More

    ಊರೂರು ಸುತ್ತಿ ನುಗ್ಗೆಕಾಯಿ ಮಾರಾಟ

    ಶಿರಹಟ್ಟಿ: ಲಾಕ್​ಡೌನ್ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತ, ವ್ಯಾಪಾರಸ್ಥರ ಸಮಸ್ಯೆಗಳಿಂದ ಧೃತಿಗೆಡದ ರೈತನೊಬ್ಬ ತಾನು ಬೆಳೆದ ನುಗ್ಗೆಕಾಯಿಯನ್ನು ಊರೂರು ತಿರುಗಿ ಮಾರಾಟ ಮಾಡಿ ಸಾವಿರಾರು ರೂ. ಲಾಭ ಕಂಡುಕೊಂಡಿದ್ದಾರೆ.

    ತಾಲೂಕಿನ ಬೆಳಗಟ್ಟಿ ಗ್ರಾಮದ ರೈತ ಕೃಷ್ಣಪ್ಪ ಹಬಲಿ ಅವರು 2.20 ಎಕರೆ ಜಮೀನಿನಲ್ಲಿ 30ಸಾವಿರ ರೂ. ವೆಚ್ಚದಲ್ಲಿ ಅಂದಾಜು 1,100 ನುಗ್ಗೆ ಗಿಡ ಬೆಳೆಸಿದ್ದಾರೆ. ನುಗ್ಗೆಕಾಯಿ ಕಟಾವು ಹಂತದಲ್ಲೇ ಲಾಕ್​ಡೌನ್ ಜಾರಿಯಾಯಿತು. ಹೀಗಾಗಿ ಯಾವೊಬ್ಬ ವ್ಯಾಪಾರಸ್ಥನೂ ನುಗ್ಗೆಕಾಯಿ ಖರೀದಿಗೆ ಬರಲಿಲ್ಲ. ಇದರಿಂದ ದಿಕ್ಕು ತೋಚದಂತಾದ ರೈತ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಅವರ ಸಲಹೆಯಂತೆ ಸ್ವತಃ ವಾಹನದಲ್ಲಿ ತೆರಳಿ ಶಿರಹಟ್ಟಿ, ಲಕ್ಷ್ಮೇಶ್ವರ, ಬೆಳ್ಳಟ್ಟಿ ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಪ್ರತಿ ಕೆ.ಜಿ.ಗೆ 50 ರೂ. ನಂತೆ ಕೇವಲ 15 ದಿನಗಳಲ್ಲಿ 43 ಕ್ವಿಂಟಾಲ್ ನುಗ್ಗೆಕಾಯಿ ಮಾರಾಟ ಮಾಡಿದರು. 1.10 ಲಕ್ಷ ರೂ. ಸಂಪಾದನೆ ಮಾಡಿದ್ದಾರೆ. ಜತೆಗೆ ತೋಟಗಾರಿಕೆ ಇಲಾಖೆಯ ನರೇಗಾ ಯೋಜನೆಯಡಿ 67 ಸಾವಿರ ರೂ. ಸಹಾಯ ಧನವಾಗಿ ನುಗ್ಗೆಕಾಯಿ ಬೆಳೆ ತೋಟ ಅಭಿವೃದ್ಧಿಗೆ ನೀಡಿದ್ದು ಬಹಳಷ್ಟು ಸಹಕಾರಿಯಾಗಿದೆ ಎನ್ನುತ್ತಾರೆ ರೈತ ಕೃಷ್ಣಪ್ಪ.

    ಏಳೆಂಟು ತಿಂಗಳು ಕಷ್ಟಪಟ್ಟು ಸಾವಿರಾರು ರೂ. ಖರ್ಚು ಮಾಡಿ ಗುಣಮಟ್ಟದ ನುಗ್ಗೆಕಾಯಿ ಬೆಳೆಸಿದ್ದೆವು. ಇನ್ನೇನು ಕಟಾವ್ ಮಾಡಿ ಮಾರಾಟ ಮಾಡಬೇಕು ಎನ್ನುವಷ್ಟರಲ್ಲಿ ಲಾಕ್​ಡೌನ್ ಜಾರಿಯಾಯಿತು. ತೋಟಗಾರಿಕೆ ಇಲಾಖೆ ಅಧಿಕಾರಿಯ ಸಲಹೆ ನಮಗೆ ವರವಾಗಿ ಪರಿಣಮಿಸಿತು. ಊರೂರು ಸುತ್ತಾಡಿ ನುಗ್ಗೆ ಮಾರಾಟ ಮಾಡಿದ್ದರಿಂದ ನಮ್ಮ ಪರಿಶ್ರಮಕ್ಕೆ ದೇವರು ತಕ್ಕ ಪ್ರತಿಫಲ ನೀಡಿದ್ದಾನೆ.
    | ಕೃಷ್ಣಪ್ಪ ಹಬ್ಬಲಿ, ಬೆಳಗಟ್ಟಿ ಗ್ರಾಮದ ರೈತ

    ತರಕಾರಿ ಬೆಳೆದ ರೈತರು ಲಾಕ್​ಡೌನ್ ಎಂದು ಹತಾಶರಾಗಿ ಮನೆಯಲ್ಲಿ ಕುಳಿತು ಸಾವಿರಾರು ರೂ. ಖರ್ಚು ಮಾಡಿದ ಬೆಳೆ ನಾಶ ಮಾಡಿಕೊಂಡರೆ ಪ್ರಯೋಜನವಿಲ್ಲ. ಅದಕ್ಕೊಂದು ಪರ್ಯಾಯ ವ್ಯವಸ್ಥೆ ಹುಡುಕಿ ಧೈರ್ಯದಿಂದ ಮುನ್ನುಗ್ಗಿದಾಗ ಮಾತ್ರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ನಾನೊಬ್ಬ ಅಧಿಕಾರಿಯಾಗಿ ಮಾರ್ಗದರ್ಶನ ಹಾಗೂ ಸಹಾಯ, ಸಹಕಾರ ನೀಡಿದ್ದೇನೆ.
    | ಸುರೇಶ ಕುಂಬಾರ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ, ಶಿರಹಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts