More

    ಎಲ್ಲೆಡೆ ಖಾಸಗಿ ವಾಹನಗಳ ಸಂಚಾರ

    ಗದಗ: 6ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಸಾರಿಗೆ ಸಂಸ್ಥೆ ನೌಕರರು ಬುಧವಾರ ಆರಂಭಿಸಿರುವ ಮುಷ್ಕರ ಗುರುವಾರವೂ ಮುಂದುವರಿಯಿತು.

    ಬಸ್ ನಿಲ್ದಾಣದಿಂದಲೇ ಖಾಸಗಿ ವಾಹನ ಸಂಚಾರ ಆರಂಭವಾಗಿದ್ದರಿಂದ ಜನರಿಗೆ ಅಷ್ಟಾಗಿ ತೊಂದರೆಯಾಗಲಿಲ್ಲ. ಜಿಲ್ಲೆಯಲ್ಲಿ 600ಕ್ಕೂ ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್ ಇತರೆ ವಾಹನಗಳ ಸಂಚಾರ ನಡೆಸಿದವು.

    ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಟೆಂಪೋ, ಕ್ರೂಸರ್, ಟಂಟಂ ಮುಂತಾದ ಖಾಸಗಿ ವಾಹನಗಳಿಗೆ ಫುಲ್ ಡಿಮಾಂಡ್. ಸರ್ಕಾರವೇ ಅನುಮತಿ ನೀಡಿದ್ದರಿಂದ ಬಸ್ ನಿಲ್ದಾಣದೊಳಗೆ ಬಂದು ಜನರನ್ನು ಕರೆದೊಯ್ಯುತ್ತಿರುವುದು ಸಾಮಾನ್ಯವಾಗಿತ್ತು. ಖಾಸಗಿ ವಾಹನಗಳ ಕೆಲ ಚಾಲಕರು ಪ್ರಯಾಣಿಕರಿಂದ ಹೆಚ್ಚಿಗೆ ಹಣ ವಸೂಲಿ ಮಾಡಿದ್ದು ಕಂಡುಬಂದಿತು. ಮುಷ್ಕರ ಕೈಬಿಡಿ ಎಂದು ಮನೆಮನೆಗೆ ತೆರಳಿ ಮನವೊಲಿಸುವ ಕಾರ್ಯ ಮಾಡಿದರೂ ಸಿಬ್ಬಂದಿ ಕೆಲಸಕ್ಕೆ ಹಾಜರಾಗಲಿಲ್ಲ. ಮುಷ್ಕರದಿಂದ ಎರಡು ದಿನಕ್ಕೆ ಸಾರಿಗೆ ಸಂಸ್ಥೆಗೆ 1 ಕೋಟಿ ರೂ.ನಷ್ಟವಾಯಿತು ಎಂದು ವಾಕರಸಾ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

    ಗ್ರಾಮೀಣ ಭಾಗದ ಜನರಿಗೆ ತೊಂದರೆ

    ಮುಂಡರಗಿ: ಸಾರಿಗೆ ನೌಕರರ ಮುಷ್ಕರ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ವಣವಾಯಿತು. ಎರಡು ದಿನಗಳಿಂದ ಕೆಎಸ್​ಆರ್​ಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರಿಗೆ ಟಂಟಂ, ಟ್ರ್ಯಾಕ್ಸ್ ಹಾಗೂ ಮತ್ತಿತರ ಖಾಸಗಿ ವಾಹನಗಳೇ ಗತಿಯಾಗಿದೆ. ಬೇರೆ ದಾರಿ ಕಾಣದೆ ಬೇರೆಡೆ ತೆರಳಬೇಕಿದ್ದ ಪ್ರಯಾಣಿಕರು ಖಾಸಗಿ ವಾಹನಗಳತ್ತ ಮುಖ ಮಾಡಿದರು. ಖಾಸಗಿ ವಾಹನದವರು ಪ್ರಯಾಣಿಕರಿಂದ ಹೆಚ್ಚು ದರ ಪಡೆಯುತ್ತಿದ್ದಾರೆ ಎಂದು ಹಲವು ಪ್ರಯಾಣಿಕರು ದೂರಿದರು. ಗ್ರಾಮೀಣ ಭಾಗಗಳಿಗೆ ಖಾಸಗಿ ವಾಹನ ಸಂಚಾರ ಇಲ್ಲದ್ದರಿಂದ ಗ್ರಾಮೀಣ ಭಾಗದ ಜನರು ತೊಂದರೆ ಅನುಭವಿಸುವಂತಾಗಿದೆ.

    ಎರಡನೇ ದಿನವೂ ರಸ್ತೆಗಿಳಿಯದ ಬಸ್

    ಲಕ್ಷ್ಮೇಶ್ವರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಗುರುವಾರವು ಪಟ್ಟಣದ ಸಾರಿಗೆ ಡಿಪೋದಿಂದ ಬಸ್​ಗಳು ರಸ್ತೆಗಿಳಿಯಲಿಲ್ಲ.

    ಸಾರ್ವಜನಿಕರು ಖಾಸಗಿ ವಾಹನಗಳನ್ನು ಬಳಸಿ ತಮ್ಮ ಕೆಲಸ ಕಾರ್ಯ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡುಬಂದಿತು. ಇನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಾಲೆ ಹಾಗೂ ಕಾಲೇಜ್​ಗೆ ಬಂದಿರಲಿಲ್ಲ. ವಿವಿಧ ಇಲಾಖೆಗಳ ನೌಕಕರು, ಹಿರಿಯ ನಾಗರಿಕರು ಬಸ್ ಇಲ್ಲದ್ದರಿಂದ ಪರದಾಡುವಂತಾಗಿದೆ. ಬೇರೆ ಬೇರೆ ಊರುಗಳಿಗೆ ತೆರಳುವ ಪ್ರಯಾಣಿಕರು ಖಾಸಗಿ ವಾಹನಗಳಲ್ಲಿ ಪ್ರಯಾಣ ಬೆಳೆಸಿದರು. ನಿತ್ಯ ಊರಿಂದೂರಿಗೆ ಬಸ್ ಮೂಲಕ ಹೋಗಿ ವ್ಯಾಪಾರ ಮಾಡುತ್ತಿದ್ದ ಸಣ್ಣ ವ್ಯಾಪಾರಸ್ಥರು, ಬಸ್ ನಿಲ್ದಾಣ ಮತ್ತು ಸುತ್ತಮುತ್ತ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳು, ಹೋಟೆಲ್​ಗಳು ಬೀಗ ಹಾಕಿದ್ದರಿಂದ ವ್ಯಾಪಾರಸ್ಥರು ನಷ್ಟ ಅನುಭವಿಸುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts