More

    ಕರೋನಾಕ್ಕೆ ಕರಗಿದ ರಂಗ ಸಂಭ್ರಮ

    ಲಕ್ಷ್ಮೇಶ್ವರ: ಕರೊನಾ ವೈರಸ್ ಭೀತಿಯಿಂದ ತಾಲೂಕಾಡಳಿತ ಓಕುಳಿಯಾಟ ರದ್ದು ಮಾಡಿದ್ದರಿಂದ ಪಟ್ಟಣದಲ್ಲಿ ರಂಗಪಂಚಮಿ ಆಚರಣೆ ಯಾವುದೇ ಸದ್ದು ಗದ್ದಲ, ಅಬ್ಬರವಿಲ್ಲದೇ ಶನಿವಾರ ಸಂಪ್ರದಾಯದಂತೆ ಸರಳವಾಗಿ ನೆರವೇರಿತು. ಆದರೆ, ಸರ್ಕಾರ ಈಗಾಗಲೇ ಶಾಲಾ-ಕಾಲೇಜ್​ಗಳಿಗೆ ರಜೆ ಘೊಷಿಸಿದ್ದು, ಪರೀಕ್ಷೆ ಬರೆಯದೆ ಪಾಸ್ ಎಂಬ ಖುಷಿಯಲ್ಲಿರುವ ಚಿಣ್ಣರು ಮಾತ್ರ ರಂಗಿನಾಟದಲ್ಲಿ ಕುಣಿದು ಕುಪ್ಪಳಿಸಿದರು.

    ಪಟ್ಟಣದ ವಿವಿಧೆಡೆ ಪ್ರತಿಷ್ಠಾಪಿಸಿದ್ದ ರತಿ-ಮನ್ಮಥರ ಮತ್ತು ಹುಲಗಾಮನ ಮುಂದೆ ಚಿಣ್ಣರು ಪಿಚಕಾರಿ ಮತ್ತು ಪ್ಲಾಸ್ಟಿಕ್ ಬಾಟಲಿ ಹಿಡಿದು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಬೈಕ್​ನಲ್ಲಿ ಗಲ್ಲಿ ಸುತ್ತಿ ಬಣ್ಣದಾಟದಲ್ಲಿ ಮಿಂದೆದ್ದ ದೃಶ್ಯಗಳು ಕಂಡುಬಂದವು.

    ಪಟ್ಟಣದಲ್ಲಿ 20 ಅಡಿ ಎತ್ತರದ ಹುಲಗಾಮನನ್ನು ಸೋಮೇಶ್ವರ ಶ್ರಮದಾನ ಸೇವಾ ಸಮಿತಿ ನಿರ್ವಿುಸಿದ್ದರೂ ಪ್ರತಿ ವರ್ಷದಂತೆ ಸಾಮೂಹಿಕ ಪಾಲ್ಗೊಳ್ಳುವಿಕೆಯ ರಂಗಿನಾಟ ಮಾತ್ರ ಅಲ್ಲಿರಲಿಲ್ಲ. ಹಳ್ಳದ ಕೇರಿ ಓಣಿಯ ಯುವಕ ಸಂಘದವರು ಮತ್ತು ಪೇಟೆ ಹನುಮಂತ ದೇವಸ್ಥಾನದ ಯುವಕ ಸಂಘದವರು ಪ್ರತಿ ಬಾರಿಯಂತೆ ಟ್ರ್ಯಾಕ್ಟರ್​ನಲ್ಲಿ ರತಿ-ಕಾಮಣ್ಣನ ಮೂರ್ತಿಯನ್ನು ಸಿಂಗರಿಸಿ ಹಲಗೆ ಹಾಗೂ ಧ್ವನಿವರ್ಧಕ ಸಂಗೀತದ ಅಬ್ಬರಕ್ಕೆ ಕುಣಿದು ಕುಪ್ಪಳಿಸುತ್ತ ಸಾಂಪ್ರದಾಯಿಕ ರಂಗಪಂಚಮಿ ಹಬ್ಬಕ್ಕೆ ಮೆರುಗು ತಂದರು. ಮಧ್ಯಾಹ್ನ 2 ಗಂಟೆಯೊಳಗಾಗಿ ಬಹುತೇಕ ಬಣ್ಣದ ಹಬ್ಬದ ಸಂಭ್ರಮ ಮಂಕಾಗಿದ್ದು, ಕೆಲವೇ ಜನ ಯುವಕರು, ಮಕ್ಕಳು ಸೇರಿ ತಮ್ಮ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಿದ್ದ ರತಿ-ಕಾಮನ ಮೂರ್ತಿ ದಹಿಸಿ ರಂಗಿನಾಟಕ್ಕೆ ತೆರೆ ಎಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts