More

    ಕಸ ತೆರವಿಗೆ ಮುಖ್ಯಮಂತ್ರಿ ಸೂಚನೆ

    ಹನೂರು: ಪಟ್ಟಣದಲ್ಲಿ ತಾಂಡವಾಡುತ್ತಿದ್ದ ಕಸದ ಸಮಸ್ಯೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಅನುಪಾಲನಾ ವರದಿ ಸಲ್ಲಿಸುವಂತೆ ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕರ ಮೂಲಕ ಹನೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಸೂಚಿಸಿದ್ದಾರೆ.


    ಸಾರ್ವಜನಿಕ ಸಮಸ್ಯೆ ಕುರಿತು ಎತ್ತ ನೋಡಿದರೂ ಕಸದ ರಾಶಿ ಎಂಬ ಶೀರ್ಷಿಕೆಯಡಿ ಆಗಸ್ಟ್ 1ರಂದು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ವರದಿ ಸಂಬಂಧ ಸಿಎಂ ಸೂಚನೆ ನೀಡಿದ್ದು, ಹಲವು ವರ್ಷಗಳಿಂದ ಇದ್ದ ಸಮಸ್ಯೆಗೆ ವಿಜಯವಾಣಿ ವರದಿ ಪರಿಣಾಮ ಬೀರಿದೆ.


    ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜನತೆಗೆ ಕುಡಿಯುವ ನೀರು, ಸಮರ್ಪಕ ರಸ್ತೆ, ಬೀದಿ ದೀಪದ ವ್ಯವಸ್ಥೆ ಸೇರಿದಂತೆ ಇನ್ನಿತರೆ ಮೂಲ ಸೌಕರ್ಯಗಳ ಸಮಸ್ಯೆ ಆಗ್ಗಾಗ್ಗೆ ತಲೆದೂರುತ್ತಲೇ ಇತ್ತು. ಈತನ್ಮಧ್ಯೆ ಪಟ್ಟಣ ಪಂಚಾಯಿತಿ ಆಡಳಿತ ಸಮರ್ಪಕವಾಗಿ ಕಸ ವಿಲೇವಾರಿ ಮಾಡದ ಪರಿಣಾಮ ಎಲ್ಲೆಲ್ಲೂ ಕಸದ ರಾಶಿ ತಾಂಡವಾಡುತ್ತಿದೆ. ಇದರಿಂದ ಹನೂರು ಅನೈರ್ಮಲ್ಯದ ತಾಣವಾಗಿ ಮಾರ್ಪಟ್ಟಿದ್ದು, ಇಲ್ಲಿನ ಜನರಲ್ಲಿ ರೋಗ ರುಜಿನಗಳ ಭೀತಿ ಆವರಿಸಿದೆ. ಈ ದಿಸೆಯಲ್ಲಿ ವಿಜಯವಾಣಿ ಪತ್ರಿಕೆ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿ ವಾಸ್ತವಾಂಶದ ವಸ್ತು ಚಿತ್ರಣವನ್ನು ಕಲೆ ಹಾಕಿ ಆ.1ರಂದು ಎತ್ತ ನೋಡಿದರೂ ಕಸದ ರಾಶಿ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.


    ಇದಾದ ಬಳಿಕ ಆ.16 ರಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಅವರು ಪಟ್ಟಣದಲ್ಲಿ ಕರೆದಿದ್ದ ಸಭೆಯಲ್ಲಿ ವಿಜಯವಾಣಿ ಪತ್ರಿಕೆ ವರದಿ ಪ್ರಸ್ತಾಪಿಸಿ ಈ ಬಗ್ಗೆ ಅಗತ್ಯ ಕ್ರಮಕೈಗೊಂಡು ಪಟ್ಟಣದಲ್ಲಿರುವ ಕಸದ ರಾಶಿಗಳನ್ನು 10 ದಿನಗಳೊಳಗೆ ತೆರೆವುಗೊಳಿಸುವಂತೆ ಮುಖ್ಯಾಧಿಕಾರಿ ಪರಶಿವಯ್ಯ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಅಲ್ಲದೇ ಈ ಬಗ್ಗೆ ಕ್ರಮವಹಿಸದಿದ್ದಲ್ಲಿ ಅಮಾನತ್ತಿಗೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.

    ಕಸ ತೆರವಿಗೆ ಮುಖ್ಯಮಂತ್ರಿ ಸೂಚನೆ
    ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕರು ಹೊರಡಿಸಿರುವ ಆದೇಶದ ಪ್ರತಿ.


    ಈ ದಿಸೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕರಿಗೆ ಪತ್ರಿಕೆ ವರದಿ ಸಂಬಂಧ ತಕ್ಷಣವೇ ಅಗತ್ಯ ಕ್ರಮಕೈಗೊಂಡು ಕ್ರಮದ ಕುರಿತು ಯಾವ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿದೆಯೋ (ವಿಜಯವಾಣಿ) ಅದೇ ಪತ್ರಿಕೆಯಲ್ಲಿ ಪ್ರಕಟಣೆಯನ್ನು ಹೊರಡಿಸಿ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಉಲ್ಲೇಖ ಪತ್ರದಲ್ಲಿ ಸೂಚಿಸಿದ್ದು, ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ಸುಧಾ ಅವರು ಈ ಬಗ್ಗೆ ತುರ್ತು ಕ್ರಮಕೈಗೊಂಡು ಅನುಪಾಲನ ವರದಿ ಸಲ್ಲಿಸುವಂತೆ ಹನೂರು ಪಪಂ ಮುಖ್ಯಾಧಿಕಾರಿಗೆ ಸೂಚಿಸಿದ್ದಾರೆ. ಸಿಎಂ ಸೂಚನೆ ನೀಡಿ ಒಂದು ವಾರ ಕಳೆದರೂ ಮುಖ್ಯಾಧಿಕಾರಿ ಈ ಬಗ್ಗೆ ಕ್ರಮವಹಿಸಿಲ್ಲ. ಈ ಬಗ್ಗೆ ಪ್ರಶ್ನಸಿದರೆ ಇಲ್ಲಸಲ್ಲದ ನೆಪ ಹೇಳುತ್ತಾ ಕಾಲ ಕಳೆಯುತ್ತಿರುವ ಪರಿಣಾಮ ಕಸದ ರಾಶಿ ಬಿದ್ದಲ್ಲೇ ಬಿದ್ದಿದ್ದು, ದಿನದಿಂದ ದಿನಕ್ಕೆ ಅಶುಚಿತ್ವ ಹೆಚ್ಚಾಗುತ್ತಿದೆ.

    10 ದಿನಗಳೊಳಗೆ ತೆರೆವುಗೊಳಿಸುವಂತೆ ಕಸ ತೆರವುಗೊಳಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಲಾಗಿತ್ತು. ಆದಾಗ್ಯೂ ಇನ್ನು ಸಹ ಕಸ ವಿಲೇವಾರಿಯಾಗದಿರುವುದರ ಬಗ್ಗೆ ಅವರಿಗೆ ನೋಟಿಸ್ ಜಾರಿಗೊಳಿಸಲಾಗುವುದು. ಜತೆಗೆ ಈ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು.

    ಕೋಟೆ ಎಂ.ಶಿವಣ್ಣ, ಅಧ್ಯಕ್ಷರು ಸಫಾಯಿ ಕರ್ಮಚಾರಿ ಆಯೋಗ

    ಹನೂರು ಪಟ್ಟಣದಲ್ಲಿ ಕಸ ವಿಲೇವಾರಿಗೊಳಿಸಲು ಆರೋಗ್ಯ ಅಧಿಕಾರಿಯನ್ನು ನಿಯೋಜಿಸಲಾಗಿದ್ದು, ಕೂಡಲೇ ಅಗತ್ಯ ಕ್ರಮ ಕೈಗೊಂಡು ಅದರ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಇನ್ನೆರೆಡು ದಿನಗಳೊಳಗಾಗಿ ಕಸ ವಿಲೇವಾರಿಗೊಳಿಸಲಾಗುವುದು. ಅಲ್ಲದೇ ಪಟ್ಟಣಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಲಾಗುವುದು.
    ಸುಧಾ, ಯೋಜನಾ ನಿರ್ದೇಶಕಿ ಜಿಲ್ಲಾ ನಗಾರಾಭಿವೃದ್ಧಿ ಕೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts