More

    ಎಪಿಎಂಸಿಯಲ್ಲಿ ನಿಯಮ ಉಲ್ಲಂಘನೆ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ/ಧಾರವಾಡ

    ಅಮರಗೋಳ ಮತ್ತು ಧಾರವಾಡದ ಹೊಸ ಎಪಿಎಂಸಿ ಆವರಣದಲ್ಲಿ ನಿಯಮ ಉಲ್ಲಂಘನೆ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿವೆ.

    ಲಾಕ್​ಡೌನ್ ಹಾಗೂ ನಿಷೇಧಾಜ್ಞೆ ಲೆಕ್ಕಿಸದೇ ಇಲ್ಲಿನ ಅಮರಗೋಳ ಎಪಿಎಂಸಿ ಆವರಣದಲ್ಲಿ ಮಂಗಳವಾರ ಬೇಕಾಬಿಟ್ಟಿಯಾಗಿ ವ್ಯಾಪಾರ ಮಾಡುವ ಮೂಲಕ ಗುಂಪು ಸೇರಿದ ಆರೋಪದಡಿ 23 ವ್ಯಾಪಾರಸ್ಥರು, ಹಮಾಲರು ಹಾಗೂ ಏಟೆಂಟರ ವಿರುದ್ಧ್ಧ ಎಪಿಎಂಸಿ- ನವನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಕೋವಿಡ್- 19 ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರು ಸಿಆರ್​ಪಿಸಿ 144 ಕಲಂ ಅಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಇದನ್ನು ಲೆಕ್ಕಿಸದೆ ತಮಗೆ ತೋಚಿದ ಜಾಗದಲ್ಲಿ ವ್ಯಾಪಾರ ಮಾಡುವ ಮೂಲಕ ಜನರನ್ನು ಗುಂಪು ಸೇರಿಸಿ ನಿರ್ಲಕ್ಷ್ಯ ವಹಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುವ ಕೃತ್ಯ ಎಸಗಿರುವ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಪಿಎಂಸಿ- ನವನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

    ಎಚ್ಚರಿಕೆ ನೋಟಿಸ್ : ನಿಷೇಧಾಜ್ಞೆ ಉಲ್ಲಂಘಿಸಿ ಮಾರುಕಟ್ಟೆಯಲ್ಲಿ ಗುಂಪು ಸೇರಿದ್ದರು. ಆ ಮೂಲಕ ವೈರಸ್ ಹರಡುವ ಭೀತಿ ಸೃಷ್ಟಿಸಿದ್ದರು. 23 ಜನರನ್ನೂ ಠಾಣೆಗೆ ಕರೆಸಿ ಎಚ್ಚರಿಕೆ ನೋಟಿಸ್ ನೀಡಿ ಕಳುಹಿಸಲಾಗಿದೆ. ಈ ಕುರಿತು ಶೀಘ್ರದಲ್ಲೇ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗುವುದು ಎಂದು ಎಪಿಎಂಸಿ- ನವನಗರ ಠಾಣೆ ಇನ್ಸ್​ಪೆಕ್ಟರ್ ಪ್ರಭು ಸೂರಿನ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ನೋಟಿಸ್ ಜಾರಿ: ಧಾರವಾಡ ನಗರದ ಹೊಸ ಎಪಿಎಂಸಿ ಆವರಣದಲ್ಲಿ ಜನರ ನಿಯಂತ್ರಣಕ್ಕೆ ಸಾಹಸ ಪಟ್ಟಿದ್ದ ಪೊಲೀಸರು ಭಾನುವಾರದಿಂದ ಕೆಲ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಆದರೆ, ವ್ಯಾಪಾರಿಗಳು ಆದೇಶ ಪಾಲಿಸದ ಪ್ರಕರಣಗಳು ಇದೀಗ ಬೆಳಕಿಗೆ ಬರುತ್ತಿದೆ.

    ನಿಯಮ ಉಲ್ಲಂಘನೆ ಮಾಡಿದರೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳುವುದಾಗಿ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಆದಾಗ್ಯೂ ನಿಗದಿತ ಸ್ಥಳದಲ್ಲಿ ವ್ಯಾಪಾರ-ವಹಿವಾಟು ನಡೆಸದೆ ತಮ್ಮ ಮನಸ್ಸಿಗೆ ಬಂದ ಕಡೆಗಳಲ್ಲಿ ವ್ಯಾಪಾರ ನಡೆಸಿದ್ದರಿಂದ ಸೋಮವಾರ 15 ಜನ ವ್ಯಾಪಾರಸ್ಥರಿಗೆ ಎಪಿಎಂಸಿ ವತಿಯಿಂದ ನೋಟಿಸ್ ಜಾರಿ ಮಾಡಲಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿದ ಎಪಿಎಂಸಿ ಅಧ್ಯಕ್ಷ ಮಹಾವೀರ ಜೈನ್, ಎಪಿಎಂಸಿಯಲ್ಲಿ ದಿನದಿಂದ ದಿನಕ್ಕೆ ವ್ಯಾಪಾರ-ವಹಿವಾಟು ಉತ್ತಮವಾಗಿ ನಡೆಯುತ್ತಿದೆ. ಜನಸಂದಣಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿದ ವ್ಯಾಪಾರಸ್ಥರಿಗೆ ನೋಟಿಸ್ ಜಾರಿ ಮಾಡಲಾಗಿದೆ. ನಿಯಮ ಉಲ್ಲಂಘನೆ ಮಾಡಿದ್ದರಿಂದ ಲೈಸನ್ಸ್ ರದ್ದು ಮಾಡಬಾರದೇಕೆ ಎಂದು ನೋಟಿಸ್ ನೀಡಲಾಗಿದೆ. ಈ ಕುರಿತು ಮುಂದಿನ ದಿನಗಳಲ್ಲಿ ನಡೆಯುವ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಕೊಪ್ಪಳದಿಂದ ಬಂದ ಮಾಲು ಸ್ಥಳೀಯ ರೈತರ ಗೋಳು: ಎಪಿಎಂಸಿಗೆ ಮಂಗಳವಾರ ಬೆಳಗ್ಗೆ ಕೊಪ್ಪಳ ಜಿಲ್ಲೆಯಿಂದ ದೊಡ್ಡ ಪ್ರಮಾಣದಲ್ಲಿ ತರಕಾರಿ ಪೂರೈಕೆಯಾಗಿದ್ದರಿಂದ ದರ ಕುಸಿತವಾಗಿ, ಸ್ಥಳೀಯ ರೈತರ ನಿರೀಕ್ಷೆಗಳಿಗೆ ಪೆಟ್ಟು ಬಿದ್ದಿತು. 2-3 ದಿನದ ಹಿಂದೆ ಬಾಕ್ಸ್ ಟೊಮ್ಯಾಟೊಕ್ಕೆ 350-400 ರೂ. ಇದ್ದುದು 250-300ಕ್ಕೆ ಕುಸಿದಿತ್ತು. ಉಳಿದ ತರಕಾರಿಗಳೂ ಬಾಕ್ಸ್ ಮೇಲೆ 100 ರೂ.ಗಳಷ್ಟು ಇಳಿಕೆಯಾಗಿತ್ತು. ಹೋಗಿರೋ ಮಾಲು ಬರಲಿಕ್ಕಿಲ್ಲ, ಕಡೇಪಕ್ಷ ಹಿಂದಿನ ದರವಾದರೂ ಸಿಗುತ್ತದೆ ಎಂದುಕೊಂಡಿದ್ದ ರೈತರು ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ಸಿಕ್ಕಷ್ಟು ದರಕ್ಕೆ ಮಾರಾಟ ಮಾಡಿ ಊರಿಗೆ ವಾಪಸಾಗುತ್ತಿದ್ದುದು ಕಂಡುಬಂತು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts