More

    ಕಾರ್ಯಕಾರಿಣಿಗೆ ಅಡ್ಡಿಯಾಗದೆ ಕರೊನಾ?

    ಬೆಳಗಾವಿ: ತೀವ್ರ ಸಂಕಷ್ಟದಲ್ಲಿರುವ ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆ ಆಲಿಸಲು ಸುವರ್ಣಸೌಧದಲ್ಲಿ ಅಧಿವೇಶನ ನಡೆಸಿ ಎಂದರೆ ಸರ್ಕಾರ ಕೋವಿಡ್-19 ನೆಪ ಹೇಳುತ್ತಿದೆ. ಆದರೆ, ಇದೀಗ ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಆಯೋಜಿಸಿದೆ. ಈ ಸಭೆಗೆ ಕರೊನಾ ಅಡ್ಡಿಯಾಗುವುದಿಲ್ಲವೇ ಎಂದು ಶಾಸಕಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ.

    ನಗರದ ತಮ್ಮ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಉ.ಕ. ಭಾಗದಲ್ಲಿ ಉಂಟಾದ ಪ್ರವಾಹ, ಧಾರಾಕಾರ ಮಳೆಯಿಂದ ಲಕ್ಷಾಂತರ ನೆರೆ ಸಂತ್ರಸ್ತರು ಸಂಕಷ್ಟದಲ್ಲಿ ದಿನ ಕಳೆಯುತ್ತಿದ್ದಾರೆ. ವರ್ಷ ಕಳೆದರೂ ನೇಕಾರರು, ಕೂಲಿ ಕಾರ್ಮಿಕರು, ರೈತರಿಗೆ, ಮನೆ ಕಳೆದುಕೊಂಡವರಿಗೆ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಸಂಬಂಧಿಸಿದ ಎಲ್ಲ ಸಚಿವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ವಾಗುತ್ತಿಲ್ಲ ಎಂದು ದೂರಿದರು.

    ಸಂಸದರ ಮೌನ ಏಕೆ?: ಅತಿವೃಷ್ಟಿಯಿಂದ 360 ಕೆರೆಗಳು ಹಾನಿಗೊಂಡಿವೆ. 15 ಸಾವಿರ ಕಿ.ಮೀ. ರಸ್ತೆಗಳು ಹಾಳಾಗಿವೆ. ಲಕ್ಷಾಂತರ ಎಕರೆ ಕೃಷಿ ಪ್ರದೇಶದ ಬೆಳೆಗಳು ಜಲಾವೃತಗೊಂಡು ಹಾನಿಯಾಗಿವೆ. ಆದರೆ, ಪರಿಹಾರ ಬಂದಿಲ್ಲ. ರಾಜ್ಯದಲ್ಲಿ ಅತಿವೃಷ್ಟಿಯಿಂದ 50 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳುತ್ತಿದ್ದಾರೆ. ಆದರೂ ಕೇಂದ್ರ ಸರ್ಕಾರದಿಂದ ಒಂದು ರೂ. ಪರಿಹಾರ ತರಲು ಅವರದೇ 25 ಸಂಸದರು ರಾಜ್ಯದಲ್ಲಿದ್ದರೂ ಸಾಧ್ಯವಾಗಿಲ್ಲ. ಪರಿಹಾರ ನೀಡುವಂತೆ ಧ್ವನಿ ಎತ್ತುವ ಕೆಲಸ ಸಹ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

    ನನ್ನದು ಏಕಾಂಗಿ ಹೋರಾಟ

    ರಾಜಕೀಯದಲ್ಲಿ ಷಡ್ಯಂತ್ರ ಮಾಡುವುದು ಸಾಮಾನ್ಯ ವಿಷಯ. ನನ್ನ ರಾಜಕೀಯ ಜೀವನದಲ್ಲಿ ಏಕಾಂಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದೇನೆ. ಕಾಂಗ್ರೆಸ್‌ನಿಂದ ಬಿಜೆಪಿ ಸೇರಿರುವ ಜಿಲ್ಲಾ ಪಂಚಾಯಿತಿ ಸದಸ್ಯರು ಚುನಾವಣೆ ಸಂದರ್ಭದಲ್ಲಿ ನನ್ನ ವಿರುದ್ಧ ಕೆಲಸ ಮಾಡಿದ್ದಾರೆ. ಅವರಿಂದ ಪಕ್ಷಕ್ಕೆ ಲಾಭ, ನಷ್ಟ ಏನೂ ಇಲ್ಲ. ನನ್ನನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಇನ್ನು, ಮರಾಠ ಸೇರಿ ಯಾವುದೇ ಅಭಿವೃದ್ಧಿ ನಿಗಮ ರಚಿಸಿದರೂ ಅದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಅದು ರಾಜಕೀಯ ಅಜೆಂಡಾ ಆಗಬಾರದು. ಈಗಾಗಲೇ ನಮ್ಮ ಅಧಿಕಾರ ಅವಧಿಯಲ್ಲಿ ಇಂತಹ ಸಾಹಸಕ್ಕೆ ಕೈ ಹಾಕಿ ಸಾರ್ವಜನಿಕರ ಕ್ಷಮೆ ಕೇಳಿದ್ದೇವೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts