More

    ಕಾಂಗ್ರೆಸಿಗರ ಬೈಗುಳಕ್ಕೆ ಮತಾಸ್ತ್ರ ಉತ್ತರ

    ಬೀದರ್: ಕಾಂಗ್ರೆಸ್ ನಾಯಕರು ನನ್ನ ಮೇಲೆ ನಿರಂತರ ಬೈಗುಳ ಸುರಿಮಳೆಗೈಯುತ್ತಿದ್ದಾರೆ. ಚೌಕಿದಾರ್ ಚೋರ್, ಮೋದಿ ಚೋರ್ ಹಿಡಿದು ಏನೇನೋ ಅಂದಿದ್ದಾರೆ. ಇದ್ಯಾವುದಕ್ಕೂ ನಾನು ತಲೆಕೆಡಿಸಿಕೊಂಡಿಲ್ಲ. ಕರ್ನಾಟಕ ಕಿ ಜನತಾ ಗಾಲಿಯೊಂಕಾ ಜವಾಬ್ ವೋಟ್‌ಸೇ ದೆಂಗೆ (ರಾಜ್ಯದ ಜನರು ಬಿಜೆಪಿಗೆ ಮತ ಹಾಕಿ ಇವರ ಬೈಗುಳಿಗೆ ತಕ್ಕ ಉತ್ತರ ನೀಡಲಿದ್ದಾರೆ) ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ಮಹಾತ್ಮ ಬಸವಣ್ಣನವರ ಕರ್ಮಭೂಮಿ ಬೀದರ್ ಜಿಲ್ಲೆ ಹುಮನಾಬಾದ್ ಬಳಿ ಶನಿವಾರ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ವಿಧಾನಸಭಾ ಚುನಾವಣೆ ಯುದ್ಧಕ್ಕೆ ಅಂತಿಮ ಹಂತದ ಕಹಳೆ ಮೊಳಗಿಸಿ ಮಾತನಾಡಿದ ಅವರು, ನಾನು ಸಿದ್ಧಪಡಿಸಿರುವ ಪಟ್ಟಿಯಲ್ಲಿ ಈವರೆಗೆ ಕಾಂಗ್ರೆಸಿಗರ ೯೧ ಬೈಗುಳ ಸೇರಿವೆ. ಕಾಂಗ್ರೆಸಿಗರು ಬೈದಷ್ಟು ನನಗೆ ಜನರ ಪ್ರೀತಿ, ಆಶೀರ್ವಾದದ ಶ್ರೀರಕ್ಷೆ ಹೆಚ್ಚೆಚ್ಚು ಸಿಗುತ್ತಿದೆ. ಇದು ದಿನದ ೨೪ ಗಂಟೆ ನನಗೆ ಜನಸೇವೆ ಮಾಡಲು ಶಕ್ತಿ ತುಂಬುತ್ತಿದೆ. ಅವರು ನನ್ನತ್ತ ಕೆಸರು ಎರಚಿದಷ್ಟು ಕಮಲ ಇನ್ನಷ್ಟು ಸಮೃದ್ಧವಾಗಿ ಅರಳುತ್ತ ಸಾಗಿದೆ ಎಂದರು.

    ತಮ್ಮ ಭಾಷಣದಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸದ ಮೋದಿ, ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ `ವಿಷಕಾರಿ ಸರ್ಪ’ ಹೇಳಿಕೆಗೆ ಪರೋಕ್ಷ ತಿರುಗೇಟು ನೀಡಿದ ಅವರು, ದೇಶ, ಸಮಾಜ ಮತ್ತು ಬಡವರ ಪರ ಕೆಲಸ ಮಾಡುವವರಿಗೆ ಬೈಯುವುದು, ಹೀಯಾಳಿಸುವುದು, ಅವಮಾನಿಸುವುದು ಕಾಂಗ್ರೆಸ್‌ನವರ ಸಂಪ್ರದಾಯ. ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್, ವೀರ ಸಾವರ್ಕರ್ ಸೇರಿ ಅನೇಕ ಮಹಾಪುರುಷರನ್ನು ಬೈದು ಅವಮಾನಿಸಿದ್ದವರು ನನಗೆಲ್ಲಿ ಸುಮ್ನೆ ಬಿಡ್ತಾರೆ? ಅವರು ಬೈದಷ್ಟು ನಾನು ಜನಸೇವೆಗೆ ಹೆಚ್ಚು ಸಮರ್ಪಿತವಾಗಿದ್ದೇನೆ ಎಂದು ಟಾಂಗ್ ನೀಡಿದರು.

    ಬಡವರ ಕಷ್ಟ ತಿಳಿಯುವ ಪ್ರಯತ್ನವನ್ನು ಕಾಂಗ್ರೆಸ್ ಯಾವತ್ತೂ ಮಾಡಿಲ್ಲ. ತುಷ್ಠೀಕರಣ, ನಕಾರಾತ್ಮಕವಾದ ರಾಜಕಾರಣದಲ್ಲಿ ಮುಳುಗಿದೆ. ಅವರ ಅಸಲಿ ಮುಖ ದೇಶದ ಜನರಿಗೆ ಚೆನ್ನಾಗಿ ಗೊತ್ತಾಗಿದ್ದರಿಂದಲೇ ಅಧಿಕಾರದಿಂದ ದೂರವಿಡುತ್ತಿದ್ದಾರೆ. ಕರ್ನಾಟಕದ ಜನ ಚುನಾವಣೆಯಲ್ಲಿ ಅವರನ್ನು ತಿರಸ್ಕರಿಸಿ ಸಮಗ್ರ ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರಕ್ಕೆ ಅವಕಾಶ ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು. ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ.ಉಮೇಶ ಜಾಧವ್, ಎಂಎಲ್‌ಸಿ ಡಾ.ಬಿ.ಜಿ.ಪಾಟೀಲ್ ಸೇರಿ ಬಿಜೆಪಿ ಅಭ್ಯರ್ಥಿಗಳು ಇದ್ದರು. ವಿವಿಧೆಡೆಯಿಂದ ಲಕ್ಷಕ್ಕೂ ಅಧಿಕ ಜನರು ಮೋದಿ ಭಾಷಣ ಆಲಿಸಲು ಬಂದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts