More

    ಕಲ್ಲಿಯಲ್ಲಿ ಕ್ವಾರಂಟೈನ್ ಕೇಂದ್ರ ಸಿದ್ಧ

    ಶಿರಸಿ: ವಿದೇಶಗಳಿಂದ ಹಾಗೂ ಹೊರ ರಾಜ್ಯಗಳಿಂದ ತವರಿಗೆ ಆಗಮಿಸುವ ಜನರಿಗಾಗಿ ತಾಲೂಕಿನ ಕಲ್ಲಿಯಲ್ಲಿ 200 ಬೆಡ್​ಗಳ ಕ್ವಾರಂಟೈನ್ ಕೇಂದ್ರ ಸಿದ್ಧಪಡಿಸಲಾಗಿದೆ.

    ಕೋವಿಡ್-19 ಹರಡುವಿಕೆ ತಡೆಯಲು ಮುನ್ನೆಚ್ಚರಿಕೆಯಾಗಿ ತಾಲೂಕಿನ ಕಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಕೇಂದ್ರ ನಿರ್ವಿುಸಲಾಗಿದೆ. ಹೊರರಾಜ್ಯ ಹಾಗೂ ವಿದೇಶದಿಂದ ಬಂದವರನ್ನು ನೇರವಾಗಿ ಅಲ್ಲಿಗೆ ಕರೆದೊಯ್ದು ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುತ್ತದೆ. ಪ್ರಸ್ತುತ 200 ಬೆಡ್​ಗಳನ್ನು ಇಲ್ಲಿ ಅಳವಡಿಸಲಾಗಿದೆ. ತಾಲೂಕಾಡಳಿತವು ಕ್ವಾರಂಟೈನ್ ಕೇಂದ್ರದ ನಿಗಾ ವಹಿಸಲಿದೆ. ಈಗಾಗಲೇ ರಾಜಸ್ಥಾನದಿಂದ ಆಗಮಿಸಿದ ಇಬ್ಬರನ್ನು ಈ ಕೇಂದ್ರಕ್ಕೆ ರವಾನಿಸಲಾಗಿದೆ. ಸ್ಥಳೀಯರು ಕೇಂದ್ರಕ್ಕೆ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದರೂ ಅವರ ಮನವೊಲಿಸಿದ ನಂತರ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಕರಣ ದಾಖಲು: ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ತಾಲೂಕಿಗೆ ಬಂದಿರುವ ವ್ಯಕ್ತಿಯ ಇಡೀ ಕುಟುಂಬವನ್ನು ಕ್ವಾರಂಟೈನ್ ಮಾಡಲಾಗುತ್ತದೆ. ಅಲ್ಲದೆ, ಆ ಮನೆಗೆ ಕೆಂಪು ಸ್ಟಿಕರ್ ಅಂಟಿಸಲಾಗುತ್ತಿದೆ. ಈ ಸ್ಟಿಕರ್​ಗಳ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರೆ, ಅಂಥವರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಒಂದು ವಾರದ ಅವಧಿಯಲ್ಲಿ ತಾಲೂಕಿಗೆ ವಿವಿಧೆಡೆಯಿಂದ ಅಂದಾಜು 800 ಜನರು ಬಂದಿದ್ದಾರೆ. ಹೊರ ರಾಜ್ಯ, ಹೊರ ಜಿಲ್ಲೆ, ರೆಡ್, ಗ್ರೀನ್ ಜೋನ್ ಹೀಗೆ ಬೇರೆ ಬೇರೆ ಕಡೆಗಳಿಂದ ಬಂದವರಿಗೆ ಪ್ರತ್ಯೇಕ ನಿಯಮಾವಳಿ ರೂಪಿಸಲಾಗಿದೆ.

    ಹೊರಗಿನಿಂದ ಬರುವ ವ್ಯಕ್ತಿಯ ಕುಟುಂಬದವರು ಕ್ವಾರಂಟೈನ್ ಆಗಬೇಕು. ಜನರು ಅವರನ್ನು ತಪ್ಪಿತಸ್ಥರನ್ನಾಗಿ ಕಾಣಬಾರದು ಹೊರಗಿನಿಂದ ಬಂದ ಎಲ್ಲರ ಮನೆಗಳಿಗೂ ಸ್ಟಿಕರ್ ಅಂಟಿಸಲಾಗಿದೆ. ಇಂಥ ಸ್ಟಿಕರ್​ಗಳ ಚಿತ್ರ ತೆಗೆದು, ವಾಟ್ಸ್ ಆಪ್, ಫೇಸ್​ಬುಕ್​ಗಳಲ್ಲಿ ಹಾಕಿ, ಆ ಮನೆಯವರಿಗೆ ಮುಜುಗರ ಉಂಟಾಗುವಂತೆ ಮಾಡಿದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಅವರನ್ನೂ ಕ್ವಾರಂಟೈನ್ ಮಾಡುತ್ತೇವೆ ಎಂದು ಡಿವೈಎಸ್​ಪಿ ಜಿ.ಟಿ. ನಾಯಕ ಎಚ್ಚರಿಸಿದ್ದಾರೆ.

    ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಹೊರ ರಾಜ್ಯಗಳಿಂದ ಆಗಮಿಸುವವರನ್ನು ಕ್ವಾರಂಟೈನ್ ಮಾಡಲು ಕಲ್ಲಿಯಲ್ಲಿ ಕೇಂದ್ರ ಆರಂಭಿಸಲಾಗಿದೆ. ಅಗತ್ಯ ಮುಂಜಾಗ್ರತೆ ವಹಿಸಿ ಕಲ್ಲಿಯಲ್ಲಿ ಕೇಂದ್ರ ಆರಂಭಿಸಲಾಗಿದೆ. ಹಾಗಾಗಿ ಸ್ಥಳೀಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.
    | ಡಾ. ಈಶ್ವರ ಉಳ್ಳಾಗಡ್ಡಿ ಉಪವಿಭಾಗಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts