More

    ಉಪಕಾರ ಸ್ಮರಿಸಬೇಕಾಗಿದ್ದು ನೀವು, ಎಂ.ಬಿ. ಪಾಟೀಲಗೆ ಮತ್ತೆ ಟಾಂಗ್, ರಾಜಕೀಯ ಹೊತ್ತಿಗೆ ಬಿಚ್ಚಿಟ್ಟ ಶಾಸಕ ಯಶವಂತರಾಯಗೌಡ ಪಾಟೀಲ

    ವಿಜಯಪುರ: ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ ಬಂದರೂ ಚುನಾವಣೆಯಲ್ಲಿ ಸೋತಿಲ್ಲ ನೀವು ಯಾವ ಲೆಕ್ಕ ಎಂದ ಎಂ.ಬಿ. ಪಾಟೀಲ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಯಶವಂತರಾಯಗೌಡ ಪಾಟೀಲ ನೀವು ಎಂದೂ ಸೋತಿಲ್ಲವೇ? 1994-1999ರಲ್ಲಿ ಯಾರ ವಿರುದ್ಧ ಸೋತಿದ್ದೀರಿ ಎಂಬುದನ್ನು ನೆನಪು ಮಾಡಿಕೊಳ್ಳಿ ಎಂದರು.
    ನಿಮ್ಮ ವಿರುದ್ಧ ಗೆದ್ದವರು 2004ರಲ್ಲಿ ಎಸ್.ಎಂ.ಕೃಷ್ಣರ ಮಾತಿಗೆ ಗೌರವ ಕೊಟ್ಟು ತಿಕೋಟಾ ಕ್ಷೇತ್ರ ಬಿಟ್ಟುಕೊಡದಿದ್ದರೆ ನೀವು ಏನಾಗುತ್ತಿದ್ದೀರಿ? ಉಪಕಾರ ಮಾಡಿದವರನ್ನು ಸ್ಮರಿಸಿ ಎಂದರಲ್ಲದೇ, 1991ರಲ್ಲಿ ಬಿ.ಎಂ. ಪಾಟೀಲರು ನಿಧನರಾದಾಗ ಗುಡದಿನ್ನಿ ಅವರೆಲ್ಲ ಸೇರಿ ಅನುಕಂಪ ಆಧಾರದ ಮೇಲೆ ಟಿಕೆಟ್ ನೀಡಿ ನಿಮ್ಮನ್ನು ಗೆಲ್ಲಿಸಿದರು. ಆದರೆ 1994ರಲ್ಲಿ ಕ್ಷೇತ್ರ ಉಳಿಸಿಕೊಳ್ಳಲಾಗಲಿಲ್ಲ. ಅಲ್ಲದೇ ಉಪಕಾರ ಮಾಡಿದ ಗುಡದಿನ್ನಿ ಅವರ ಪುತ್ರನಿಗೆ ಸಾರವಾಡದಿಂದ ಜಿಪಂ ಟಿಕೆಟ್ ಕೊಡೋದು ನಿಮಗೆ ಅಗಲಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಕಿಡಿಕಾರಿದರು.
    ನಿಮ್ಮಿಂದಲೇ ಎಲ್ಲವೂ ಅಲ್ಲ:
    ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಟಿಕೆಟ್ ಸಿಕ್ಕಿರಲಿಲ್ಲ, ನಾನೇ ಟಿಕೆಟ್ ಕೊಡಿಸಿದ್ದಲ್ಲದೇ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದೆ ಎಂಬ ಶಾಸಕ ಎಂ.ಬಿ. ಪಾಟೀಲರ ಹೇಳಿಕೆಗೆ ಪ್ರತಿಕ್ರಿಯಿಸಿದ ಯಶವಂತರಾಯಗೌಡ ಪಾಟೀಲ, ನನ್ನ ತಂದೆ ದಿ.ವಿಠಲಗೌಡ ಪಾಟೀಲರು ಜಿಲ್ಲಾ ಪರಿಷತ್‌ ನ ಅಧ್ಯಕ್ಷರಾಗಿದ್ದವರು. 1986-87ರಲ್ಲಿ ಜಿಲ್ಲಾ ಪರಿಷತ್ ಹಾಗೂ ಬ್ಲಾಕ್ ಪಂಚಾಯತ್ ವ್ಯವಸ್ಥೆ ಜಾರಿಗೆ ಬಂತು. ಹೊಸದಾಗಿ ಜಿಲ್ಲಾ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ನನ್ನ ತಂದೆ ಅಗರಖೇಡ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಏಕೈಕ ಅಭ್ಯರ್ಥಿಯಾಗಿ ಆಯ್ಕೆಯಾದರು. ಇಂಡಿ ತಾಲೂಕಿನ ಇನ್ನುಳಿದ 6 ಕ್ಷೇತ್ರಗಳಲ್ಲಿ ಜನತಾದಳದ ಸದಸ್ಯರು ಆಯ್ಕೆಯಾದರು. ಸತತ ನಾಲ್ಕು ಬಾರಿ ಚುನಾವಣೆಯಲ್ಲಿ ಆಯ್ಕೆಯಾಗುವ ಮೂಲಕ ನಮ್ಮ ಕುಟುಂಬ ರಾಜಕೀಯವಾಗಿ ಮುನ್ನೆಲೆಗೆ ಬಂದಿತು ಎಂದರು.
    ನನ್ನ ತಂದೆ ನಿಧನಾನಂತರ ನನಗೆ 21 ವರ್ಷ ವಯಸ್ಸಾಗದ ಹಿನ್ನೆಲೆ ಬಿ.ಕೆ. ಗುಡದಿನ್ನಿ ಅವರು ಮುಂದೆ ಅವಕಾಶ ಕೊಡುವುದಾಗಿ ಹೇಳಿದರು. ನಾನಾಗ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದೆ. ಬಳಿಕ 1995ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಗುಡದಿನ್ನಿ ಅವರು ನನಗೆ ಟಿಕೆಟ್ ನೀಡಿದರು. ನನ್ನ ಗೆಲುವಿನಲ್ಲಿ ಅನೇಕರ ಸಹಕಾರ ಇದೆ. ಅದರಲ್ಲಿ ತಾವೂ ಒಬ್ಬರು. ಆದರೆ, ನೀವೆ ಎಲ್ಲ ಅಲ್ಲ ಎಂದರು.
    ಎಂ.ಬಿ. ಪಾಟೀಲಗೆ ಕಿವಿಮಾತು:
    ನಾನು ಸಹ ಸಾಕಷ್ಟು ಜನರಿಗೆ ರಾಜಕೀಯವಾಗಿ ಅವಕಾಶ ಕಲ್ಪಿಸಿದ್ದೇನೆ. ಕೆಎಂಎಫ್‌ಗೆ ಆಯ್ಕೆ ಮಾಡಿದ್ದೇನೆ, ಸ್ಥಳೀಯ ಸಂಸ್ಥೆಗಳಲ್ಲಿ ಎಲ್ಲ ಸಮುದಾಯದವರಿಗೆ ಆದ್ಯತೆ ನೀಡಿದ್ದೇನೆ. ಹಾಗಂತ ನಾನೆಲ್ಲೂ ನಾನೇ ಮಾಡಿದ್ದೇನೆಂದಿಲ್ಲ. ಅದು ಅವರ ಅರ್ಹತೆ. ಅವರನ್ನು ಆಯ್ಕೆ ಮಾಡಲು ನಮಗೆ ಸಿಕ್ಕ ಅವಕಾಶ ಎಂದು ಭಾವಿಸಿದ್ದೇನೆಂದ ಶಾಸಕ ಯಶವಂತರಾಯಗೌಡ ಪಾಟೀಲ, ‘ಆಕಾರವಿಲ್ಲದ ಕಲ್ಲನ್ನು ಬೇಕಾದರೂ ಸುಂದರವಾದ ಶಿಲೆಯನ್ನಾಗಿ ಮಾಡಬಹುದು, ಆದರೆ ಅಹಂಕಾರ ಇರುವ ಮನುಷ್ಯರನ್ನು ಬದಲಾಯಿಸಲು ಸಾಧ್ಯವಿಲ್ಲ, ನಾನು ನನ್ನಿಂದ ಎನ್ನುವುದು ಕ್ಷಣಿಕ, ನಾವು ನಮ್ಮದು ಅಂತ ಹೇಳಿದರೆ ಉಸಿರು ನಿಂತ ಮೇಲೂ ಹೆಸರು ಇರುತ್ತದೆ’ ಎಂದು ಮಾರ್ಮಿಕವಾಗಿ ನುಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts