More

    ಕಚೇರಿಗಳ ಪಹರೆಗಿನ್ನು ಹೋಂಗಾರ್ಡ್ಸ್ -ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಭರವಸೆ -ರಾಷ್ಟ್ರೀಯ ಗೃಹರಕ್ಷಕರ ದಿನಾಚರಣೆ 

    ದಾವಣಗೆರೆ: ಜಿಲ್ಲಾ ಮಟ್ಟದ ಕಚೇರಿಗಳಲ್ಲಿ ಭದ್ರತೆ, ಪಹರೆ ಕಾರ್ಯಕ್ಕಾಗಿ ಗೃಹರಕ್ಷಕರನ್ನು ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.
    ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ನಗರದ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಅಖಿಲ ಭಾರತ ಗೃಹ ರಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಜಿಲ್ಲಾ ಸಮಾದೇಷ್ಠರ ಮನವಿಗೆ ಸ್ಪಂದಿಸಿದ ಡಿಸಿ, ಕೆಲವೆಡೆ ಖಾಸಗಿ ಸಂಸ್ಥೆಗಳ ಮೂಲಕ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗುತ್ತಿದೆ. ಕೆಲ ಕಚೇರಿಗಳಿಗೆ ಭದ್ರತಾ ಕೆಲಸಗಾರರು ಇರುವುದಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಅಗತ್ಯವಿರುವ ಎಲ್ಲ ಕಚೇರಿಗಳಲ್ಲಿ ಗೃಹರಕ್ಷಕರನ್ನು ಬಳಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
    ರಾಷ್ಟ್ರೀಯ ಹಬ್ಬಗಳಿಂದ ಹಿಡಿದು ಚುನಾವಣೆಗಳವರೆಗೂ ಎಲ್ಲ ರೀತಿಯ ಭದ್ರತಾ ಕಾರ್ಯಗಳಲ್ಲಿ ಗೃಹರಕ್ಷಕ ದಳ ತೊಡಗಿಕೊಂಡಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲೂ ಇಲಾಖೆ ಜತೆ ನೆರವಾಗುತ್ತಿದೆ ಎಂದು ತಿಳಿಸಿದರು.
    ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ, ಪ್ರಸಕ್ತ ಪೊಲೀಸ್ ಠಾಣೆಗಳಿಗೆ 20 ಗೃಹ ರಕ್ಷಕರನ್ನು ನಿಯೋಜಿಸಲಾಗಿದೆ. ಇವರ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದರು.
    ಸಂಚಾರ ವ್ಯವಸ್ಥೆ, ಕಾನೂನು ಸುವ್ಯವಸ್ಥೆ ಸೇರಿ ಇನ್ನಿತರ ಕರ್ತವ್ಯಗಳಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಪೊಲೀಸರಷ್ಟೇ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ಅಧ್ಯಕ್ಷತೆ ವಹಿಸಿದ್ದ ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಠ ಡಾ. ಎಸ್.ಎಚ್.ಸುಜಿತ್‌ಕುಮಾರ್ ಮಾತನಾಡಿ, ಗೃಹರಕ್ಷಕ ದಳದವರು ಇನ್ನಷ್ಟು ಕರ್ತವ್ಯನಿಷ್ಠೆ ಹಾಗೂ ಶಿಸ್ತಿನಿಂದ ಉನ್ನತ ಹಂತದತ್ತ ತಲುಪಬೇಕಿದೆ. ಗೃಹರಕ್ಷಕ ತಂಡಕ್ಕೆ ಇನ್ನಷ್ಟು ಮೌಲ್ಯ ತರಬೇಕಿದೆ ಎಂದರು.
    ಪ್ಲಟೂನ್ ಕಮಾಂಡರ್ ಮಂಜುನಾಥ್, ಹೊನ್ನಾಳಿ ಘಟಕಾಧಿಕಾರಿ ನಾಗರಾಜಪ್ಪ, ಹರಿಹರ ಘಟಕಾಧಿಕಾರಿ ಗುರುನಾಥ್ ಸೇರಿ 25ಕ್ಕೂ ಹೆಚ್ಚು ವರ್ಷದ ಸೇವೆ ಸಲ್ಲಿಸಿದ ಗೃಹರಕ್ಷಕ ದಳದ ಅಧಿಕಾರಿ-ಸಿಬ್ಬಂದಿಯನ್ನು ಗೌರವಿಸಲಾಯಿತು. ಇದೇ ವರ್ಷ ನಿವೃತ್ತರಾದ ಮೂವರು ಗೃಹರಕ್ಷಕರನ್ನು ಸನ್ಮಾನಿಸಲಾಯಿತು. ಸ್ಟಾಫ್ ಆಫೀಸರ್ ಕೆ. ಸರಸ್ವತಿ ಇದ್ದರು.
    ದೇವರಬೆಳಕೆರೆಯ ಗೃಹ ರಕ್ಷಕ ತರಬೇತಿ ಕೇಂದ್ರದ ತರಬೇತುದಾರ ಕಿಶೋರ್‌ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಮನ್ಸೂ ಅಹ್ಮದ್ ವರದಿ ವಾಚಿಸಿದರು. ನಿಜಗುಣ ಶಿವಯೋಗಿ ಪ್ರಾರ್ಥಿಸಿದರು. ಕೆ.ಎಸ್. ಅಮರೇಶ್ ಸ್ವಾಗತಿಸಿದರು. ಎಂ. ರಾಘವೇಂದ್ರ ವಂದಿಸಿದರು.
    ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts