More

    ಕರ್ಮಾನುಷ್ಠಾನದಿಂದ ಸಮೃದ್ಧಿ

    ಶಿರಸಿ: ಲೋಕದಲ್ಲಿ ಪ್ರತಿಯೊಬ್ಬನು ಕರ್ಮಯೋಗ ವನ್ನು ಅನುಷ್ಠಾನ ಮಾಡಬೇಕು. ಪ್ರತಿಯೊಬ್ಬನೂ ಕರ್ಮಾನುಷ್ಠಾನ ಮಾಡುವುದರಿಂದ ಲೋಕದ ಅಭಿವೃದ್ಧಿ, ಸಮೃದ್ಧಿಯಾಗುತ್ತದೆ ಎಂದು ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

    ಸ್ವರ್ಣವಲ್ಲೀ ಮಠದಲ್ಲಿ ಶುಕ್ರವಾರ ಗೀತಾಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವದಿಸಿದರು. ಕರ್ಮಯೋಗದಲ್ಲಿ ಕರ್ಮದ ಬಗ್ಗೆ ಶ್ರೀಕೃಷ್ಣ ಹೇಳಿದ್ದಾನೆ. ಲೋಕದಲ್ಲಿ ಕರ್ಮವನ್ನು ಗೌಣವಾಗಿ ಪರಿಗಣಿಸಿದ್ದಾರೆ. ಆಲಸ್ಯದಿಂದಾಗಿ ಕರ್ಮವನ್ನು ಯಾರೂ ತ್ಯಾಗಮಾಡಬಾರದು. ವಿದ್ಯಾರ್ಥಿಗಳಿರಲಿ, ಅಧ್ಯಾಪಕರಿರಲಿ ಯಾರೇ ಆಗಲಿ ಅವರವರ ಕರ್ಮವನ್ನು ಮಾಡಬೇಕು. ಆಗ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದರು.

    ಜೀವನದಲ್ಲಿ ಸ್ವಾರ್ಥಕ್ಕಾಗಿ ಲಂಚ ಸ್ವೀಕಾರ ಮಾಡಿದರೆ, ಪರರ ಹಣಕ್ಕಾಗಿ ಆಶಿಸಿದರೆ ಅದು ಮಹಾಪಾಪ. ಹೀಗಾಗಿ ಲಂಚ ಸ್ವೀಕಾರ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು ಎಂದರು. ಗೀತಾ ಜಯಂತಿ ಅತೀ ಉತ್ಸಾಹದಿಂದ ನಡೆಯುತ್ತಿದೆ ಎಂದರೆ ಅದಕ್ಕೆ ಕಾರಣ ಬೆಂಗಳೂರಿನ ವಾಗ್ದೇವಿ ವಿದ್ಯಾಲಯ ಹಾಗೂ ಅದರ ಅಧ್ಯಕ್ಷರು ಕಾರಣ ಎಂದರು.

    ಬೆಂಗಳೂರಿನ ವಾಗ್ದೇವಿ ಶಾಲೆಯ ಅಧ್ಯಕ್ಷ ಕೆ. ಹರೀಶ, ಪ್ರಮುಖರಾದ ಎಂ.ಆರ್. ಹೆಗಡೆ ಮತ್ತಿಹಳ್ಳಿ ಹಾಗೂ ಪ್ರೊ. ಕೆ.ವಿ.ಭಟ್ಟ ಉಪಸ್ಥಿತರಿದ್ದರು.

    ಗೀತಾ ಜಯಂತಿಯ ಪ್ರಯುಕ್ತ ಶ್ರೀಮಠದಲ್ಲಿ ಬೆಳಗ್ಗೆ ಮಾತೃಮಂಡಳಿಯ 200ಕ್ಕೂ ಹೆಚ್ಚು ಸದಸ್ಯರು ಹಾಗೂ ಸಂಸ್ಕೃತ ಮಹಾವಿದ್ಯಾಲಯದ ನೂರಾರು ವಿದ್ಯಾರ್ಥಿಗಳಿಂದ ಹದಿನೆಂಟೂ ಅಧ್ಯಾಯಗಳ ಪಠಣ ನಡೆಯಿತು. ಈ ವೇಳೆ ಸ್ವರ್ಣವಲ್ಲೀ ಪ್ರಭಾದ ಸ್ಥಾಪಕ, ಸಂಪಾದಕರಾಗಿದ್ದ ನಾ.ಸು. ಭರತನಳ್ಳಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

    ಮಠದ ವಿದ್ಯಾರ್ಥಿಗಳಿಂದ ವೇದಘೊಷ, ವಾಗ್ದೇವಿ ಶಾಲೆ ವಿದ್ಯಾರ್ಥಿಗಳಿಂದ ಸ್ವಾಗತಗೀತೆ ನಡೆಯಿತು. ಪರಮೇಶ್ವರ ಭಟ್ಟ ಸ್ವಾಗತಿಸಿದರು. ವಿನಯ ಭಟ್ಟ ವಂದಿಸಿದರು. ಸುಮಾ ಬಾಬು ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts