More

    ಕಾಲಘಟ್ಟದ ಕೊನೆಯಲ್ಲಿದ್ದರೂ ಜೆಡಿಎಸ್ ಉಳಿಸುವ ಉತ್ಸಾಹವಿದೆ

    ಹುಬ್ಬಳ್ಳಿ: ನಾನೇನು ಮತ್ತೆ ಪ್ರಧಾನಿ ಆಗುವುದಿಲ್ಲ. ಕಾಲಘಟ್ಟದ ಕೊನೆಯಲ್ಲಿದ್ದೇನೆ. ಪಕ್ಷ ಉಳಿಸುವ ಉತ್ಸಾಹ ಇನ್ನೂ ಇದೆ. ಇರುವಷ್ಟು ದಿನ ನ್ಯಾಯದ ಪರ ಹೋರಾಟ ಮಾಡುತ್ತೇನೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.

    ಜೆಡಿಎಸ್ ವತಿಯಿಂದ ನಗರದ ವಾಸವಿ ಮಹಲ್​ನಲ್ಲಿ ಭಾನುವಾರ ಏರ್ಪಡಿಸಿದ್ದ ಮುಂಬೈ ಕರ್ನಾಟಕದ ಏಳು ಜಿಲ್ಲೆಗಳ ಬೆಳಗಾವಿ ವಿಭಾಗ ಮಟ್ಟದ ತರಬೇತಿ ಶಿಬಿರ ಮತ್ತು ಕಾರ್ಯಕರ್ತರ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಮಾತನಾಡಿದರು. ಯಾವ ನಾಯಕರು ಯಾವಾಗ ಏನು ಮಾತನಾಡಿದರು ಎಂಬುದು ಗೊತ್ತಿದೆ. ಬಿ.ಎಸ್. ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಅಪ್ಪ-ಮಕ್ಕಳು ನಿಮ್ಮನ್ನು ಮೂಲೆಗುಂಪು ಮಾಡುತ್ತಾರೆ ಅಂದರು. ಬಿಜೆಪಿ ಇಂದು ಅಧಿಕಾರಕ್ಕೆ ಬರಲು ಕಾರಣ ಯಾರೆಂಬುದು ತಿಳಿದಿದೆ. ದೇವೇಗೌಡರು ಮುಸ್ಲಿಮರ ವಿರೋಧಿ ಅಂದರು. ಆದರೆ, ನಾನು ದೇಶಕ್ಕೆ ಮತ್ತು ರಾಜ್ಯಕ್ಕೆ ಏನೇನು ಕೊಟ್ಟಿದ್ದೇನೆ ಎಂಬುದು ಜನರಿಗೆ ಗೊತ್ತಿದೆ ಎಂದು ಚಾಟಿ ಬೀಸಿದರು.

    ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಮಾತನಾಡಿ, ಮುಂದೆ ಕಾರ್ಯಕರ್ತರ ಸಮಾವೇಶವನ್ನು ಕಲ್ಯಾಣ ಕರ್ನಾಟಕದ ರಾಯಚೂರು, ಮಧ್ಯಕರ್ನಾಟಕದ ದಾವಣಗೆರೆ, ಕರಾವಳಿಯ ಉಡುಪಿಯಲ್ಲಿ ನಡೆಯಲಿದೆ. ಹಾಸನ ಮತ್ತು ಮಂಡ್ಯ ಜಿಲ್ಲೆಯನ್ನು ಪಕ್ಕಕ್ಕೆ ಇಟ್ಟು ಹೋಗೋಣ ಎಂದು ದೇವೇಗೌಡರಿಗೆ ಹೇಳಿದ್ದೆ. ಹಾಗೆಯೇ ಮಾಡುತ್ತಿದ್ದು, ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಾಗುತ್ತಿದೆ ಎಂದರು.

    ಎಂಎಲ್​ಸಿ ಬಸವರಾಜ ಹೊರಟ್ಟಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಉತ್ತಮವಾಗಿ ಸಂಘಟನೆಯಾಗುತ್ತಿದೆ. ಜನರು ತಮ್ಮ ಕೆಲಸ ಆಗಲಿಲ್ಲ ಎಂದರೆ ಕಾಡುತ್ತಾರೆ. ಒಂದೊಂದು ಸಲ ರಾಜಕಾರಣ ಸಾಕು ಎನಿಸುತ್ತದೆ. ಆದರೆ, ನಾನು ದೇವೇಗೌಡರನ್ನು ನೋಡಿ ರಾಜಕಾರಣದಲ್ಲಿದ್ದೇನೆ. ನನ್ನ ಉಸಾಬರಿಯೂ ಗೌಡರೊಟ್ಟಿಗಿದೆ ಎಂದರು. ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ ಮಾತನಾಡಿದರು. ವಿಪ ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಶಿವಶಂಕರ ಕಲ್ಲೂರ ಪರ ಪ್ರಚಾರಕ್ಕಾಗಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು. ಗುರುರಾಜ ಹುಣಸೀಮರದ, ತಿಪ್ಪೇಸ್ವಾಮಿ, ಶಿವಣ್ಣ ಹುಬ್ಬಳ್ಳಿ, ಇತರರಿದ್ದರು.

    ಮಹಿಳಾ ಮೀಸಲಾತಿ ಕಿಚ್ಚು: ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಮತ್ತೆ ಹೋರಾಟಕ್ಕಿಳಿಯುವುದಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪ್ರಕಟಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಮತ್ತು ಬೆಂಗಳೂರಿನಿಂದ ಬಹಳಷ್ಟು ಜನರನ್ನು ದೆಹಲಿಗೆ ಕರೆದೊಯ್ದು ಅಲ್ಲಿನ ಜಂತರ್ ಮಂತರ್​ನಲ್ಲಿ ಶಾಂತಿಯುತ ಹೋರಾಟ ಮಾಡಲಾಗುವುದು. ಹುಬ್ಬಳ್ಳಿ ಮತ್ತು ಬೆಂಗಳೂರಿನಿಂದ ಎರಡು ರೈಲ್ವೆ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದ್ದು, ಅಂದಾಜು ನಾಲ್ಕೂವರೆ ಸಾವಿರ ಜನರು ದೆಹಲಿ ತಲುಪಲಿದ್ದಾರೆ. ಇದಕ್ಕೂ ಮೊದಲು ಎರಡೂ ಕಡೆ ಸಭೆ ನಡೆಸಿ ರ್ಚಚಿಸಿ ಶೀಘ್ರವೇ ದಿನಾಂಕ ನಿಗದಿಪಡಿಸಲಾಗುವುದು. ಒಡಿಶಾ ಸಿಎಂ ನವೀನ್ ಪಟ್ನಾಯಕ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿ ಬಹಳಷ್ಟು ರಾಜ್ಯದ ಸಿಎಂ ಜತೆ ಈ ಕುರಿತು ರ್ಚಚಿಸಲಾಗಿದೆ ಎಂದರು. ನೈಋತ್ಯ ರೈಲ್ವೆ ಸಂಬಂಧ ನನ್ನದೇನೂ ತಪ್ಪಿಲ್ಲ. ಎಲ್ಲ ಮಂಡಳಿಯವರು ಬೆಂಗಳೂರಿಗೆ ತರಬೇಕು ಎಂದಿದ್ದರು. ಅದಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿರಲಿಲ್ಲ. ಆದರೆ, ನನಗೆ ಆಗಲೇ ಉತ್ತರ ಕರ್ನಾಟಕಕ್ಕೆ ರೈಲ್ವೆ ವಿಭಾಗ ತಪ್ಪಿಸಿ ಮೋಸ ಮಾಡಿದರು ಎಂದು ಆರೋಪಿಸಿದರು. ನಾನು ಹಾಗೆ ಮಾಡಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts