More

    ಕನ್ನಡ ಕಟ್ಟುವ ಕೆಲಸ ನಿರಂತರವಾಗಿರಲಿ

    ಗದಗ: ಮಾತೃಭಾಷೆ ಹೃದಯ ಭಾಷೆಯಾಗಬೇಕು. ಕನ್ನಡ ಕಟ್ಟುವ ಕೆಲಸ ನಿರಂತರವಾಗಿರಲಿ ಎಂದು ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

    ನಗರದ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ 9ನೇ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

    ಕರ್ನಾಟಕ ಸರ್ವ ಧರ್ಮಗಳ ನಾಡು. ಸಾಹಿತಿ ಹೋದರೂ ಸಾಹಿತ್ಯ ಅಜರಾಮರ. ಕನ್ನಡ ಸಾಹಿತ್ಯ, ಸಂಗೀತ, ಸಂಸ್ಕೃತಿಗೆ ಗದಗ ಜಿಲ್ಲೆ ಕೊಡುಗೆ ಅಪಾರ ನೀಡಿದೆ ಎಂದರು.

    ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಕನ್ನಡ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮಾತೃಭಾಷೆಗೆ ಅಪಾಯ ಖಚಿತ. ಸಮ್ಮೇಳನದ ನಿರ್ಣಯಗಳನ್ನು ಸರ್ಕಾರಕ್ಕೆ ಕಳುಹಿಸಿದರೆ ಜಾರಿಯಾಗುವುದಿಲ್ಲ. ನಿರ್ಣಯಗಳ ಕಾಗದಕ್ಕೆ ಗೆದ್ದಲು ಹತ್ತಿದರೂ ಸರ್ಕಾರ ಅದನ್ನು ತೆಗೆದು ನೋಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಸಮ್ಮೇಳನಾಧ್ಯಕ್ಷ ರವೀಂದ್ರ ಕೊಪ್ಪರ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ದೇಶ ಅನೇಕ ಸಾಧನೆ ಮಾಡಿದೆ. ಮುಂದಿನ ಐದು ವರ್ಷಗಳಲ್ಲಿ ಭವ್ಯ ಭಾರತವಾಗಿ ಹೊರಹೊಮ್ಮಲಿದೆ ಎಂದರು.

    ಕನ್ನಡಪರ ಸಂಘಟನೆಗಳಿಗೆ ಭಾಷೆ ಉಳಿಸುವ ದೊಡ್ಡ ಜವಾಬ್ದಾರಿ ಇದ್ದು, ಕಾರ್ಯಕರ್ತರು ಇದನ್ನು ಅರಿತು ಸಮರ್ಥವಾಗಿ ನಿಭಾಯಿಸಬೇಕು ಎಂದು ಸಲಹೆ ನೀಡಿದರು.

    ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಕನ್ನಡ ಕಷ್ಟದಲ್ಲಿದೆ. ಕರ್ನಾಟಕದಲ್ಲಿ ಕನ್ನಡ ಮಾತನಾಡುವುದೇ ತಪ್ಪು ಎಂಬ ಭಾವನೆ ಶುರುವಾಗಿದೆ. ಕನ್ನಡ ರಕ್ಷಣೆಗೆ ಪ್ರಾಧಿಕಾರ ಸ್ಥಾಪಿಸಬೇಕಾದ ಅನಿವಾರ್ಯತೆ ಎದುರಾಗಿದ್ದು ಬೇಸರದ ಸಂಗತಿ ಎಂದರು.

    ಕರ್ನಾಟಕ ಒಡೆಯುವ ಮಾತು ಬೇಡ. ಉತ್ತರ ಕರ್ನಾಟಕ ಅಭಿವೃದ್ಧಿ ಆಗಿಲ್ಲ ಎನ್ನುವುದಾದರೆ ಅದಕ್ಕೆ ನಾವೆಲ್ಲರೂ ಕಾರಣ. ಜವಾಬ್ದಾರಿ ಅರಿತು ಕೆಲಸ ಮಾಡಬೇಕಿದೆ. ಕಸಾಪಕ್ಕೆ ಮೂರು ಕೋಟಿ ಕನ್ನಡಿಗರು ಸದಸ್ಯರು ಆಗಬೇಕಿತ್ತು. ಈ ನಿಟ್ಟಿನಲ್ಲಿ ಕಸಾಪ ಸಮರ್ಪಕವಾಗಿ ಕೆಲಸ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಜಿಲ್ಲಾಧ್ಯಕ್ಷ ಶರಣು ಗೋಗೇರಿ ಸ್ವಾಗತಿಸಿದರು. ಶ್ರೀನಿವಾಸ ಕುಲಕರ್ಣಿ ಪ್ರಾರ್ಥಿಸಿದರು. ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ವಿ.ಕೆ. ಪಾಟೀಲ, ಎ.ಒ. ಪಾಟೀಲ ಮತ್ತಿತರರು ಇದ್ದರು.

    ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳಿ

    ಗದಗ: ಯುವಕರು ಕೇವಲ ಸರ್ಕಾರಿ ಮತ್ತು ಖಾಸಗಿ ನೌಕರಿಗೆ ಜೋತು ಬೀಳದೆ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಕ್ರಿಯಾಶೀಲತೆ ಮತ್ತು ಉದ್ಯಮಶೀಲತೆಯನ್ನು ಬೆಳೆಸಿಕೊಂಡಾಗ ಮಾತ್ರ ಜಿಲ್ಲೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು.

    ನಗರದ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಿರುವ ಜಿಲ್ಲಾ 9ನೇ ಸಾಹಿತ್ಯ ಸಮ್ಮೇಳನದಲ್ಲಿ ಗದಗ ಜಿಲ್ಲಾ ಅವಲೋಕನ ಗೋಷ್ಠಿಯಲ್ಲಿ ಅಭಿವೃದ್ಧಿ ಮತ್ತು ಸಾಧ್ಯತೆಗಳ ವಿಷಯ ಕುರಿತು ಮಾತನಾಡಿದರು.

    ನೆರೆಯ ಜಿಲ್ಲೆಗಳಿಗೆ ಹೋಲಿಸಿದರೆ ಗದಗ ಜಿಲ್ಲೆಯಲ್ಲಿ ಕೈಗಾರಿಕಾ ಮತ್ತು ಅಭಿವೃದ್ಧಿ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗಿಲ್ಲ. ಸರ್ಕಾರದೊಂದಿಗೆ ಸಮುದಾಯವು ಸ್ಪಂದಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಯುವಕರು ಜಡತ್ವ ತೊರೆದು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯಮ ಮತ್ತು ಕೈಗಾರಿಕೆ ಸ್ಥಾಪನೆಗೆ ಮುನ್ನುಗ್ಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಯುವಕರಿಗೆ ಪ್ರೋತ್ಸಾಹ ಮತ್ತು ಅನುಕೂಲತೆ ಒದಗಿಸಿಕೊಡಬೇಕೆಂದು ಸಲಹೆ ನೀಡಿದರು.

    ಪಾಪನಾಶಿಯ ಸರ್ಕಾರಿ ಆಯುರ್ವೆದ ಚಿಕಿತ್ಸಾಲಯದ ವೈದ್ಯಾಧಿಕಾರಿ ಅಶೋಕ ಮತ್ತಿಗಟ್ಟಿ ಸಾಮಾಜಿಕ ಸ್ವಾಸ್ಥ್ಯ ಕುರಿತು ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಲಿಂಗು ಬಳಿಗಾರ ಅವರು ಕೃಷಿ ಮತ್ತು ನೀರಾವರಿ ಕುರಿತು ಉಪನ್ಯಾಸ ನೀಡಿದರು.

    ಭಾಗ್ಯಲಕ್ಷ್ಮಿ ಬಿಳಿಮಗ್ಗದ ಆಶಯ ನುಡಿಗಳನ್ನಾಡಿದರು. ಸಿ.ವಿ. ಕೆರಿಮನಿ, ಫಕೀರೇಶ ಅಕ್ಕಿ, ಉಪನ್ಯಾಸಕಿ ಪ್ರಿಯಾಂಕಾ ನಡುವಿನಮನಿ ಇದ್ದರು. ಐ.ಎ. ರೇವಡಿ, ದತ್ತಪ್ರಸನ್ನ ಪಾಟೀಲ, ಮಂಜುನಾಥ ಕೊಕ್ಕರಗುಂದಿ, ಮಹೇಶ ಕುರಿ, ಸಿ.ಕೆ. ಕೇಸರಿ, ಕೆ.ಎಸ್. ಬೆನಕನವಾರಿ ನಿರ್ವಹಿಸಿದರು.

    ಪಂಥೀಯ ದೃಷ್ಟಿಕೋನದ ವಿಮರ್ಶೆ ಬೇಡ

    ಗದಗ: ಸೃಜನಶೀಲ ಸಾಹಿತ್ಯ ರಚನೆಯ ಸಂದರ್ಭದಲ್ಲಿ ಅನುಭವ ಮತ್ತು ಕಲ್ಪನೆಗೆ ಪ್ರಾಧಾನ್ಯತೆ ನೀಡಬೇಕು ಎಂದು ಜಿಲ್ಲಾ 9ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ರವೀಂದ್ರ ಕೊಪ್ಪರ ಹೇಳಿದರು.

    ಸಮ್ಮೇಳನಾಧ್ಯಕ್ಷರೊಂದಿಗೆ ನಡೆದ ಸಂವಾದ ಗೋಷ್ಠಿಯಲ್ಲಿ ಸೃಜನಶೀಲ ಸಾಹಿತ್ಯದಲ್ಲಿ ಬಲ ಹಾಗೂ ಎಡಪಂಥೀಯ ಒಲವುಗಳ ಕುರಿತಾದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.

    ‘ನಾನು ಬಲಪಂಥೀಯ ಚಿಂತನೆ ಮತ್ತು ಆದರ್ಶಗಳಿಗೆ ಬದ್ಧನಾಗಿದ್ದರೂ ಸೃಜನಶೀಲ ಸಾಹಿತ್ಯ ಕೃತಿಗಳಲ್ಲಿ ಅವುಗಳನ್ನು ಪ್ರತಿಪಾದಿಸಿಲ್ಲ. ಆಧುನಿಕ ಸಾಹಿತ್ಯ ಸಂದರ್ಭದಲ್ಲಿ ವಿಮರ್ಶಕರು ಸಾಹಿತಿಗಳನ್ನು ಪಂಥೀಯ ದೃಷ್ಟಿಕೋನದಿಂದ ನೋಡುವುದನ್ನು ಬಿಟ್ಟು, ವಸ್ತುನಿಷ್ಠ ಸಾಹಿತ್ಯ ಮೌಲ್ಯಗಳನ್ನು ತುಲನೆ ಮಾಡಿ ವಿಮರ್ಶೆ ಮಾಡಬೇಕಾದ ಅವಶ್ಯಕತೆ ಇದೆ’ ಎಂದು ಪ್ರತಿಪಾದಿಸಿದರು.

    ನಂತರ ನಡೆದ ರವೀಂದ್ರ ಕೊಪ್ಪರ ಅವರ ಬದುಕು ಬರಹ ಕುರಿತ ಚರ್ಚೆಯಲ್ಲಿ ಬಿ.ಎಂ. ಹರಪನಹಳ್ಳಿ, ಐ.ಕೆ. ಬಲೂಚಗಿ, ಡಾ.ಎಸ್.ಸಿ. ಚವಡಿ, ನೀಲಕಂಠ ಮರಡಿ, ಪ್ರಾಚಾರ್ಯ ಎಸ್.ಬಿ.ಕೆ. ಗೌಡರ, ಡಾ.ಕೆ.ಯೋಗೇಶನ್, ಪ್ರಾಚಾರ್ಯ ಬಿ.ಎಫ್. ಚೇಗರಡ್ಡಿ, ಎಸ್.ಎಂ. ಪಾಟೀಲ ಮತ್ತಿತರರು ಭಾಗವಹಿಸಿದ್ದರು.

    ಸಾಹಿತಿಗಳಾದ ಅಂದಾನಪ್ಪ ವಿಭೂತಿ ಅವರು ಸಮ್ಮೇಳನಾಧ್ಯಕ್ಷರ ಬದುಕು ಮತ್ತು ಬರಹ ಕುರಿತು ಮಾತನಡಿದರು. ಮಂಗಳಾ ಪಾಟೀಲ, ಎ.ವಿ. ಪ್ರಭು, ಬಿ.ಆರ್. ಪಟ್ಟಣಶೆಟ್ಟಿ, ಆರ್.ಬಿ. ಪವಾರ, ಬಿ.ಎ. ಬೋಯಟೆ, ಎಫ್.ಬಿ. ಧರಿಯಣ್ಣವರ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts