More

    ಕನ್ನಡ ಕುವರ-ಕೌಸ್ತುಭ ಪ್ರಶಸ್ತಿ ಪ್ರದಾನ ನಾಳೆ  – ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಆಯೋಜನೆ

    ದಾವಣಗೆರೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಮಕ್ಕಳಿಗೆ ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಜು.29, 30ರಂದು ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ವಿವಿಧ ಪ್ರಶಸ್ತಿ ನೀಡಲಿದೆ.
    120 ರಿಂದ 124 ರವರೆಗೆ ಅಂಕ ಪಡೆದವರಿಗೆ ಜಿಲ್ಲಾ ಮಟ್ಟದಲ್ಲಿ ಕನ್ನಡ ಕುವರ-ಕುವರಿ ಜಿಲ್ಲಾ ಪ್ರಶಸ್ತಿ, 125ಕ್ಕೆ ಪೂರ್ಣ ಅಂಕ ಪಡೆದ ಮಕ್ಕಳಿಗೆ ರಾಜ್ಯ ಮಟ್ಟದ ಕನ್ನಡ ಕೌಸ್ತುಭ, 600ಕ್ಕೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ ರಾಜ್ಯ ವ್ಯಾಪ್ತಿಯ ಸರಸ್ವತಿ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಒಟ್ಟು 965 ಮಕ್ಕಳು ಪ್ರಶಸ್ತಿ ಪಡೆಯಲಿದ್ದು ಅವರಿಗೆ ತಿಲಕ, ಕನ್ನಡ ಕಂಕಣ ಕಟ್ಟಿ, ಆರತಿ ಬೆಳಗಿ, ಮಂಗಳ ವಾದ್ಯ, ಪೂರ್ಣಕುಂಗಳೊಂದಿಗೆ ಮೆರವಣಿಗೆಯಲ್ಲಿ ಸ್ವಾಗತಿಸಲಾಗುವುದು. ನಂತರ ಕಿರೀಟ ತೊಡಿಸಿ, ಪುಷ್ಪವೃಷ್ಟಿಯೊಂದಿಗೆ ಪದಕ, ಭುವನೇಶ್ವರಿಯ ಸ್ಮರಣಿಕೆ ನೀಡಲಾಗುವುದು ಎಂದು ಹೇಳಿದರು.
    ಜು. 29ರ ಬೆಳಗ್ಗೆ 10.30ಕ್ಕೆ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಸಮಾರಂಭ ಉದ್ಘಾಟಿಸುವರು. ಹಿರಿಯ ಗಾಯಕ ನಗರ ಶ್ರೀನಿವಾಸ್ ಉಡುಪ, ಆದರ್ಶ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ, ಕೆ.ಎಚ್.ಮಂಜುನಾಥ್, ಉದ್ಯಮಿ ಮೋತಿ ಪರಮೇಶ್ವರ ರಾವ್, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ ಭಾಗವಹಿಸುವರು.
    ಜು.30 ರಂದು ಬೆಳಗ್ಗೆ 10.30ಕ್ಕೆ ನಟ, ನಿರ್ದೇಶಕ ಟಿ.ಎಸ್.ನಾಗಾಭರಣ ಸಮಾರಂಭ ಉದ್ಘಾಟಿಸಲಿದ್ದು, ಡಾ. ನಾಗೇಶ್ ಸಂಜೀವ ಕಿಣಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಭಾಗವಹಿಸುವರು ಎಂದರು. ಕೆ.ಎಚ್. ಮಂಜುನಾಥ್, ವಾಸಂತಿ, ಜ್ಯೋತಿ ಗಣೇಶ್ ಶೆಣೈ, ಮಹದೇವ ಅಸಗೋಡು ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts