More

    ಓದುಗರ ಹೃದಯ ತಟ್ಟಲಿ ಸಾಹಿತ್ಯ, ರಾಜ್ಯಸಭಾ ಸದಸ್ಯ ಹನುಮಂತಯ್ಯ ಆಶಯ

    ನೆಲಮಂಗಲ: ಕವಿಗೆ ಕನ್ನಡ ಪರಂಪರೆಯ ಅರಿವಿರಬೇಕು. ಸಾಹಿತ್ಯದ ಉದ್ದೇಶ ಲೋಕಲ್ಯಾಣವಾಗಿರಬೇಕು ಎಂದು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.

    ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಚಿಗುರು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ರಂಗಶಿಕ್ಷಣ ಕೇಂದ್ರ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಸಾಹಿತಿ ಆನಂದ್ ವೈ.ಮೌರ್ಯ ರಚಿಸಿದ್ದ ‘ ಒಂದು ಪಾದದ ಗುರುತು’ ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದರು.

    ಕವಿಯಾಗಲು ತಪಸ್ಸು ಮಾಡಬೇಕೆಂದಿಲ್ಲ. ಲೋಕದ ಜನಜೀವನ ಗ್ರಹಿಸಿ ತನ್ನದೇ ಭಾಷಾ ಶೈಲಿಯಲ್ಲಿ ಅಭಿವ್ಯಕ್ತ ಪಡಿಸಬಹುದಾಗಿದೆ. ಕಥೆ ಕವನಗಳು ಓದುಗರ ಹೃದಯ ತಟ್ಟಬೇಕಿದೆ. ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿರುವ ಜನಪದರು, ಶಿವಶರಣರು, ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದವರಲ್ಲ. ಕನ್ನಡದಲ್ಲೂ ಅತ್ಯುತ್ತಮವಾಗಿ ಬರೆಯಬಹುದು ಎಂಬುದನ್ನು ಈಗಾಗಲೇ ಅನೇಕರು ಸಾಧಿಸಿ ತೋರಿಸಿದ್ದಾರೆ. ಅಂದಿನ ಕುಮಾರವ್ಯಾಸ ರಾಜಾಳ್ವಿಕೆ ಕುರಿತಾಗಿ ರಚಿಸಿದ ಕಾವ್ಯ ಇಂದಿಗೂ ಪ್ರಸ್ತುತವೆನಿಸಿದೆ ಎಂದರು.
    ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಆಧುನಿಕತೆಯ ಹೆಸರಿನಲ್ಲಿ ಕನ್ನಡ ಸಾಹಿತ್ಯದ ಕಡೆಗಣನೆಯಿಂದಾಗಿ ಸಮಾಜದಲ್ಲಿ ಕೆಲ ಅನರ್ಥಗಳು ನಡೆಯುತ್ತಿವೆ. ಯುವ ಜನತೆಯಲ್ಲಿ ಸಾಹಿತ್ಯಾಸಕ್ತಿ ಕಡಿಮೆ ಆಗಿರುವ ಸನ್ನಿವೇಶದಲ್ಲಿ ಕನ್ನಡ ಭಾಷೆಯ ವಿಶೇಷ ಅಭಿಮಾನವಿರಿಸಿಕೊಂಡಿರುವ ಆನಂದ್ ವೈ.ಮೌರ್ಯ ಕವನಸಂಕಲನ ರಚಿಸಿರುವುದು ಸಂತಸದ ವಿಚಾರ ಎಂದರು.

    ಕನ್ನಡದ ಪುಸ್ತಕಗಳನ್ನು ಖರೀದಿಸಿ ಓದುವ ಪರಿಪಾಠ ಬೆಳೆಸಿಕೊಂಡಲ್ಲಿ ಕವಿಗಳ ಜತೆಗೆ ಸಾಹಿತ್ಯದ ಬೆಳವಣಿಗೆ ಆಗಲಿದೆ. ಸಹಸ್ರಾರು ಇತಿಹಾಸವಿರುವ ಹಿಂದು ಧರ್ಮದ ರಕ್ಷಣೆ ಆಗಬೇಕಿದೆ. ವಿನಾಕಾರಣ ರಾಜಕಾರಣ, ಧರ್ಮಗುರುಗಳನ್ನು ದೂರದೆ ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿ ಅರಿತು ಬಾಳುವ ಅವಶ್ಯವಿದೆ ಎಂದರು.

    ಕರೊನಾ ಸಂದರ್ಭದಲ್ಲಿ ಸಾಮಾಜಿಕ ಕಳಕಳಿಯ ಕೆಲಸ ಮಾಡಿದ ಕರೊನಾ ಸೇನಾನಿಗಳನ್ನು ಗೌರವಿಸಲಾಯಿತು. ಖ್ಯಾತ ಜಾನಪದ ಗಾಯಕ ಚಿಕ್ಕಮಾರನಹಳ್ಳಿ ಸಿದ್ಧಯ್ಯ ಮತ್ತು ತಂಡದಿಂದ ಗೀತಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಸಾಹಿತಿ ಮಣ್ಣೆ ಮೋಹನ್, ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಮಹಾಲಿಂಗಪ್ಪ ವಿ.ನೆಗಳೂರು, ಪ್ರಾಧ್ಯಾಪಕಿ ಡಾ.ಪುಷ್ಪಾ, ರಂಗಶಿಕ್ಷಣ ಕೇಂದ್ರ ಸಂಸ್ಥಾಪಕ ಅಧ್ಯಕ್ಷ ಸಿದ್ದರಾಜು, ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಜಿ.ಕೆ.ಸುಗ್ಗರಾಜು, ಅಧ್ಯಕ್ಷ ಆರ್.ಪ್ರಮೋದ್‌ಕುಮಾರ್, ಉಪಾಧ್ಯಕ್ಷ ಚಿಕ್ಕರಾಜು, ಕಾರ್ಯದರ್ಶಿ ಅಭಿಷೇಕ್, ಖಜಾಂಚಿ ಮಹಾಂತೇಶ್, ಕಸಾರ ಅಧ್ಯಕ್ಷ ಸಿದ್ದರಾಜು, ಕಸಾಪ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್, ಸಣ್ಣಿ ಟ್ರಸ್ಟ್ ಅಧ್ಯಕ್ಷ ವಕೀಲಬೈಲಪ್ಪ, ಕಲಾವಿದರಾದ ಕಿಟ್ಟಿ, ದಿನೇಶ್, ಸಿದ್ದಯ್ಯ, ಮುಖಂಡರಾದ ಗಂಗರುದ್ರಯ್ಯ, ಪ್ರದೀಪ್, ವಕೀಲ ಕನಕರಾಜು, ಮಂಜುನಾಥಯ್ಯ, ನಾಗರತ್ನಮ್ಮ, ಹನುಮಂತಪ್ಪ ಮತ್ತಿತರರು ಉಪಸ್ಥಿತರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts