More

    ಕರೊನಾದಿಂದ ಪತಿ ಸಾವು, ಪತ್ನಿ ಬಿಡುಗಡೆ

    ಹುಬ್ಬಳ್ಳಿ: ಅಕ್ಕಪಕ್ಕದ ವಿವಿಧ ಜಿಲ್ಲೆಗಳಿಗಿಂತ ಧಾರವಾಡ ಜಿಲ್ಲೆ ಸುರಕ್ಷಿತ ಎಂದುಕೊಳ್ಳುತ್ತಿದ್ದಾಗಲೇ ಒಂದು ಜೀವವನ್ನು ಬಲಿಪಡೆದಿರುವ ಕರೊನಾ ವೈರಾಣು, ತಾನು ಇಲ್ಲಿಯೂ ಮಹಾಮಾರಿಯಾಗುವ ಹಾದಿಯಲ್ಲಿದ್ದೇನೆ ಎನ್ನುವ ಎಚ್ಚರಿಕೆ ನೀಡಿದೆ.

    ಇಲ್ಲಿಯ ಗಿರಣಿಚಾಳ ನಿವಾಸಿ 58 ವರ್ಷದ ವ್ಯಕ್ತಿ ಕರೊನಾ ಕಾರಣದಿಂದಾಗಿ ಮಂಗಳವಾರ ರಾತ್ರಿ ಕಿಮ್್ಸ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅದೇ ವ್ಯಕ್ತಿಯ ಪತ್ನಿ, 49 ವರ್ಷದ ಮಹಿಳೆ ಕರೊನಾ ಗೆದ್ದು, ಬಿಡುಗಡೆಗೊಂಡಿದ್ದಾರೆ. ವ್ಯಕ್ತಿಯ ಸಾವು ಆ ಕುಟುಂಬ ಹಾಗೂ ಬಂಧುಗಳ ಪಾಲಿಗೆ ಮಾಸದ ಗಾಯ ಉಂಟುಮಾಡಿ, ಆತನ ಪತ್ನಿಯ ಬಿಡುಗಡೆಯ ಸಂತೋಷವನ್ನು ಅನುಭವಿಸಲಾಗದಂತೆ ಮಾಡಿದೆ.

    ಮೇ 20ರಂದು ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿ ಮತ್ತು ಕುಟುಂಬದವರು ಕ್ವಾರಂಟೈನ್​ದಲ್ಲಿದ್ದರು. 23ರಂದು ಕರೊನಾ ದೃಢಪಟ್ಟಿದ್ದರಿಂದ ಕಿಮ್ಸ್​ಗೆ ದಾಖಲಿಸಲಾಗಿತ್ತು. ಕರೊನಾ ಜತೆಗೆ ತೀವ್ರ ಉಸಿರಾಟದ ತೊಂದರೆ ಇತ್ತು. ಮಧುಮೇಹ ಸೇರಿ ಬಹು ಅಂಗಾಂಗ ವೈಫಲ್ಯ ಉಂಟಾಗಿದ್ದರಿಂದ ವೈದ್ಯರ ಪ್ರಯತ್ನಗಳು ಫಲ ನೀಡಲಿಲ್ಲ.

    ಮೃತನ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸರ್ಕಾರದ ಮಾರ್ಗಸೂಚಿಗಳನ್ವಯ ಹುಬ್ಬಳ್ಳಿಯ ಹೆಗ್ಗೇರಿ ರುದ್ರಭೂಮಿಯಲ್ಲಿ ಬುಧವಾರ ಜರುಗಿತು. ಮೃತನ ಪತ್ನಿ, ಕುಟುಂಬದವರಿಗಷ್ಟೇ ನಿರ್ದಿಷ್ಟ ಅಂತರದಿಂದ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಮಾತ್ರ ಅನುವು ಮಾಡಿಕೊಡಲಾಗಿತ್ತು ಎಂದು ತಿಳಿದುಬಂದಿದೆ.

    ಮತ್ತೆ 4 ಕೋವಿಡ್ ಪಾಸಿಟಿವ್ ಪತ್ತೆ

    ಧಾರವಾಡ ಜಿಲ್ಲೆಯಲ್ಲಿ ಬುಧವಾರ 4 ಕರೊನಾ ಸೋಂಕು (ಕೋವಿಡ್) ಪ್ರಕರಣಗಳು ಪತ್ತೆಯಾಗಿವೆ. ಹುಬ್ಬಳ್ಳಿ ಭೈರಿದೇವರಕೊಪ್ಪ ಶಾಂತಿನಿಕೇತನ ಕಾಲನಿಯ ಸನಾ ಕಾಲೇಜು ಹಿಂಭಾಗದ ನಿವಾಸಿ, 29 ವರ್ಷದ ಮಹಿಳೆ ಶಿವಮೊಗ್ಗ ಜಿಲ್ಲೆಯಿಂದ ಪ್ರಯಾಣಿಸಿದ ಹಿನ್ನೆಲೆ ಹೊಂದಿದ್ದಾರೆ. ಮತ್ತೋರ್ವ 31 ವರ್ಷದ ಮಹಿಳೆ ಧಾರವಾಡದ ಯಾಲಕ್ಕಿಶೆಟ್ಟ್ಟ್ ಕಾಲನಿ ನಿವಾಸಿಯಾಗಿದ್ದಾರೆ. ತೀವ್ರ ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದರು. ತಪಾಸಣೆಗೆ ಒಳಪಡಿಸಿದಾಗ ಕೋವಿಡ್ ಸೋಂಕು ದೃಢಪಟ್ಟಿದೆ.

    ಹುಬ್ಬಳ್ಳಿ ನೇಕಾರ ನಗರ ನಿವಾಸಿ 26 ವರ್ಷದ ಮಹಿಳೆಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಅವರ ಸಂಪರ್ಕ ಪತ್ತೆ ಮಾಡಲಾಗುತ್ತಿದೆ. ಇನ್ನೋರ್ವ ಅಣ್ಣಿಗೇರಿಯ ನಿವಾಸಿ 40 ವರ್ಷದ ಸಿಆರ್​ಪಿಎಫ್ ಯೋಧ ನವದೆಹಲಿಯಿಂದ ಹಿಂದಿರುಗಿದ ಹಿನ್ನೆಲೆ ಹೊಂದಿದ್ದು, ಕರೊನಾ ವೈರಾಣು ಸೋಂಕಿಗೀಡಾಗಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 70ಕ್ಕೆ ಏರಿಕೆಯಾಗಿದೆ. ಈಗಾಗಲೇ 45 ಜನ ಚೇತರಿಕೆಯಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ಸೀಲ್​ಡೌನ್ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ

    ಕಲಘಟಗಿ ತಾಲೂಕಿನ ದೇವಿಕೊಪ್ಪ ಹಾಗೂ ಬಿ. ಗುಡಿಹಾಳ ಗ್ರಾಮದ ಸೀಲ್​ಡೌನ್ ಪ್ರದೇಶಗಳಿಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ ಬುಧವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸಿರುವ ಕುರಿತು ಮಾಹಿತಿ ಪಡೆದು, ಬಫರ್​ಜೋನ್ ಪ್ರದೇಶದಲ್ಲಿ ಜನರು ಓಡಾಡದಂತೆ ನಿಗಾ ವಹಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಮಳೆಗಾಲ ಆರಂಭಗೊಳ್ಳುತ್ತಿದ್ದು, ಕರೊನಾ, ಇತರ ಸಾಂಕ್ರಾಮಿಕ ರೋಗಗಳು ಹರಡದಂತೆ ಅವಶ್ಯಕ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಗ್ರಾಮ ಪಂಚಾಯಿತಿ ಅಧಿಕಾರಿ, ಸಿಬ್ಬಂದಿ ಕಟ್ಟುನಿಟ್ಟಾಗಿ ಕೈಗೊಳ್ಳಬೇಕು. ಅಲ್ಲದೆ, ತಾಲೂಕು ಪಂಚಾಯಿತಿ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ಮಾಡುವ ಜತೆಗೆ ಸಿಬ್ಬಂದಿ ಕಾರ್ಯವೈಖರಿ ಮೇಲೆ ನಿಗಾ ವಹಿಸಬೇಕು ಎಂದು ಸೂಚಿಸಿದರು.

    ಈಗಾಗಲೇ ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದು, ರೈತರು ಪರಸ್ಪರ ಅಂತರ ಕಾಯ್ದುಕೊಳ್ಳುವ ಜತೆಗೆ ನೇರವಾಗಿ ತಮ್ಮ ತಮ್ಮ ಜಮೀನುಗಳಿಗೆ ತೆರಳಿ ಕಾರ್ಯಚಟುವಟಿಕೆ ನಿರ್ವಹಿಸಿ, ತಿರುಗಿ ಮನೆ ಸೇರಿ ತಮ್ಮ ಹಾಗೂ ಕುಟುಂಬದ ಸದಸ್ಯರ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

    ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ಸಿಪಿಐ ವಿಜಯ ಬಿರಾದಾರ, ಲಾಕ್​ಡೌನ್ ನಿಯಂತ್ರಿತ ಪ್ರದೇಶದ ಘಟನಾ ನಿಯಂತ್ರಕರಾದ ಕುಮಾರ ಕೆ.ಎಫ್., ಫರೀದ್ ರೇಶ್ಮಿ, ತಾ.ಪಂ. ಇಒ ಎಂ.ಎಸ್. ಮೇಟಿ, ಕಂದಾಯ, ಪೊಲೀಸ್, ಆರೋಗ್ಯ, ಸಿಡಿಪಿಒ ಇಲಾಖೆಗಳ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.

    52 ಜನರ ಗಂಟಲು ದ್ರವ ಸಂಗ್ರಹ: ದೇವಿಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬುಧವಾರ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 52 ಜನರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts