More

    ಎಲ್ಲೆಲ್ಲೂ ಮಾವಿನ ಹಣ್ಣುಗಳ ಕಾರುಬಾರು

    ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
    ನಗರದಲ್ಲಿ ಎಲ್ಲಿ ಕಣ್ಣಾಯಿಸಿದರೂ ಹಣ್ಣುಗಳ ರಾಜ ಮಾವಿನ ಹಣ್ಣುಗಳದ್ದೇ ಕಾರುಬಾರು. ಕಳೆದ ವರ್ಷಕ್ಕಿಂತ ಈ ಬಾರಿ ವ್ಯಾಪಾರ ಜೋರಾಗಿದೆ.
    ನಗರದ ಹಣ್ಣಿನ ಮಾರುಕಟ್ಟೆ ಸೇರಿ ಪ್ರಮುಖ ಬೀದಿಗಳ ರಸ್ತೆ ಬದಿಯಲ್ಲೂ ಮಾರಾಟದ ಭರಾಟೆ ಕಂಡುಬರುತ್ತಿದೆ.
    ಬೇನಿಶ, ಮಲ್ಲಿಕಾ, ಬಾದಾಮಿ, ತಾಳಪಾಡ, ಚಾಕೊಲೆಟ್, ತೋತಾಪುರಿ, ನೀಲಂ, ಕೇಸರಿ ಹೀಗೆ ವಿವಿಧ ತಳಿಯ ಹಣ್ಣುಗಳು ರಾರಾಜಿಸುತ್ತಿದ್ದು, ಅವುಗಳ ಸುಗಂಧ, ಗಾತ್ರ, ಬಣ್ಣ ಹಾಗೂ ಕಣ್ಮನ ಸೆಳೆಯುವ ರೀತಿಯಲ್ಲಿ ಜೋಡಿಸಿಟ್ಟ ಪರಿ ನೋಡಿದರೆ ಎಂಥ ವರಾದರೂ ಕೊಳ್ಳದೆ ಇರಲಿಕ್ಕಿಲ್ಲ.
    ಈ ಮಾವಿನ ಹಣ್ಣುಗಳು ತಾಲೂಕಿನ ಗಡಿಭಾಗದಲ್ಲಿ ವ್ಯವಹಾರಿಕವಾಗಿ ದ್ವಿಭಾಷಿಗರ ಸಂಬಂಧ ಬೆಸೆಯುವಲ್ಲೂ ಪ್ರಮುಖ ಪಾತ್ರ ವಹಿಸಿವೆ. ಸಮೀಪದ ಆಂಧ್ರಪ್ರದೇಶದ ಕುಂದುರ‌್ಪಿ ಮಂಡಲ ಕಡೆಯಿಂದ ತಾಲೂಕು ಕೇಂದ್ರಕ್ಕೆ ಲೋಡುಗಟ್ಟಲೇ ಹಣ್ಣುಗಳು ಸರಬರಾಜು ಆಗುತ್ತಿವೆ. ಗೋಣಿ ಚೀಲಗಳಲ್ಲಿ ಮತ್ತು ಪ್ಲಾಸ್ಟಿಕ್ ಬಾಕ್ಸ್‌ಗಳಲ್ಲಿ ಬರುವ ಹಣ್ಣುಗಳನ್ನು ಸ್ಥಳೀಯ ವ್ಯಾಪಾರಸ್ಥರು ಕ್ವಿಂಟಲ್‌ಗಟ್ಟಲೇ ಖರೀದಿ ಮಾಡುತ್ತಿದ್ದಾರೆ.
    ನಿಗದಿಪಡಿಸಿಕೊಂಡಿರುವ ಗೋದಾಮುಗಳಲ್ಲಿ ಹುಲ್ಲು ಬಳಸಿ ಕಾಯಿಗಳನ್ನು ಹಣ್ಣು ಮಾಡಿಕೊಂಡು ಮಾರಾಟ ಮಾಡುವಲ್ಲಿ ವ್ಯಾಪಾರಸ್ಥರು ಮುಂದಾಗಿದ್ದಾರೆ. 1 ಕೆಜಿಗೆ 5ರಿಂದ 6 ರೂ. ಲಾಭ ಕಾಣುತ್ತೇವೆ ಎನ್ನುತ್ತಾರೆ ಬೀದಿಬದಿ ವ್ಯಾಪಾರಸ್ಥರು.
    ಅತಿ ಸಿಹಿಯಾದ ಬೇನಿಶ ಹಣ್ಣನ್ನು ಶುಭಕಾರ್ಯಗಳಲ್ಲಿ ಹೋಳಿಗೆ ಶೀಕರಣೆಗೆ ಖರೀದಿ ಮಾಡುತ್ತಾರೆ. ತೋತಾಪುರಿ ಹಣ್ಣನ್ನು ಉಪ್ಪು, ಖಾರದಪುಡಿ ಹಾಕಿಕೊಂಡು ತಿನ್ನಲು ಬಳಸುತ್ತಾರೆ. ಜೇನುತುಪ್ಪದಷ್ಟೇ ಸಿಹಿಯಾದ ಬಾದಾಮಿ, ಮಲ್ಲಿಕಾ ಹಣ್ಣನ್ನು ಹುಡುಕಿಕೊಂಡು ಬಂದು ಖರೀದಿ ಮಾಡಿಕೊಂಡು ಹೋಗುವವರೂ ಇದ್ದಾರೆ ಎನ್ನುತ್ತಾರೆ ರಸ್ತೆಬದಿ ವ್ಯಾಪಾರಿ ಅನಿತಮ್ಮ.

    ಸ್ಥಳೀಯವಾಗಿ ಮಾವು ಬೆಳೆ ಕೊರತೆ ಇದೆ. ಆಂಧ್ರಪ್ರದೇಶದಿಂದ ಬರುವ ಮಾಲಿಗೆ ಬಾಡಿಗೆ ಮತ್ತು ಖರ್ಚು ಜತೆಗೆ ಮಧ್ಯವರ್ತಿಗಳ ಲೆಕ್ಕಾಚಾರದಲ್ಲಿ ಸ್ಥಳೀಯ ವ್ಯಾಪಾರಸ್ಥರಿಗೆ ಅಧಿಕ ಬೆಲೆಗೆ ಮಾರಾಟ ಮಾಡುತ್ತಾರೆ. ಕೆಜಿ 35ರಿಂದ 40ರಂತೆ ಕ್ವಿಂಟಾಲ್‌ಗಟ್ಟಲೆ ಖರೀದಿ ಮಾಡಿಕೊಂಡು 50ರಿಂದ 60 ರೂ. ಗೆ ಮಾರಾಟ ಮಾಡಿಕೊಳ್ಳುತ್ತೇವೆ.
    ಬುಡ್ನಹಟ್ಟಿ ನಿಂಗಮ್ಮ, ಬೀದಿಬದಿ ವ್ಯಾಪಾರಿ, ಚಳ್ಳಕೆರೆ

    ಹಣ್ಣು ಖರೀದಿಸಿದ ಮೇಲೆ ಎರಡ್ಮೂರು ದಿನದೊಳಗೆ ಮಾರಾಟ ಮಾಡಬೇಕು. ಇಲ್ಲದಿದ್ದಲ್ಲಿ ಕೊಳೆತು ಹೋಗುತ್ತವೆ. ಸರಿಯಾದ ವ್ಯಾಪಾರ ಆದಲ್ಲಿ ದಿನಕ್ಕೆ 50 ರಿಂದ 60 ಕೆಜಿ ಮಾರಾಟವಾಗುತ್ತದೆ. ಕೆಲ ದಿನ ವ್ಯಾಪಾರವೇ ಇರುವುದಿಲ್ಲ. ವ್ಯಾಪಾರದ ಕಸುಬು ಬಿಡದಂತೆ ಕೂಲಿ ಪಾಟು ನೋಡಿಕೊಂಡು ವ್ಯಾಪಾರ ಮಾಡುತ್ತೇವೆ.
    ಇಮಾಂತರ ಜಮೀರ್, ಬೀದಿಬದಿ ವ್ಯಾಪಾರಿ, ಚಳ್ಳಕೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts