More

    ಕನ್ನಡ ಭಾಷೆಗೆ ಆದ್ಯತೆ ಕೊಡಿ  -ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿಕೆ -ಕಾನೂನು ಅರಿವು ಕಾರ್ಯಕ್ರಮ

    ದಾವಣಗೆರೆ: ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುವ ಜತೆಗೆ ಬೇರೆ ಭಾಷೆಗಳ ಜ್ಞಾನವನ್ನೂ ಹೊಂದಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
    ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ 68ನೇ ಕನ್ನಡ ರಾಜ್ಯೋತ್ಸವ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಹಲವಾರು ನೇತಾರರ ಹೋರಾಟದ ಫಲವಾಗಿ ರಾಜ್ಯ ಏಕೀಕರಣಗೊಂಡಿದ್ದು, ಪ್ರತಿಯೊಬ್ಬರೂ ಕನ್ನಡದಲ್ಲೇ ಮಾತನಾಡುವ ಮೂಲಕ ಮಾತೃಭಾಷೆಯ ಬೆಳವಣಿಗೆಗೆ ಪ್ರೋತ್ಸಾಹಿಸಬೇಕು. ಅನ್ಯ ಭಾಷೆಗಳನ್ನು ದ್ವೇಷಿಸದೆ ಗೌರವಿಸಬೇಕು ಎಂದು ತಿಳಿಸಿದರು.
    ಇತ್ತೀಚಿನ ದಿನಗಳಲ್ಲಿ ಉದ್ಯೋಗ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕಾಗಿದ್ದು, ಉದ್ಯೋಗಗಳಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದೆನಿಸಿದೆ. ಹೀಗಾಗಿ, ಇತರ ಭಾಷೆಗಳ ಪರಿಣತಿ ಹಾಗೂ ಜ್ಞಾನ ಪಡೆಯಬೇಕು ಎಂದು ಸಲಹೆ ನೀಡಿದರು.
    ಪ್ರಾಂತೀಯ ಭಾಷೆಗಳಲ್ಲಿ ತೀರ್ಪು ನೀಡಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ತೀರ್ಪು ಸಿಗುವಂತೆ ಮಾಡಲಾಗಿದ್ದು, ಇನ್ನೂ ಅಭಿವೃದ್ಧಿ ಆಗಬೇಕಿದೆ ಎಂದರು.
    ಅರಿಷಿಣ ಮತ್ತು ಕುಂಕುಮದ ಬಣ್ಣ ಹೊಂದಿರುವ ಕನ್ನಡ ಧ್ವಜವು ಮಂಗಳಕರ ಸಂಕೇತವಾಗಿದೆ. ಇದಕ್ಕೆ ಮನ್ನಣೆ ನೀಡಬೇಕು ಎಂಬ ಹೋರಾಟ ನಡೆದಿದ್ದು, ಕೇಂದ್ರ ಸರ್ಕಾರದಿಂದ ಮನ್ನಣೆ ದೊರೆಯಲಿ ಎಂದು ಆಶಿಸಿದರು.
    ಜಿಲ್ಲೆಯಲ್ಲಿ ಬಾಲ್ಯವಿವಾಹ ಹಾಗೂ ರಸ್ತೆ ನಿಯಮ ಉಲ್ಲಂಘನೆ ಪ್ರಕರಣ ಹೆಚ್ಚಾಗಿವೆ. ಕಾನೂನು ನಿಯಮ ಉಲ್ಲಂಘಿಸದೆ ಗೌರವ ನೀಡಬೇಕು. ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ನೀಡಲಾಗುತ್ತಿದ್ದು, ಕಾನೂನು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.
    ಕಾನೂನು ಸೇವಾ ಪ್ರಾಧಿಕಾರದಿಂದ ಹಳ್ಳಿಗಳಲ್ಲಿ ಜನತೆಗೆ ಕಾನೂನು ಅರಿವು ಮೂಡಿಸಲಾಗಿದೆ. ಎಲ್ಲಿಯೇ ಅನ್ಯಾಯ ನಡೆದರೂ ಪ್ರತಿಭಟಿಸಿ ನ್ಯಾಯಕ್ಕಾಗಿ ಹೋರಾಟ ನಡೆಸಬೇಕು. ಈ ಬಗ್ಗೆ ಕಾನೂನು ಸೇವಾ ಪ್ರಾಧಿಕಾರಕ್ಕೆ ತಿಳಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
    ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಶಿವಪ್ಪ ಗಂಗಪ್ಪ ಸಲಗೆರೆ ಮಾತನಾಡಿ, ದೇಶದಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರ ರಚಿಸಲಾಗಿದೆ. ಕಾನೂನು ಸಮಸ್ಯೆ ಹಾಗೂ ಯಾವುದೇ ಇಲಾಖೆಗಳ ಸೌಲಭ್ಯಗಳಿಗೆ ಇಲ್ಲಿ ನೆರವು ಪಡೆಯಬಹುದು ಎಂದು ಹೇಳಿದರು.
    ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣನವರ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್, ಕಾನೂನು ಸಲಹೆಗಾರರಾದ ಆರ್. ಭಾಗ್ಯಲಕ್ಷ್ಮಿ, ಡಾ.ಮುರಳಿ ಮೋಹನ್, ಕಾಂಗ್ರೆಸ್ ಮುಖಂಡ ಎಚ್. ಬಸವರಾಜಪ್ಪಗೌಡ್ರು, ಸೇನೆಯ ರಾಜ್ಯ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಎನ್.ಎಸ್. ಸುವರ್ಣಮ್ಮ, ಜಿಲ್ಲಾಧ್ಯಕ್ಷ ಬಿ. ಜಯಪ್ರಕಾಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನೀತಾ ನಂದೀಶ್ ಇತರರು ಇದ್ದರು. ಕರವೇ ಸ್ವಾಭಿಮಾನಿ ಸೇನೆ ರಾಜ್ಯಾಧ್ಯಕ್ಷ ನಿಂಗರಾಜ್‌ಗೌಡ್ರು ಅಧ್ಯಕ್ಷತೆ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts