More

    ಕಾಮಗಾರಿ ಪೂರ್ಣಗೊಂಡು 7 ವರ್ಷಗಳಾದರೂ ಹರಿಯದ ನೀರು, ವ್ಯರ್ಥವಾಯಿತೇ ನೆಕ್ಕುಂದಿ ಯೋಜನೆ

    ಚಿಂತಾಮಣಿ: ನಗರಕ್ಕೆ ನೆಕ್ಕುಂದಿ ಕೆರೆಯಿಂದ ಕುಡಿಯುವ ನೀರು ಪೂರೈಸುವ ಕಾಮಗಾರಿ ಪೂರ್ಣಗೊಂಡು 7 ವರ್ಷಗಳೇ ಕಳೆದರೂ ಇದುವರೆಗೂ ನಗರಕ್ಕೆ ನೀರು ಪೂರೈಕೆ ಮಾಡಿಲ್ಲ, ಕಾಮಗಾರಿಗೆ ವ್ಯಯಿಸಲಾದ 4.42 ಕೋಟಿ ರೂ. ನೀರಿನಲ್ಲಿ ಹೋಮ ಮಾಡಿದಂತಾಗಿದ್ದು, ಯೋಜನೆಯೇ ವ್ಯರ್ಥವಾದಂತಿದೆ.

    ಅಂದಾಜು 126 ಎಕರೆ ವಿಸ್ತೀರ್ಣ ಇರುವ ನೆಕ್ಕುಂದಿ ಕೆರೆಯಲ್ಲಿ ಸಂಗ್ರಹವಾಗುವ ಮಳೆ ನೀರನ್ನು ಶುದ್ಧೀಕರಿಸಿ ಪೂರೈಕೆ ಮಾಡಲು ಯೋಜನೆ ರೂಪಿಸಿ ಕಾಮಗಾರಿ ಹಾಗೂ ಕೆರೆ ಅಭಿವೃದ್ಧಿಗೆ 4.42 ಕೋಟಿ ರೂ. ವೆಚ್ಚ ಮಾಡಲಾಯಿತು, 2013ರಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು, ಈ ವೇಳೆ ಪ್ರಾಯೋಗಿಕವಾಗಿ ನೀರನ್ನು ಒಂದು ತಿಂಗಳ ಕಾಲ ಶುದ್ಧೀಕರಿಸಿ ಪೂರೈಸಿದ್ದು ಬಿಟ್ಟರೆ ಮತ್ತೆ ಕೆರೆ ನೀರು ನಗರದತ್ತ ಹರಿಯಲೇ ಇಲ್ಲ, ಅಂದು ಸ್ಥಗಿತಗೊಂಡ ನೀರು ಪೂರೈಕೆ, 7 ವರ್ಷಗಳು ಕಳೆದರೂ ಆರಂಭವಾಗದೇ ನಗರದ ಹಾಹಾಕಾರ ನೀಗಿಸಲು ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ.

    ಕೆರೆಗೆ ಒಳಚರಂಡಿ ನೀರು ಸೇರದಂತೆ ತಡೆಯಲು ಯೋಜನೆ ತಯಾರಿಸಲಾಗಿತ್ತು. ಕೊಳಚೆ ನೀರನ್ನು ಚೊಕ್ಕರೆಡ್ಡಿಹಳ್ಳಿ ಕೆರೆಗೆ ಬಿಡಲು ಅಂದಾಜು 6.03 ಕೋಟಿ ರೂ. ವೆಚ್ಚದಲ್ಲಿ ಪೈಪ್‌ಲೆನ್ ಕೂಡ ಅಳವಡಿಸಲಾಯಿತು. ಈ ಕೊಳಚೆ ನೀರನ್ನು ಶುದ್ಧೀಕರಿಸಲು ಘಟಕ ನಿರ್ಮಾಣಕ್ಕೆ ಮುಂದಾಗಿ ಜಾಗ ಗುರುತಿಸಲಾಯಿತು, ಆದರೆ ಜಾಗ ಖರೀದಿಸದ ಹಿನ್ನೆಲೆಯಲ್ಲಿ ಘಟಕ ನಿರ್ಮಾಣಗೊಂಡಿಲ್ಲ.

    ನೆಕ್ಕುಂದಿ ಕೆರೆಗೆ ನಗರದ ಒಳಚರಂಡಿ ನೀರು ಸೇರುತ್ತಿದೆ. ನೀರಿನ ಗುಣಮಟ್ಟ ಪರೀಕ್ಷೆ ಮಾಡಬೇಕು ಹಾಗೂ ನಗರಸಭೆ ಅಧಿಕಾರಿಗಳು ತ್ಯಾಜ್ಯ ಕೆರೆ ಸೇರದಂತೆ ಕ್ರಮ ವಹಿಸಬೇಕು.
    ನಾಗರಾಜ್ ಅಗ್ರಹಾರ ಬಡಾವಣೆ ನಿವಾಸಿ.

    ಕೆರೆಗೆ ತ್ಯಾಜ್ಯ: ನೆಕ್ಕುಂದಿ ಕೆರೆಗೆ ನಗರದ ತ್ಯಾಜ್ಯ ಸೇರುತ್ತಿದೆ. ಇದನ್ನು ತಪ್ಪಿಸಲು ಆರಂಭವಾದ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ತ್ಯಾಜ್ಯ ಚರಂಡಿ ಮೂಲಕ ನೇರವಾಗಿ ಕೆರೆಯಂಗಳ ಸೇರುತ್ತಿದೆ. ಕೆರೆ ಸುತ್ತಮುತ್ತಲಿನ ತೋಟಗಳ ನೀರೂ ಸಹ ಸೇರುತ್ತಿದೆ, ಕೆರೆಯಂಗಳ ಸಹ ಗಿಡ-ಗಂಟಿಗಳು ಬೆಳೆದು ಮುಚ್ಚಿಕೊಂಡಿದ್ದು ನೀರು ಕಲುಷಿತಗೊಂಡು ಕುಡಿಯಲು ಯೋಗ್ಯವಾಗಿಲ್ಲ. ಕೆರೆ ಪಕ್ಕದಲ್ಲಿ ಹಾದು ಹೋಗಿರುವ ಒಳಚರಂಡಿಯ ಮ್ಯಾನ್‌ಹೋಲ್ ಅನ್ನು ಕೆಲವು ರೈತರು ತೆರೆದು ಆ ನೀರನ್ನೇ ಕೃಷಿಗೆ ಬಳಸುತ್ತಿದ್ದು, ಇದೂ ಸಹ ಕೆರೆ ಸೇರುತ್ತಿದೆ.

    ಒಳಚರಂಡಿ ಶುದ್ಧೀಕರಣ ಘಟಕ ಸ್ಥಾಪನೆಗೆ ಜಮೀನು ಖರೀದಿಸಲು ಮುಂದಾದ ವೇಳೆ ರೈತರು ಅಧಿಕ ಮೊತ್ತಕ್ಕೆ ಬೇಡಿಕೆ ಇಟ್ಟರು. ಅಧಿಕ ಹಣಕ್ಕೆ ಬೇಡಿಕೆ ಇಟ್ಟರೆ ಜಮೀನು ಮುಟ್ಟುಗೋಲು ಹಾಕಿಕೊಂಡು ಘಟಕ ನಿರ್ಮಿಸಿ ಎಂದು ಸರ್ಕಾರ ಸೂಚಿಸಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಕಡಿಮೆ ಜಮೀನಿನಲ್ಲಿ ಘಟಕ ಸ್ಥಾಪಿಸಲು ಚಿಂತನೆ ನಡೆಯುತ್ತಿದೆ.
    ಉಮಾಶಂಕರ್ ನಗರಸಭೆ ಪ್ರಭಾರಿ ಪೌರಾಯುಕ್ತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts