More

    ಒಂದೇ ಮನೆಯಲ್ಲಿ 60 ಹಾವಿನ ಮರಿ ಪತ್ತೆ

    ನರಗುಂದ: ಹಾವಿನ ದ್ವೇಷ ಹನ್ನೆರಡು ವರುಷ, ನನ್ನ ರೋಷ ನೂರು ವರುಷ…, ಇದು ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಡಿರುವ ನಾಗರಹಾವು ಚಿತ್ರದ ಗೀತೆ. ಆದರೆ, ಇಲ್ಲೊಂದು ಕುಟುಂಬಕ್ಕೆ ಹಾವಿನ ದ್ವೇಷವೋ ಏನೋ ಗೊತ್ತಿಲ್ಲ. ಒಂದೇ ಮನೆಯಲ್ಲಿ 60ಕ್ಕೂ ಅಧಿಕ ಹಾವಿನ ಮರಿಗಳು ಕಾಣಿಸಿಕೊಂಡಿದ್ದರಿಂದ ಈ ಮನೆಯವರು ಸ್ವಂತ ಮನೆಯಲ್ಲಿ ವಾಸಿಸಲು ಭಯಪಡುವಂತಾಗಿದೆ.

    ಹೌದು. ಪಟ್ಟಣದ ವಿದ್ಯಾಗಿರಿ ಬಡಾವಣೆಯ ನಿವಾಸಿ, ಅಂಗನವಾಡಿ ಕಾರ್ಯಕರ್ತೆ ಕಮಲಾಕ್ಷ್ಮೀ ಕಲ್ಮೇಶ ಕುಲಕರ್ಣಿ ಎಂಬುವರ ಮನೆಯಲ್ಲಿ ನಿತ್ಯ ಹಾವಿನ ಮರಿಗಳು ಕಾಣಿಸಿಕೊಳ್ಳುತ್ತಿದ್ದು, ಬಹುತೇಕ ಮರಿಗಳನ್ನು ಉರಗ ರಕ್ಷಕ ಬಿ.ಆರ್. ಸುರೇಬಾನ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಕೆಲ ಮರಿಗಳನ್ನು ಅನಿವಾರ್ಯ ಕಾರಣದಿಂದ ಕುಟುಂಬಸ್ಥರು ಹೊಡೆದು ಸಾಯಿಸಿದ್ದಾರೆ. ನಿತ್ಯ ಒಂದಿಲ್ಲೊಂದು ಹಾವಿನ ಮರಿ ಕಾಣಿಸಿಕೊಳ್ಳುತ್ತಿರುವುದರಿಂದ ಕಮಲಾಕ್ಷ್ಮೀ ಅವರು ಭಯಭೀತರಾಗಿದ್ದಾರೆ.

    ಮಾ. 14ರಂದು 35ಕ್ಕೂ ಅಧಿಕ ನೀರು ಹಾವಿನ ಮರಿಗಳು ಕಾಣಿಸಿಕೊಂಡಿದ್ದವು. ಅದೇ ದಿನ ರಾತ್ರಿ 9 ಗಂಟೆಗೆ ಮತ್ತೆ 4 ಹಾವಿನ ಮರಿಗಳು ಕಾಣಿಸಿಕೊಂಡವು. 15ರಂದು 3, 16ರಂದು ನೀರಿನ ಟ್ಯಾಂಕ್​ನಲ್ಲಿ 2, 17ರಂದು 3, 18ರಂದು 7 ಹಾವಿನ ಮರಿಗಳು ಸೇರಿ ಈವರೆಗೆ 60 ಹಾವಿನ ಮರಿಗಳನ್ನು ರಕ್ಷಿಸಲಾಗಿದೆ. 6 ಹಾವಿನ ಮರಿಗಳನ್ನು ಸಾಯಿಸಲಾಗಿದೆ.

    ಇಷ್ಟೊಂದು ನೀರು ಹಾವಿನ ಮರಿಗಳನ್ನು ಸೆರೆ ಹಿಡಿದಿರುವುದು ನಾನು ಇದೆ ಮೊದಲು. ಈ ಹಾವು ಪ್ರತಿವರ್ಷ ಮಾರ್ಚ್, ಏಪ್ರಿಲ್​ನಲ್ಲಿ 70 ರಿಂದ 80 ಮೊಟ್ಟೆಗಳನ್ನು ಹಾಕುತ್ತದೆ. ಅಗತ್ಯದ ಆಹಾರ ಸೂಕ್ತ ರಕ್ಷಣೆ ಹೊಂದಿರುವ ಸ್ಥಳದಲ್ಲಿ ವಾಸಿಸುವುದರಿಂದ ಸಾರ್ವಜನಿಕರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು.

    | ಬಿ.ಆರ್. ಸುರೇಬಾನ

    ಉರಗ ರಕ್ಷಕ

    ವಿದ್ಯಾಗಿರಿಯ ನಮ್ಮ ಮನೆ ಪಾಟಿಗಲ್ಲು ಕೆಳಗಡೆ ಮಾ. 14 ರಿಂದ 18ರವರೆಗೆ ನಿರಂತರವಾಗಿ ನೀರು ಹಾವಿನ ಮರಿಗಳು ಕಾಣಿಸಿಕೊಂಡಿವೆ. ಇದರಿಂದ ಇತ್ತೀಚೆಗೆ ಮದುವೆಯಾದ ನಮ್ಮ ಮಗಳು ಮನೆ ತೊರೆಯುವ ಬಗ್ಗೆ ಮಾತುಗಳನ್ನಾಡಿದ್ದರು. ನಮಗೆ ಬಾಡಿಗೆ ಮನೆಯಲ್ಲಿರಲು ಆಗುವುದಿಲ್ಲ. 19ರಂದು ಯಾವುದೇ ಹಾವಿನ ಮರಿ ಕಾಣಿಸಿಕೊಂಡಿಲ್ಲ. ಹೀಗಾಗಿ ಮನೆ ತೊರೆಯುವ ನಿರ್ಧಾರದಿಂದ ಹಿಂದೆ ಸರಿದಿದ್ದೇವೆ. ಮುಂದೊಂದು ದಿನ ವಿಶೇಷ ಪೂಜೆ ಮಾಡಿಸಿ ಶಾಂತಿ ಮಾಡಿಸುತ್ತೇನೆ.

    | ಕಮಲಾಕ್ಷಿ ಮನೆಯ ಮಾಲಕಿ

    ನೀರು ಹಾವುಗಳು ವಿಷಕಾರಿ ಅಲ್ಲ. ಆದ್ದರಿಂದ ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ. ಬಹುತೇಕ ಹಾವುಗಳು ನಿರ್ಜನ ಪ್ರದೇಶಗಳಲ್ಲಿ ಮೊಟ್ಟೆಗಳನ್ನು ಹಾಕಿ ಸಂತತಿ ಬೆಳೆಸುತ್ತವೆ. ಆದರೆ, ಇಷ್ಟೊಂದು ಪ್ರಮಾಣದ ಮರಿಗಳು ಮನೆ ಪಾಟಿಗಲ್ಲು ಕೆಳಗಡೆ ಕಾಣಿಸಿಕೊಂಡಿರುವುದು ಬಹಳ ವಿಶೇಷ ಹಾಗೂ ಅಪರೂಪವಾಗಿದೆ.

    | ಮಂಜುನಾಥ ನಾಯಕ ಉರಗ ತಜ್ಞ ನರಗುಂದ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts