ದು, 2023ರ ಚುನಾವಣೆಯಲ್ಲಿ ಜನತಾ ದಳವೇ ಅನಿವಾರ್ಯ ಎಂದು ಜನರಿಗೆ ಅರಿವಾಗಿರುವ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.


    ಡಾ.ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಜೆಡಿಎಸ್ ಪಕ್ಷ ಸಮಾನತೆ ತರಲು ಪ್ರಯತ್ನಿಸುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ದಾಳಿ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಪ್ರಧಾನಿ ಸೇರಿದಂತೆ ಕೇಂದ್ರದ ಮಂತ್ರಿಗಳು ರಾಜ್ಯದಲ್ಲಿಯೇ ಟೀಕಾಣಿ ಹೂಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ಸಹ ರಾಜ್ಯದಲ್ಲಿಯೇ ಬೀಡುಬಿಟ್ಟಿದ್ದಾರೆ. ಆದರೆ ಕರ್ನಾಟಕದ ಜನತೆಯ ದುರಾದೃಷ್ಟ. ಇಲ್ಲಿನ ಸಮಸ್ಯೆ ಬಗ್ಗೆ ಎರಡೂ ಪಕ್ಷದವರು ಮಾತನಾಡುತ್ತಿಲ್ಲ.

    ಪ್ರಧಾನಮಂತ್ರಿಗಳು ಕೇವಲ ಅವರನ್ನು ನಿಂದಿಸಿದ ಬಗ್ಗೆ ಹೇಳುತ್ತಿದ್ದಾರೆ. ಕಾಂಗ್ರೆಸ್‌ನವರು ವಿಷ ಸರ್ಪ ಎಂದು ಮಾತನಾಡುತ್ತಿದ್ದಾರೆ. ರಾಜ್ಯದ ಸಮಸ್ಯೆಗಳ ಬಗ್ಗೆ ಇಬ್ಬರೂ ಮಾತಾಡುತ್ತಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾತಾಡುತ್ತಿಲ್ಲ. ಕರ್ನಾಟಕ ಸಮಸ್ಯೆಗಳ ಬಗ್ಗೆ ಮಾತಾಡುತ್ತಿಲ್ಲ. ಬೆಳಗಾವಿಯ ಗಡಿ ವಿಚಾರದ ಬಗ್ಗೆ ಮೌನವಹಿಸಿದ್ದಾರೆ. ಕಾಂಗ್ರೆಸ್ ಎರಡು ಸಾವಿರ ರೂ. ಗ್ಯಾರಂಟಿ ಸೇರಿ ಇನ್ನೂ ನಾಲ್ಕು ಭರವಸೆಯನ್ನು ಬೇರೆ ರಾಜ್ಯದಲ್ಲಿ ಏಕೆ ಘೋಷಣೆ ಮಾಡಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಒಟ್ಟಾರೆ ಎರಡು ರಾಷ್ಟ್ರೀಯ ಪಕ್ಷಗಳಿಂದ ನಾಡಿನ ಜನರ ಸಮಸ್ಯೆಗಳಿಗೆ ಪರಿಹಾರವಿಲ್ಲದಂತಾಗಿದ್ದು, ಜೆಡಿಎಸ್ ಬೆಂಬಲಿಸಲಿದ್ದಾರೆ ಎಂದರು.


    ಸಾಮ್ರಾಟ ಆರ್.ಅಶೋಕ್ ಅವರು, ‘ ಜೆಡಿಎಸ್ ಲಾಟರಿ ನಿರೀಕ್ಷೆ ಮಾಡ್ತಾ ಇದೆ ಅಂತ ಹೇಳಿದ್ದಾರೆ. ನಾವು ಯಾವ ಲಾಟರಿ ನಿರೀಕ್ಷೆ ಮಾಡುತ್ತಿಲ್ಲ. ಜೆಡಿಎಸ್‌ಗೆ 20 ಸೀಟು ಬರುತ್ತಾರೆ ಎಂದು ಹೇಳುತ್ತಾರೆ. ಆದರೆ ಬಿಜೆಪಿಗೆ ಎಷ್ಟು ಸೀಟು ಬರುತ್ತೆ ಎಂದು ಮೊದಲು ಅವರು ನೋಡಿಕೊಳ್ಳಲಿ. ಮಂಡ್ಯ ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾಗ ಅಶೋಕ್ ಸಾಮ್ರಾಟ್ ಎಲ್ಲಿ ಹೋಗಿದ್ರು. ನಾನು ಸಿಎಂ ಆಗಿದ್ದಾಗ ಬಜೆಟ್ ಘೋಷಣೆ ಮಾಡಿದ್ರೆ ‘ಮಂಡ್ಯ ಬಜೆಟ್’ ಎಂದು ಟೀಕಿಸಿದ್ದರು. ಈಗ ಮಂಡ್ಯಕ್ಕೆ ಬಂದು ಬಿಜೆಪಿ ಏನು ಮಾಡುತ್ತಿದೆ ಎಂಬುದನ್ನು ಜನತೆ ಅರಿತಿದ್ದಾರೆ. ಚುನಾವಣೆಯ ಸಂದರ್ಭ ಜನತೆ ಈ ಎಲ್ಲದಕ್ಕೂ ಉತ್ತರ ನೀಡಲಿದ್ದಾರೆ. ಚನ್ನಪಟ್ಟಣಕ್ಕೆ ಪ್ರಧಾನಿ ಮೋದಿ ಇನ್ನೂ ಮೂರು ನಾಲ್ಕು ಬಾರಿ ಬರಲಿ. ನನಗೆ ಏನು ಸಮಸ್ಯೆ ಇಲ್ಲ.ಯಾವ ಆತಂಕವೂ ಇಲ್ಲ. ಬಂದು ಚನ್ನಪಟ್ಟಣ ಹೇಗಿದೆ ಎಂದು ನೋಡಿಕೊಂಡು ಹೋಗಲಿ ಎಂದು ತಿರುಗೇಟು ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts