More

    ಕನ್ನಡದ ಅಹಮ್ಮಿಕೆ ತಪ್ಪಲ್ಲ -ರಂಗಕರ್ಮಿ ಟಿ.ಎಸ್.ನಾಗಾಭರಣ ಅಭಿಮತ -ಕನ್ನಡ ಕೌಸ್ತುಭ- ಸರಸ್ವತಿ ಪುರಸ್ಕಾರ ಪ್ರದಾನ 

    ದಾವಣಗೆರೆ: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಲಿಪಿಗಳ ರಾಣಿ ಎಂದು ಕರೆಸಿಕೊಳ್ಳುವ ಪ್ರೀತಿ-ಗೌರವ, ವೈಚಾರಿಕತೆ ಹಾಗೂ ಅತಿ ಮಧುರವಾದ ಭಾಷೆ ನಮ್ಮದು ಎಂಬ ಅಹಂಕಾರ-ಹೆಮ್ಮೆ ಪಡುವುದರಲ್ಲಿ ತಪ್ಪಿಲ್ಲ ಎಂದು ರಂಗಕರ್ಮಿ, ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಹೇಳಿದರು.
    ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಭಾನುವಾರ, ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಕೌಸ್ತುಭ- ಸರಸ್ವತಿ ಪುರಸ್ಕಾರ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    3 ಸಾವಿರ ವರ್ಷ ಇತಿಹಾಸವುಳ್ಳ ಕನ್ನಡ, ವೈಜ್ಞಾನಿಕವಾದ ಭಾಷೆ ಎಂಬುದಾಗಿ ಜಗತ್ತು ಒಪ್ಪಿಕೊಂಡಿದೆ. ಕನ್ನಡಿಗರು ಯಾವ ಕ್ಷೇತ್ರದ ಸಾಧನೆಯಲ್ಲೂ ಹಿಂದೆಬಿದ್ದಿಲ್ಲ. ಹೀಗಾಗಿ ಅಹಂಕಾರ ಪಡುವುದು ಅನಿವಾರ್ಯ. ಇಡೀ ವಿಶ್ವಕ್ಕೆ ಕನ್ನಡದ ಮಹತ್ವವನ್ನು ಹೇಳಬೇಕಿದೆ ಎಂದರು.
    ಸರ್ಕಾರದ ಎಲ್ಲ ಹಂತದಲ್ಲೂ ಕಾನೂನುಬದ್ಧವಾಗಿ ಕನ್ನಡ ಬಳಸುವಂತೆ ಸಮಗ್ರ ಭಾಷಾ ಆಭಿವೃದ್ಧಿ ಬಗ್ಗೆ ವಿಧೇಯಕವನ್ನು ಕಳೆದ ವರ್ಷ ಮಂಡಿಸಿದ್ದೇನೆ. ಯಾರೂ ಸಹ ಕನ್ನಡದ ಫಲಕ ಹಾಕುವುದಿಲ್ಲ ಎಂದು ಹೇಳುವ ಮಾತೇ ಇಲ್ಲ ಎಂದು ಹೇಳಿದರು.
    ಕರ್ನಾಟಕದಲ್ಲಿ ಪ್ರತಿ 20 ಕಿಮೀ ವ್ಯಾಪ್ತಿಗೆ ಕನ್ನಡ ಭಾಷೆ ಬದಲಾಗುತ್ತ ಹೋಗುತ್ತದೆ. ಬೆಂಗಳೂರು ಒಂದರಲ್ಲೇ 70 ರೀತಿಯ ಭಾಷಾ ಪ್ರಯೋಗ ನಡೆದಿವೆ. ಅದರ ನಡುವೆಯೂ ಕನ್ನಡದ ಅಸ್ಮಿತೆ ಕಾಯ್ದುಕೊಂಡಿದೆ. 8ನೇ ಶತಮಾನದಿಂದ ಇಂದಿನವರೆಗೂ ಕನ್ನಡ ಯಾರಿಗೂ ಬಾಗಿಲ್ಲ. ಸ್ವಲ್ಪ ಸಂಕುಚಿತ ಆಗಿರಬಹುದು. ಆದರೆ ಬೆಳೆಯುತ್ತಲೇ ಇದೆ ಎಂದು ತಿಳಿಸಿದರು.
    ಸಾಂಸ್ಕೃತಿಕ ಆಯಾಮ ಮತ್ತು ಸಾಂಸ್ಕೃತಿಕ ವೇದಿಕೆ ಬಗ್ಗೆ ಕಡೆಗಣನೆ ಸರಿಯಲ್ಲ. ನಾಟಕ, ಸಿನಿಮಾ, ಸಂಗೀತ, ನೃತ್ಯದ ಬಗ್ಗೆ ಕೀಳಿರಿಮೆ ಬೇಡ.ಸಾಂಸ್ಕೃತಿಕ ನೆಲೆ ಗಟ್ಟಿಯಾಗದಿರುವವರಲ್ಲಿ ಹೃದಯ ಶ್ರೀಮಂತಿಕೆ ಇರುವುದಿಲ್ಲ. ಎಲ್ಲರೂ ಐಟಿ-ಬಿಟಿ, ಇಂಜಿನಿಯರ್, ವೈದ್ಯರು ಆಗುವತ್ತ ಆಸ್ಥೆ ವಹಿಸಿದರೆ ಕಟ್ಟಡ ಕಟ್ಟುವ ಮೇಸ್ತ್ರಿ ಆಗಬೇಡವಾ? ಎಂದು ಪ್ರಶ್ನಿಸಿದರು.
    ನಿಜವಾದ ಶಿಕ್ಷಣ ಸಾಂಸ್ಕೃತಿಕ ಕ್ಷೇತ್ರಗಳಲ್ಲಿದೆ. ಸಾಹಿತ್ಯ ಸಂಸ್ಕೃತಿಯನ್ನು ಯಾರು ಹೃದಯದಲ್ಲಿ ಇರಿಸಿಕೊಂಡಿದ್ದಾರೋ ಅವರು ಸುಂಸ್ಕೃತರಾಗುತ್ತಾರೆ. ಭವಿಷ್ಯದಲ್ಲಿ ಸಮಾಜದ ಸುಧಾರಕರೂ ಆಗುತ್ತಾರೆ ಎಂದು ಹೇಳಿದರು.
    ಮೊಬೈಲ್ ಬಳಕೆಗೆ ಸೀಮಿತವಾದ ಉಪಕರಣವಷ್ಟೆ. ನಮ್ಮ ನೆನಪುಗಳನ್ನು ಅದು ಕಳೆದುಹಾಕಲಿದೆ. ಕೃತಕ ಬುದ್ಧಿಮತ್ತೆ ಮೂಲಕ ಮನುಷ್ಯನಿಗೆ ಮತ್ತೊಂದು ರೂಪ ನೀಡುವ ಪ್ರಯತ್ನ ನಡೆದಿದೆ. ಮಾನವರಲ್ಲಿ ಇರಬೇಕಾದ ಮನುಷ್ಯತ್ವ- ಮಾನವೀಯತೆಗೆ ಯಂತ್ರಕ್ಕಿಲ್ಲದ ಹೃದಯವಿದೆ ಎಂದು ತಿಳಿಸಿದರು.
    ಎಸ್ಸೆಸ್ಸೆಲ್ಸಿಯ ಕನ್ನಡ ಭಾಷಾ ಪತ್ರಿಕೆಯಲ್ಲಿ ಪೂರ್ಣ 125 ಅಂಕ ಪಡೆದವರಿಗೆ ಕನ್ನಡ ಕೌಸ್ತುಭ ಹಾಗೂ ಹೆಚ್ಚು ಅಂಕ ಪಡೆದವರಿಗೆ ಸರಸ್ವತಿ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ಅಧ್ಯಕ್ಷ ಡಾ. ನಾಗೇಶ್ ಸಂಜೀವ ಕಿಣಿ, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಕಲಾಕುಂಚ ಸಂಸ್ಥೆಯ ವಾಸಂತಿ ಮಂಜುನಾಥ್, ಸಾಲಿಗ್ರಾಮ ಗಣೇಶ ಶೆಣೈ, ಸಾಧಕಿ ಭೂಮಿಕಾ ರಮೇಶ್ ಪೈ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts