More

    ಎಂಎಂಪಿಗೆ ಪ್ರತಿಷ್ಠೆ, ಕೆಬಿಕೆಗೆ ಅನಿವಾರ್ಯತೆ

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

    ಗ್ರಾಪಂ ಚುನಾವಣೆ ಪಕ್ಷ ಆಧಾರಿತವಲ್ಲ. ಆದರೆ, ಅಧಿಕೃತವಾಗಿ ಪಕ್ಷದ ಚಿಹ್ನೆಯಡಿ ಚುನಾವಣೆ ನಡೆಯುವುದಿಲ್ಲವಾದರೂ ಪಕ್ಷಗಳ ಕಾರ್ಯಕರ್ತರು ಹಾಗೂ ಬೆಂಬಲಿಗರೇ ಅಭ್ಯರ್ಥಿಗಳಾಗಿರುತ್ತಾರೆ. ಹೀಗಾಗಿ, ಬಿಜೆಪಿ, ಕಾಂಗ್ರೆಸ್ ನಾಯಕರಿಗೆ ಈ ಚುನಾವಣೆಯಲ್ಲಿ ತಮ್ಮ ಬೆಂಬಲಿಗರ ಗೆಲುವು ಪ್ರತಿಷ್ಠೆಯ ವಿಷಯವಾಗುತ್ತದೆ.

    ತಾಲೂಕಿನಲ್ಲಿ ಒಟ್ಟು 40 ಗ್ರಾಪಂಗಳಿದ್ದು, ಇದರಲ್ಲಿ ಅವಧಿ ಮುಗಿದ 33 ಗ್ರಾಪಂಗಳ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದೆ. ತಾಲೂಕಿನಲ್ಲಿ ಮೇಡ್ಲೇರಿಯು 25 ಸದಸ್ಯರನ್ನು ಒಳಗೊಂಡ ಅತಿದೊಡ್ಡ ಗ್ರಾಪಂ ಆಗಿದ್ದರೆ, ಹನುಮಾಪುರವು 8 ಸದಸ್ಯರನ್ನೊಳಗೊಂಡ ಚಿಕ್ಕ ಗ್ರಾಪಂ ಆಗಿದೆ.

    ಗ್ರಾಪಂ ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು ಗೆಲ್ಲಿಸುವ ಮೂಲಕ ಗ್ರಾಮ ಮಟ್ಟದಿಂದಲೇ ತಮ್ಮ ಪಕ್ಷವನ್ನು ಬಲಪಡಿಸಿಕೊಂಡರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಗೆಲುವು ಸುಲಭವಾಗಲಿದೆ ಎಂಬುದು ಹಾಲಿ ಹಾಗೂ ಮಾಜಿ ಶಾಸಕರ ಲೆಕ್ಕಚಾರವಾಗಿದೆ.

    ಈ ಹಿನ್ನೆಲೆಯಲ್ಲಿ ಗ್ರಾಪಂ ಚುನಾವಣೆ ಘೊಷಣೆಯಾದ ದಿನದಂದಲೂ ಬಿಜೆಪಿಯ ಶಾಸಕ ಅರುಣಕುಮಾರ ಪೂಜಾರ ಹಾಗೂ ಕಾಂಗ್ರೆಸ್​ನ ಮಾಜಿ ಶಾಸಕ ಕೆ.ಬಿ. ಕೋಳಿವಾಡ, ಗ್ರಾಮೀಣ ಭಾಗದಲ್ಲಿ ಸುತ್ತಾಡಿ ಪಕ್ಷದ ಪ್ರಮುಖರ ಸಭೆ ನಡೆಸಿದ್ದಾರೆ. ಯಾವ ಗ್ರಾಪಂಗೆ ಯಾರನ್ನು ನಿಲ್ಲಿಸಬೇಕು ಎಂದು ಪ್ರಮುಖರ ಪಟ್ಟಿ ಸಿದ್ಧಪಡಿಸಿದ್ದಾರೆ.

    ಶಾಸಕ ಹಾಗೂ ಮಾಜಿ ಶಾಸಕರು ಸೂಚಿಸಿದ ಅಭ್ಯರ್ಥಿಗಳು ಈಗಾಗಲೇ ಆಯಾ ಗ್ರಾಪಂನಲ್ಲಿ ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದಾರೆ. ಆದರೆ, ಕೆಲ ಗ್ರಾಪಂನ ಒಂದೇ ವಾರ್ಡ್​ಗಳಲ್ಲಿ ಒಂದೇ ಪಕ್ಷದ ನಾಲ್ಕೈದು ಬೆಂಬಲಿಗರ ನಡುವೆ ಜಿದ್ದಾಜಿದ್ದಿ ನಡೆದಿದೆ. ಇಂಥವರೆಲ್ಲರ ಮನವೊಲಿಸಿ ಒಬ್ಬರನ್ನು ಅಭ್ಯರ್ಥಿಯನ್ನಾಗಿ ಮಾಡುವ ಪ್ರಯತ್ನವನ್ನು ಆಯಾ ಪಕ್ಷದ ಮುಖಂಡರು ನಡೆಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನ ಬಾಕಿ ಇದ್ದು, ಅಭ್ಯರ್ಥಿಗಳು ಅಂತಿಮವಾದ ಕೂಡಲೆ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಲಿದೆ.

    ಈ ಬಾರಿಯ ಗ್ರಾಪಂ ಚುನಾವಣೆಯು ಬಿಜೆಪಿಯ ಹಾಲಿ ಶಾಸಕ ಅರುಣಕುಮಾರ ಪೂಜಾರ (ಎಂಎಂಪಿ) ಅವರಿಗೆ ಪ್ರತಿಷ್ಠೆಯಾಗಿದ್ದರೆ, ಮಾಜಿ ಶಾಸಕ ಕೆ.ಬಿ. ಕೋಳಿವಾಡ (ಕೆಬಿಕೆ) ಅವರಿಗೆ ಅನಿವಾರ್ಯತೆಯಾಗಿದೆ. ಕಳೆದ ಬಾರಿಯ ಗ್ರಾಪಂ ಚುನಾವಣೆ ಸಮಯದಲ್ಲಿ ಕೋಳಿವಾಡರು ಶಾಸಕರಾಗಿದ್ದರು. ಹೀಗಾಗಿ, 33 ಗ್ರಾಪಂಗಳ ಪೈಕಿ 26ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆದರೆ, ಈ ಬಾರಿ ಚಿತ್ರಣ ಬದಲಾಗಿದೆ. ಬಿಜೆಪಿಯ ಅರುಣಕುಮಾರ ಪೂಜಾರ ಕಳೆದ ಒಂದು ವರ್ಷದ ಹಿಂದೆ ನಡೆದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇದಕ್ಕೂ ಮುನ್ನ ನಡೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಆರ್. ಶಂಕರ ಇದೀಗ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅರುಣಕುಮಾರ ಪೂಜಾರ ಅವರ ಪತ್ನಿ ಮಂಗಳಗೌರಿ ಪೂಜಾರ ಅವರು ಕರೂರ ಜಿಪಂ ಕ್ಷೇತ್ರದ ಸದಸ್ಯೆ ಕೂಡ ಆಗಿದ್ದಾರೆ.

    ಆದ್ದರಿಂದ ಗ್ರಾಪಂ ಮಟ್ಟದಲ್ಲೂ ತಮ್ಮ ಬೆಂಬಲಿಗರನ್ನು ಗೆಲ್ಲಿಸಲು ಶಾಸಕ ಅರುಣಕುಮಾರ ಪೂಜಾರ ಎಲ್ಲ ಗ್ರಾಪಂಗಳಿಗೆ ತೆರಳಿ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದಾರೆ. ಕೋಳಿವಾಡರು ಸ್ಥಳೀಯವಾಗಿಯೇ ಇದ್ದುಕೊಂಡು ಬೆಂಬಲಿಗರನ್ನು ಗೆಲ್ಲಿಸಲು ನಾನಾ ಬಗೆಯ ಸಿದ್ಧತೆ ನಡೆಸಿದ್ದಾರೆ.

    ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ಗ್ರಾಪಂನಲ್ಲೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಲು ಅನುಕೂಲವಾಗುತ್ತದೆ. ಈ ಬಗ್ಗೆ ಗ್ರಾಮೀಣ ಜನರಿಗೆ ತಿಳಿ ಹೇಳಿದ್ದೇವೆ. ಜತೆಗೆ, ಗ್ರಾಮ ಮಟ್ಟದಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದೆ. ಆದ್ದರಿಂದ ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ನಮ್ಮ ಪಕ್ಷದ ಬೆಂಬಲಿಗರು ಗೆಲುವು ಸಾಧಿಸುವುದು ನಿಶ್ಚಿತ.
    | ಬಸವರಾಜ ಕೇಲಗಾರ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ

    ಗ್ರಾಪಂ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಸರಣಿ ಸಭೆ ನಡೆಸಲಾಗಿದೆ. ಕಳೆದ ಬಾರಿ ಹೆಚ್ಚಿನ ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಗ್ರಾಪಂಗಳು ಕಾಂಗ್ರೆಸ್ ಪಾಲಾಗಲಿವೆ.
    | ಮಂಜನಗೌಡ ಪಾಟೀಲ, ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts