More

    ಕರೊನಾ ಮರಣ ಪ್ರಮಾಣ ತಡೆಯಿರಿ

    ಹಾವೇರಿ: ಕರೊನಾ ಸೋಂಕಿತರ ಚಿಕಿತ್ಸೆ ಹಾಗೂ ಕೋವಿಡ್ ಆಸ್ಪತ್ರೆಗಳ ವ್ಯವಸ್ಥೆ ಬಗ್ಗೆ ಎಲ್ಲ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು. ಕೋವಿಡ್​ನಿಂದ ಮರಣ ಹೊಂದುವವರ ಸಂಖ್ಯೆ ಇಳಿಮುಖವಾಗಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಕರೊನಾ ನಿಯಂತ್ರಣ ಕ್ರಮಗಳು ಹಾಗೂ ನೆರೆ ಪರಿಹಾರ ಕ್ರಮಗಳ ಕುರಿತು ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

    ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್​ಗಳ ದಿನವಹಿ ಮಾಹಿತಿ ಸಂಗ್ರಹಿಸಿ ಅಪ್​ಡೇಟ್ ಮಾಡಬೇಕು. ಕೋವಿಡ್​ಗಾಗಿ ವ್ಯವಸ್ಥೆ ಮಾಡಿರುವ ಬೆಡ್​ಗಳಲ್ಲಿ ಎಷ್ಟು ಬೆಡ್​ಗಳಲ್ಲಿ ಪಾಸಿಟಿವ್ ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಷ್ಟು ಬೆಡ್​ಗಳು ಖಾಲಿ ಇವೆ. ಎಷ್ಟು ರೋಗಿಗಳು ಬಿಡುಗಡೆಯಾಗಿದ್ದಾರೆ ಎಂಬ ಮಾಹಿತಿ ಪ್ರತಿನಿತ್ಯ ಅಪ್​ಡೇಟ್ ಆಗಬೇಕು. ಇದರಿಂದ ಚಿಕಿತ್ಸೆಗೆ ಬರುವ ಹೊಸ ರೋಗಿಗಳನ್ನು ಶಿಫ್ಟ್ ಮಾಡಲು ಅನುಕೂಲವಾಗುತ್ತದೆ. ಸರಿಯಾದ ಮಾಹಿತಿ ಇಲ್ಲದಿದ್ದರೆ ಬೆಡ್​ಗಳು ಖಾಲಿ ಇಲ್ಲ ಎಂದು ವಾಪಸ್ ಕಳುಹಿಸುವ ಸಂದರ್ಭಗಳು ಎದುರಾಗುತ್ತವೆ. ಆಕ್ಸಿಜನ್ ಬೆಡ್ ಹಾಗೂ ಸಾಮಾನ್ಯ ಬೆಡ್​ಗಳನ್ನು ಪರಿಶೀಲಿಸಬೇಕು. ಸೋಂಕಿತರನ್ನು ಖಾಲಿ ಬೆಡ್​ಗಳಿಗೆ ಸ್ಥಳಾಂತರಿಸಬೇಕು. ಒಂದೊಮ್ಮೆ ಜಿಲ್ಲಾಸ್ಪತ್ರೆಯಲ್ಲಿ ಬೆಡ್​ಗಳು ಇಲ್ಲದಿದ್ದರೆ ತಾಲೂಕು ಆಸ್ಪತ್ರೆಗಳಲ್ಲಿರುವ ಖಾಲಿ ಬೆಡ್​ಗಳಿಗೆ ಕಳಿಸಬೇಕು ಎಂದರು.

    ಆಸ್ಪತ್ರೆಗೆ ತಡವಾಗಿ ಬರುತ್ತಿರುವುದೇ ಸಾವಿಗೆ ಪ್ರಮುಖ ಕಾರಣ ಎಂಬುದು ಗೊತ್ತಾಗಿದೆ. ಹೀಗಾಗಿ ಪಾಸಿಟಿವ್ ಬಂದು ಹೋಂ ಐಸೋಲೇಷನ್ ಅಲ್ಲಿ ಇದ್ದವರನ್ನು ಸ್ಥಳೀಯ ವೈದ್ಯರು ಎರಡು ದಿನಕ್ಕೊಮ್ಮೆ ಪರೀಕ್ಷೆ ಮಾಡಬೇಕು. ಅವರ ಪ್ರಗತಿಯ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ಕೊಡಬೇಕು. ಪಾಸಿಟಿವ್ ಇದ್ದವರಿಗೆ ಜಿಂಕ್ ಮತ್ತು ವಿಟಮಿನ್ ಮಾತ್ರೆ ಕೊಡಬೇಕು. ಅಲ್ಲದೆ ಆಯುಷ್ ಇಲಾಖೆ ಶಿಫಾರಸು ಮಾಡಿರುವ ಶಕ್ತಿ ವೃದ್ಧಕ, ರೋಗ ನಿರೋಧಕ ಔಷಧಗಳನ್ನು ಕೊಡಬೇಕು ಎಂದರು.

    ಕರೊನಾ ಲಕ್ಷಣ ರಹಿತ ಹಾಗೂ ಸಹಿತ ಪ್ರಕರಣ ಹಾಗೂ ಗಂಭೀರ ಕಾಯಿಲೆಗಳಿಂದ ಬಳಲುವವರ ಸಮೀಕ್ಷೆಯನ್ನು ತೀವ್ರಗೊಳಿಸಿ. ಜಿಲ್ಲೆಯ ಎಲ್ಲ ಪಟ್ಟಣಗಳಲ್ಲಿ ಅತ್ಯಂತ ವ್ಯವಸ್ಥಿತವಾಗಿ ವಾರ್ಡ್​ವಾರು ಸಮೀಕ್ಷೆ ನಡೆಸಿ ಆಂಟಿಜನ್ ಕಿಟ್ ಬಳಸಿ ಪರೀಕ್ಷೆಗೆ ಒಳಪಡಿಸಬೇಕು. ಪಾಸಿಟಿವ್ ಬಂದವರ ಕುಟುಂಬಗಳನ್ನು ಆದ್ಯತೆಯ ಮೇಲೆ ಪರೀಕ್ಷೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ವ್ಯವಸ್ಥೆ ಕೈಗೊಳ್ಳಬೇಕು. ಲ್ಯಾಬ್ ಟೆಕ್ನಿಷಿಯನ್, ನರ್ಸ್​ಗಳು ಹಾಗೂ ಡಿ ಗ್ರೂಪ್ ಸಿಬ್ಬಂದಿಯನ್ನು ಅಗತ್ಯಕ್ಕೆ ತಕ್ಕಂತೆ ನೇಮಿಸಿ. ಹೊರಗುತ್ತಿಗೆಯಿಂದ ಪಡೆಯುವ ಈ ಸಿಬ್ಬಂದಿ ವೇತನ ಕುರಿತು ಸರ್ಕಾರದ ಹಂತದಲ್ಲಿ ನಿಗದಿಗೊಳಿಸಿ ಸೋಮವಾರ ಆದೇಶ ಮಾಡಿಸಲಾಗುವುದು ಎಂದರು.

    ಮಳೆಯಿಂದ ಬೆಳೆ ನಾಶದ ಸಂಪೂರ್ಣ ವರದಿ ಕೊಡಬೇಕು. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 3,098 ಹೆಕ್ಟೇರ್ ಪ್ರದೇಶ ಬೆಳೆ ನಾಶವಾಗಿದೆ. 1,245 ವರದಾ ನದಿಯ ದಂಡಿಯ ಹೊಲಗಳಲ್ಲಿ, ಉಳಿದೆಡೆ 1,853 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ನಾಶವಾಗಿದೆ. 504 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಇದೆಲ್ಲವನ್ನೂ ಸರ್ಕಾರಕ್ಕೆ ಕಳುಹಿಸಿ, ಪರಿಹಾರ ಕೊಡಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

    ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ಬೆಳೆಯೂ ಉತ್ತಮವಾಗಿದೆ. ಯೂರಿಯಾ ಗೊಬ್ಬರ ಸಾಕಷ್ಟು ವಿತರಣೆಯಾಗಿದೆ. ಯಾವುದೇ ರೀತಿಯ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಇನ್ನೂ 3 ಸಾವಿರ ಟನ್ ಯೂರಿಯಾ ದಾಸ್ತಾನು ಮಾಡಲು ಹೇಳಿದ್ದೇನೆ ಎಂದರು.

    ಸಭೆಯಲ್ಲಿ ಶಾಸಕರಾದ ನೆಹರು ಓಲೇಕಾರ, ಅರುಣಕುಮಾರ ಪೂಜಾರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಎಸ್​ಪಿ ಕೆ.ಜಿ. ದೇವರಾಜ್, ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಉಪವಿಭಾಗಾಧಿಕಾರಿಗಳಾದ ಡಾ. ದಿಲೀಪ್ ಶಶಿ, ಅನ್ನಪೂರ್ಣ ಮುದಕಮ್ಮನವರ, ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ.ಆರ್. ಹಾವನೂರ ಇತರರಿದ್ದರು.

    ಕರೊನಾ ಪರೀಕ್ಷೆಗೆ ಮತ್ತಷ್ಟು ಯಂತ್ರ

    ಜಿಲ್ಲೆಯಲ್ಲಿ ಈವರೆಗೆ 39,993 ಸ್ಯಾಂಪಲ್​ಗಳನ್ನು ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 35,566 ನೆಗಟಿವ್ ಬಂದಿವೆ. 4,050 ಪಾಸಿಟಿವ್ ಬಂದಿದೆ. 1,297 ಪ್ರಕರಣಗಳು ಸಕ್ರಿಯವಾಗಿವೆ. ಇದರಲ್ಲಿ 456 ಜನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 891 ಜನ ಹೋಂ ಐಸೋಲೇಷನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೊನಾ ಪರೀಕ್ಷೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದ್ದು, ಪ್ರತಿದಿನ 350 ಪರೀಕ್ಷೆ ಮಾಡಲಾಗುತ್ತಿದ್ದು, ಅದನ್ನು ಇನ್ನಷ್ಟು ಹೆಚ್ಚಿಸಲು ಹೊಸ ಯಂತ್ರ ಅಳವಡಿಸಿ ಇನ್ನೂ 300 ಪರೀಕ್ಷೆ ಮಾಡಲು ಕ್ರಮ ವಹಿಸಲಾಗುವುದು. ಇದೆಲ್ಲವೂ ಒಂದು ವಾರದಲ್ಲಿ ಆಗಬೇಕು ಎಂದು ಆದೇಶಿಸಿದ್ದೇನೆ. ಜಿಲ್ಲಾಸ್ಪತ್ರೆಗೆ ಹೆಚ್ಚಿನ ಆಕ್ಸಿಜನ್ ವ್ಯವಸ್ಥೆ ಮಾಡಲು ಬಲ್ಕ್ ಸಿಲೆಂಡರ್ ತರಲು ಗುಜರಾತಗೆ ಆರ್ಡರ್ ಕೊಟ್ಟಿದ್ದೇವೆ. ಅದು ಮುಂದಿನ ವಾರ ಬಂದರೆ ಬಲ್ಕ್ ಆಕ್ಸಿಜನ್ ಸಂಗ್ರಹಿಸಲು ಅನುಕೂಲವಾಗಲಿದೆ ಎಂದು ಬೊಮ್ಮಾಯಿ ತಿಳಿಸಿದರು.

    ಪ್ರವಾಹದಿಂದ ಬಿದ್ದ ಮನೆ ಸರ್ವೆ

    ಪ್ರವಾಹದಿಂದ ಬಿದ್ದಿರುವ ಮನೆಗಳನ್ನು ಸರ್ವೆ ಮಾಡಿ ಅಪ್​ಲೋಡ್ ಮಾಡಲಾಗುತ್ತಿದೆ. ಕಳೆದ ಬಾರಿ ಕೆಲ ಮನೆಗಳು ಬಿಟ್ಟು ಹೋಗಿದ್ದು, ಅವುಗಳನ್ನು ಸಹ ಮರುಪರಿಶೀಲನೆ ಮಾಡಿ, ನೈಜವಾಗಿದ್ದವರ ಪಟ್ಟಿಯನ್ನು ರಾಜೀವ್​ಗಾಂಧಿ ಹೌಸಿಂಗ್ ಕಾಪೋರೇಶನ್​ಗೆ ಕಳುಹಿಸಲಾಗುವುದು. ಸಿ ಕೆಟಗರಿಯಿಂದ ಬಿ ಸೇರಬೇಕಾದ ಪಟ್ಟಿ ತಯಾರಿಸಿ ಜಿಲ್ಲೆಯ ಎಲ್ಲ ಮಾಹಿತಿ ಕ್ರೂಢೀಕರಿಸಿ ಮುಖ್ಯಮಂತ್ರಿಗಳು, ಅಧಿಕಾರಿಗಳೊಂದಿಗೆ ರ್ಚಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts