More

    ಎನ್‌ಎಸ್‌ಎಸ್‌ನಿಂದ ವ್ಯಕ್ತಿತ್ವ ವಿಕಸನ

    ತಿ. ನರಸೀಪುರ: ರಾಷ್ಟ್ರೀಯ ಸೇವಾ ಯೋಜನೆಯು ಗ್ರಾಮ ಸ್ವರಾಜ್ಯ ಪರಿಕಲ್ಪನೆಯೊಂದಿಗೆ ಹಳ್ಳಿಗಳ ಅಭಿವೃದ್ಧಿ, ಜಾಗೃತಿ, ಪರಿಸರ ಕಾಳಜಿ ಮತ್ತಿತರ ಆಶಯಗಳೊಂದಿಗೆ ಜಾರಿಯಾಗಿದೆ ಎಂದು ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಗುರುಪಾದಸ್ವಾಮಿ ಹೇಳಿದರು.

    ತಾಲೂಕಿನ ವ್ಯಾಸರಾಜಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಮಧ್ಯಾಹ್ನ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಾಲಾ ಘಟಕ ಉದ್ಘಾಟಿಸಿ ಮಾತನಾಡಿದರು.

    ಸಮುದಾಯದ ಸೇವೆ ಜತೆಗೆ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಉತ್ತಮ ವೇದಿಕೆಯಾಗಿದೆ. ಉತ್ತಮ ನಾಯಕತ್ವ ಗುಣ, ಶಿಸ್ತುಬದ್ಧ ಜೀವನ, ಪ್ರಬುದ್ಧತೆಯ ವ್ಯಕ್ತಿತ್ವ ರೂಪಿಸಲು ಸಹಕಾರಿಯಾಗಿದೆ. ಮೊದಲಿಗೆ ವಿಶ್ವವಿದ್ಯಾಲಯ ಕಾಲೇಜು, ಪಿಯು ಕಾಲೇಜುಗಳಿಗೆ ಸೀಮಿತವಾಗಿದ್ದ ಘಟಕ ಈಗ ಪ್ರೌಢಶಾಲಾ ಹಂತಕ್ಕೆ ಬಂದಿದೆ. ಇದರಿಂದ ಪ್ರೌಢ ಹಂತದಿಂದಲೇ ಮಕ್ಕಳ ವ್ಯಕ್ತಿತ್ವ ರೂಪಿಸಬಹುದಾಗಿದೆ. ಸ್ವಚ್ಛತೆ, ಆರೋಗ್ಯ, ಶ್ರಮದಾನ ಮತ್ತಿತರ ಸೇವೆ ಮೂಲಕ ಸಮಾಜಕ್ಕೆ ಅವರ ಕೊಡುಗೆ ತೋರಿಸಲು ಉಪಯುಕ್ತವಾಗಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ನಾಗೇಂದ್ರ ಮಾತನಾಡಿ, ಎನ್‌ಎಸ್‌ಎಸ್ ಘಟಕ ನಮ್ಮ ಶಾಲೆಗೆ ಬಂದಿರುವುದು ತುಂಬಾ ಸಂತೋಷ ತಂದಿದೆ. ನಮ್ಮ ಶಾಲಾ ವಿದ್ಯಾರ್ಥಿಗಳನ್ನು ಸಮಾಜಮುಖಿಗಳಾಗಿ ಬೆಳೆಸಲು ಈ ಯೋಜನೆ ಮಹತ್ವಪೂರ್ಣವಾಗಿದೆ ಎಂದು ತಿಳಿಸಿದರು.

    ಪ್ರಗತಿಪರ ರೈತ ಶ್ರೀನಿವಾಸಮೂರ್ತಿ, ಪಿಆರ್‌ಎಂ ಪ್ರೌಢಶಾಲಾ ಶಿಕ್ಷಕ ಎಂ.ಮಹದೇವ್, ಯೋಜನೆಯ ಕಾರ್ಯಕ್ರಮಾಧಿಕಾರಿ ಬಿ.ಕುಮಾರಸ್ವಾಮಿ ಅವರು ಸೇವಾ ಯೋಜನೆ ಜಾರಿಗೆ ಬಂದ ವಿಧಾನ, ಅದರ ಗುರಿ, ಉದ್ದೇಶಗಳು ಹಾಗೂ ಅದರ ಪ್ರಯೋಜನಗಳ ಬಗ್ಗೆ ವಿಸ್ತಾರವಾಗಿ ಮಾತನಾಡಿದರು.

    ಗ್ರಾಪಂ ಸದಸ್ಯರಾದ ಸೋಮಣ್ಣ, ರಾಜಮ್ಮ, ಶಿಕ್ಷಕರಾದ ಬಿ.ಆರ್.ರಂಗಸ್ವಾಮಿ, ರಾಘವೇಂದ್ರ, ಗಣಪತಿ, ಪ್ರಕಾಶ್, ಮಮತಾ, ಸೆಮಿನಾ, ಪ್ರಿಯದರ್ಶಿನಿ ರಾಯ್ಕರ್ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts