More

    ಎಸ್ಸೆಸ್ಸೆಲ್ಸಿ 281 ವಿದ್ಯಾರ್ಥಿಗಳು ಗೈರು

    ಚಿತ್ರದುರ್ಗ: ಜಿಲ್ಲಾದ್ಯಂತ 78 ಕೇಂದ್ರಗಳಲ್ಲಿ ಪ್ರಥಮ ಭಾಷೆ ಕನ್ನಡ ವಿಷಯದೊಂದಿಗೆ ಸೋಮವಾರ ಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲು ವಿದ್ಯಾರ್ಥಿ ಸಮೂಹದಲ್ಲಿ ಎಲ್ಲಿಲ್ಲದ ಅತ್ಯುತ್ಸಾಹ ಕಂಡುಬಂದಿತು. 22,130 ವಿದ್ಯಾರ್ಥಿಗಳು ಹಾಜರಾಗಿ, 281 ಮಂದಿ ಗೈರಾಗಿದ್ದರು.

    ಮೊದಲ ದಿನದ ಪರೀಕ್ಷೆಗೆ ಹೊಸಬರ ಪೈಕಿ 22,236 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, ಅದರಲ್ಲಿ 258 ಗೈರಾಗಿ, 21,978 ಮಂದಿ ಹಾಜರಾಗಿದ್ದರು.

    ಅದೇ ರೀತಿ ಪುನರಾವರ್ತಿತ 175ರ ಪೈಕಿ 23 ಮಂದಿ ಗೈರಾಗಿ, ಇನ್ನುಳಿದ 152 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

    ಶುಭ ಕೋರಿದ ಕುಟುಂಬ: ಪರೀಕ್ಷೆಗೆ ತಯಾರಾಗಿ ಕೇಂದ್ರಕ್ಕೆ ಹೊರಡುತ್ತಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅವರ ಪಾಲಕರು, ಕುಟುಂಬದ ಸದಸ್ಯರು, ಸ್ನೇಹಿತರು, ನೆರೆಹೊರೆಯವರು ಶುಭ ಕೋರಿದ ದೃಶ್ಯ ಹಲವೆಡೆ ಕಂಡುಬಂದಿತು.

    ವಿದ್ಯಾರ್ಥಿ ಸಮೂಹ 1 ಗಂಟೆ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರ ತಲುಪಿ ತಮ್ಮ ನೋಂದಣಿ ಸಂಖ್ಯೆ ಇರುವ ಕುರಿತು ಖಚಿತ ಪಡಿಸಿಕೊಂಡರು. ತಂದೆ-ತಾಯಿ, ಅಜ್ಜ-ಅಜ್ಜಿ ಕೈಹಿಡಿದುಕೊಂಡು ಕೇಂದ್ರದೊಳಗೆ ಬಿಟ್ಟು ಹೋಗುವ ದೃಶ್ಯ ಸಾಮಾನ್ಯವಾಗಿತ್ತು.

    ಆಯಾ ಕೇಂದ್ರದ ಆವರಣದಲ್ಲಿ ವಿದ್ಯಾರ್ಥಿಗಳು ಕುಳಿತು ವಿಷಯಕ್ಕೆ ಸಂಬಂಧಿಸಿದಂತೆ ಸ್ನೇಹಿತರೊಂದಿಗೆ ಗುಂಪು ಚರ್ಚೆಯಲ್ಲಿ ತೊಡಗಿದರೆ, ಇನ್ನೂ ಕೆಲವರು ಅಭ್ಯಾಸದಲ್ಲಿ ಮಗ್ನರಾಗಿದ್ದರು. ಪರೀಕ್ಷಾ ಸಮಯದ ಕರೆಗಂಟೆ ಬಂದೊಡನೆ ಒಳಗೆ ಪ್ರವೇಶಿಸಿ ಪ್ರಶ್ನೆ ಪತ್ರಿಕೆ ಎದುರಿಸಲು ಸನ್ನಧರಾದರು.

    ಜಿಲ್ಲೆಯಲ್ಲಿ ಪರೀಕ್ಷೆ ಸಂಬಂಧ ಯಾವುದೇ ಅವ್ಯವಹಾರ ನಡೆದಿಲ್ಲ. ಯಾವ ವಿದ್ಯಾರ್ಥಿಗೂ ತೊಂದರೆ ಉಂಟಾಗಿಲ್ಲ. ಎಲ್ಲರೂ ಸುಸೂತ್ರವಾಗಿ ಪರೀಕ್ಷೆ ಬರೆದಿದ್ದಾರೆ ಎಂದು ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts