More

    ಎಪಿಎಂಸಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

    ಮುಂಡರಗಿ: ಶೇಂಗಾ ಬೆಳೆಗೆ ಕಡಿಮೆ ದರ ನಿಗದಿಪಡಿಸಲಾಗುತ್ತಿದೆ ಎಂದು ಆರೋಪಿಸಿ ಹಾವೇರಿ, ಶಿರಹಟ್ಟಿ, ಹೂವಿನಹಡಗಲಿ, ಹರಪನಹಳ್ಳಿ, ಕೊಪ್ಪಳ ಮೊದಲಾದ ಕಡೆಯಿಂದ ಶೇಂಗಾ ಮಾರಾಟಕ್ಕೆ ಆಗಮಿಸಿದ್ದ ರೈತರು ಶುಕ್ರವಾರ ಪಟ್ಟಣದ ಎಪಿಎಂಸಿ ಕಚೇರಿಗೆ ಬೀಗ ಹಾಕಿ, ಪ್ರತಿಭಟನೆ ನಡೆಸಿದರು.

    ಹಾವೇರಿ ತಾಲೂಕಿನ ನೀರಲಗಿ ಗ್ರಾಮದ ರೈತ ಪ್ರಮೋದರಡ್ಡಿ ಮರಚರಡ್ಡಿ ಮಾತನಾಡಿ, ಸ್ಥಳೀಯ ಎಪಿಎಂಸಿಯಲ್ಲಿ ಶೇಂಗಾಕ್ಕೆ ಉತ್ತಮ ಬೆಲೆ ಸಿಗಲಿದೆ ಎಂದು ಇಲ್ಲಿಗೆ ಬಂದಿದ್ದೇವೆ. ಆದರೆ, ಇಲ್ಲಿ ಅತಿ ಕಡಿಮೆ ಬೆಲೆಗೆ ಶೇಂಗಾ ಖರೀದಿಸಲಾಗುತ್ತಿದೆ. ಕಡಿಮೆ ಮಾಲು ತಂದವರಿಂದ ಪ್ರತಿ ಕ್ವಿಂಟಾಲ್​ಗೆ 5600 ರೂ.ವರೆಗೆ ಖರೀದಿಸಿದರೆ, ಹೆಚ್ಚು ಮಾಲು ತಂದವರಿಂದ ಕ್ವಿಂಟಾಲ್​ಗೆ 4200ರಿಂದ 4600ರೂಪಾಯಿಗೆ ಖರೀದಿಸುತ್ತಿದ್ದಾರೆ ಎಂದು ದೂರಿದರು.

    ಕೊಟ್ಟೂರ ಎಪಿಎಂಸಿಯಲ್ಲಿ ಪ್ರತಿ ಕ್ವಿಂಟಾಲ್​ಗೆ 5,400ರಿಂದ 5,900ರವರೆಗೂ ಖರೀದಿಸಿದ್ದಾರೆ. ಆದರೆ ಸ್ಥಳೀಯ ಎಪಿಎಂಸಿಯಲ್ಲಿ ಇಷ್ಟು ಕಡಿಮೆ ದರ ನೀಡಿದರೆ ರೈತರು ಏನು ಮಾಡಬೇಕು. ಆದ್ದರಿಂದ ಸೂಕ್ತ ದರ ನೀಡಬೇಕು ಎಂದು ರೈತರು ಆಗ್ರಹಿಸಿದರು.

    ಪ್ರತಿಭಟನೆ ಸ್ಥಳಕ್ಕೆ ಎಪಿಎಂಸಿ ಅಧ್ಯಕ್ಷ ರವೀಂದ್ರ ಉಪ್ಪಿನಬೆಟಗೇರಿ, ವರ್ತಕರ ಪ್ರತಿನಿಧಿ ಕೊಟ್ರೇಶ ಅಂಗಡಿ, ಸಹ ಕಾರ್ಯದರ್ಶಿ ಎಂ.ಎಂ.ಪಟೇಲ ಭೇಟಿ ನೀಡಿ ರೈತರೊಂದಿಗೆ ರ್ಚಚಿಸಿದರು. ‘ಕರೊನಾ ಹಿನ್ನೆಲೆ ಶೇಂಗಾ ರಫ್ತು ಆಗುತ್ತಿಲ್ಲ. ಕರೊನಾ ಕಾರಣ ಖರೀದಿದಾರರು ಕಡಿಮೆಯಾಗಿದ್ದಾರೆ. ನಿಮಗೆ ಯೋಗ್ಯ ದರ ಅನಿಸಿದರೆ ಮಾತ್ರ ಮಾರಾಟ ಮಾಡಿ’ ವರ್ತಕರ ಪ್ರತಿನಿಧಿ ಕೊಟ್ರೇಶ ಅಂಗಡಿ ಹೇಳಿದರು.

    ಬೇರೆ ಎಪಿಎಂಸಿಗಳಲ್ಲಿ ಉತ್ತಮ ದರ ನೀಡಲಾಗಿದೆ. ಆದರೆ ಇಲ್ಲಿ ಕಡಿಮೆ ದರ ನೀಡಲಾಗುತ್ತಿದೆ ಎಂದು ರೈತರು ದೂರಿದರು. ಎಲ್ಲ ಎಪಿಎಂಸಿಗಳಲ್ಲೂ ಒಂದೇ ರೀತಿಯ ದರ ನೀಡಲಾಗುತ್ತಿದೆ ಎಂದು ಎಪಿಎಂಸಿ ಅಧ್ಯಕ್ಷ ರವೀಂದ್ರ ಅವರು ತಿಳಿಸಿದರು.

    ಕರೊನಾ ಸಂದರ್ಭದಲ್ಲಿ ಪ್ರತಿಭಟನೆ ಮಾಡುವುದು ಸರಿಯಲ್ಲ. ಚರ್ಚೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಿಪಿಐ ಸುಧೀರ ಬೆಂಕಿ ಹೇಳಿದರು. ಟೆಂಡರ್ ದರದ ಮೇಲೆ 100 ರೂ. ಹೆಚ್ಚು ನೀಡುವಂತೆ ಖರೀದಿದಾರರಿಗೆ ತಿಳಿಸಲಾಗುವುದು. ಅದಕ್ಕೆ ರೈತರು ಸಹಕಾರ ನೀಡಬೇಕು ಎಂದು ಎಪಿಎಂಸಿ ಅಧ್ಯಕ್ಷ ರವೀಂದ್ರ, ವರ್ತಕರ ಪ್ರತಿನಿಧಿ ಕೊಟ್ರೇಶ ತಿಳಿಸಿದರು. ನಂತರ ರೈತರು ಪ್ರತಿಭಟನೆ ಕೈಬಿಟ್ಟರು.

    ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ವಿಠ್ಠಲ ಗಣಾಚಾರಿ, ದೇವರಡ್ಡಿ ತಿಮ್ಮರಡ್ಡಿ, ಬಸವರಾಜ ಮುದ್ದಿ, ರವಿಕುಮಾರ ಮರೆಕೊರ್ನಹಳ್ಳಿ, ಶಿವರಾಜ ಹಾವನೂರ, ಹಾಲೇಶ ಹುಲಿಕಟ್ಟಿ, ರವಿ ಪುಟ್ಟವಾರ, ಮಂಜುನಾಥ ಹಳೇಮನಿ, ಶಿವಪ್ಪ ಹೊಳೆಯಾಚೆ, ನಿಂಗಪ್ಪ ಕಿಲಾರಿ, ಎಂ.ಶಿವಕುಮಾರ, ನಾಗರಾಜ ಹಡಗಲಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts