More

    ಕಲ್ಯಾಣದಲ್ಲಿ ಅಭಿವೃದ್ಧಿ ಕ್ರಾಂತಿ

    ಬಸವಕಲ್ಯಾಣ: ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ವೇಗ ಪಡೆಯುತ್ತಿದ್ದು, ಕಲ್ಯಾಣದಲ್ಲಿ ಅಭಿವೃದ್ಧಿ ಕ್ರಾಂತಿಯೇ ಆಗುತ್ತಿದೆ ಎಂದರೆ ತಪ್ಪಾಗದು ಎಂದು ಶಾಸಕ ಶರಣು ಸಲಗರ ಹೇಳಿದರು.

    ಅನುಭವ ಮಂಟಪ ಪರಿಸರದಲ್ಲಿ ಸೋಮವಾರ 2 ಕೋಟಿ ರೂ. ವೆಚ್ಚದಲ್ಲಿ ರೈತ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರೈತರ ವಿಶ್ರಾಂತಿಗಾಗಿ ಭವನ ನಿರ್ಮಾಣಗೊಳ್ಳಲಿದೆ ಎಂದರು.

    ನೂತನ ಅನುಭವ ಮಂಟಪ ಕಾಮಗಾರಿ ಮೇ ಮೊದಲ ವಾರದಲ್ಲಿ ಆರಂಭವಾಗಲಿದೆ. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹೇಳಿದ್ದಾರೆ. ಅನುಭವ ಮಂಟಪ, ಪರುಷಕಟ್ಟೆ, ಶಿವಾಜಿ ಪಾರ್ಕ್​, ತ್ರಿಪುರಾಂತ ಕೆರೆ ಸುಂದರೀಕರಣ ಹಾಗೂ ಇತರ ಅಭಿವೃದ್ಧಿ ಕೆಲಸಗಳು ಶೀಘ್ರದಲ್ಲಿ ಆರಂಭವಾಗಲಿವೆ. ಕಲ್ಯಾಣದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದು ಹೇಳಿದರು.

    ದಕ್ಷಿಣ ಕರ್ನಾಟಕದಲ್ಲಿ ತುಮಕೂರಿನ ಲಿಂ. ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಅವರು ಶಿಕ್ಷಣ, ದಾಸೋಹದಲ್ಲಿ ಯಾವ ರೀತಿಯಲ್ಲಿ ಕ್ರಾಂತಿ ಮಾಡಿದ್ದಾರೋ ಅದೇ ರೀತಿಯಲ್ಲಿ ಉತ್ತರ ಕರ್ನಾಟಕದಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಕ್ರಾಂತಿ ಮಾಡಲಿ ಎಂದು ಸದಾಶಯ ವ್ಯಕ್ತಪಡಿಸಿದರು.

    ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವಕಲ್ಯಾಣದಲ್ಲಿ ಶರಣು ಸಲಗರ ಅವರು ಶಾಸಕರಾದ ನಂತರ ಅಭಿವೃದ್ಧಿ ಕಾರ್ಯಗಳು ವೇಗ ಪಡೆಯುತ್ತಿವೆ. ಪಾದರಸದಂತೆ ಹಗಲು-ರಾತ್ರಿ ಎನ್ನದೆ ಉತ್ಸಾಹದಿಂದ ಜನ ಸೇವೆ ಮಾಡುತ್ತಿದ್ದಾರೆ. ಕರೊನಾ ಕಷ್ಟದ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲಿದ್ದಾಗ ಬಡವರಿಗೆ ಆಹಾರಧಾನ್ಯ ಕಿಟ್ ವಿತರಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಗುರು ಬಸವಣ್ಣನವರ ಆಶೀರ್ವಾದ ಅವರ ಮೇಲಿರಲಿದೆ ಎಂದರು.

    ಅನುಭವ ಮಂಟಪ ಸಂಚಾಲಕರಾದ ಶ್ರೀ ಶಿವಾನಂದ ದೇವರು, ಬಸವಕಲ್ಯಾಣ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ರಾಜಕುಮಾರ ಬಿರಾದಾರ ಸಿರಗಾಪುರ, ಬಿಜೆಪಿ ನಗರ ಅಧ್ಯಕ್ಷ ಅರವಿಂದ ಮುತ್ತೆ ಇತರರಿದ್ದರು.

    ಭಿಕ್ಷುಕ-ರಾಜನ ಕತೆಯೂ, ಗುಣಮಟ್ಟದ ಕಾಮಗಾರಿಯೂ: ಭಿಕ್ಷುಕ-ರಾಜನ ಕತೆಯನ್ನು ಸ್ವಾರಸ್ಯಕರವಾಗಿ ಹೇಳುವ ಮೂಲಕ ಅನುಭವ ಮಂಟಪದ ಕಾಮಗಾರಿಯಲ್ಲಿ ಗುಣಮಟ್ಟ ನಡೆಯಲಿ ಎನ್ನುವ ಸದಾಶಯವನ್ನು ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ವ್ಯಕ್ತಪಡಿಸಿದರು. ಬಂಗಾರದ ರಥದಲ್ಲಿ ಎದುರಿಗೆ ಬರುತ್ತಿದ್ದ ರಾಜನನ್ನು ನೋಡಿದ ಭಿಕ್ಷುಕನೊಬ್ಬ ಏನಾದರೂ ಭಿಕ್ಷೆ ಕೇಳೋಣ ಎಂದು ಕೆಳಗೆ ಮುಖ ಮಾಡಿ ತನ್ನ ಜೋಳಿಗೆಯನ್ನು ಸರಿಪಡಿಸಿಕೊಳ್ಳುತ್ತಿದ್ದ. ಅಷ್ಟರಲ್ಲಿ ರಾಜನೇ ರಥದಿಂದ ಇಳಿದು ಭಿಕ್ಷುಕನ ಮುಂದೆ ಭಿಕ್ಷಾನದೇಹಿ ಎಂದನಂತೆ! ಆಗ ಜೋಳಿಗೆಯಲ್ಲಿ ಸೇರಷ್ಟಿರುವ ಅಕ್ಕಿಯಲ್ಲಿ ಒಂದು ಮುಷ್ಟಿಯಷ್ಟು ರಾಜನ ಜೋಳಿಗೆಗೆ ಹಾಕಿ ಮುಂದೆ ಸಾಗಿದ. ಮನೆಗೆ ಹೋಗಿ ಮೊರದಲ್ಲಿ ಉಳಿದ ಅಕ್ಕಿ ಹಾಕಿ ನೋಡಿದರೆ ಅದರಲ್ಲಿ ಬಂಗಾರದ ಅಕ್ಕಿ ಇದ್ದವು. ಎಲ್ಲವನ್ನು ಆರಿಸಿದಾಗ ರಾಜನಿಗೆ ಭಿಕ್ಷೆ ಹಾಕಿದಷ್ಟಾದವು. ಆಗ ತಲೆಗೆ ಕೈ ಹಚ್ಚಿಕೊಂಡು ಎರಡು ಮುಷ್ಟಿ ಹಾಕಲಿಲ್ಲವಲ್ಲ ಎಂದನಂತೆ. ಇದರ ತಾತ್ಪರ್ಯ ಅನುಭವ ಮಂಟಪದ ಕೆಲಸ ಕ್ವಾಲಿಟಿ ವಕರ್್ ಮಾಡಿದರೆ ಅವರಿಗೆ ಮುಂದೆ ಹತ್ತು ಕಡೆ ಹತ್ತು ಪಟ್ಟು ಲಾಭ ಸಿಗುತ್ತದೆ. ಇಲ್ಲಿ ಲಾಭ-ನಷ್ಟ ನೋಡುವುದು ಬೇಡ. ಗಂಟಿಗೆ ಗಂಟು ಬಂದರೆ ಸಾಕು. ಬೇರೆ ಕಡೆ ಲಾಭ ಆಗುತ್ತದೆ ಎಂದು ಕತೆಯ ಮೂಲಕ ಗುಣಮಟ್ಟದ ಕಾಮಗಾರಿ ನಡೆಯಲಿ ಎನ್ನುವ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts