More

    ಉನ್ನತ ಸ್ಥಾನ ಅಲಂಕರಿಸಿದವರು ಇತರರಿಗೂ ಸಹಾಯಹಸ್ತ ನೀಡಿ

    ಕೆ.ಆರ್.ನಗರ: ಸರ್ಕಾರ ಎಲ್ಲರನ್ನೂ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದವರು ತಮ್ಮ ಗ್ರಾಮ, ಜನ, ಸ್ನೇಹಿತರಿಗೆ ಸಹಾಯ ಮಾಡುವ ಮೂಲಕ ಅವರ ಕೈಹಿಡಿದರೆ ದೇಶ ರಾಮರಾಜ್ಯವಾಗಲಿದೆ ಎಂದು ಶಾಸಕ ಸಾ.ರಾ.ಮಹೇಶ್ ಅಭಿಪ್ರಾಯಪಟ್ಟರು.

    ಪಟ್ಟಣದ ಶ್ರೀಕೃಷ್ಣರಾಜೇಂದ್ರ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾಲೇಜು ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
    ನಾನು 19 ವರ್ಷಗಳಿಂದ 5 ಸಾವಿರ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸುತ್ತಿದ್ದೇನೆ. ನೀವು ಉತ್ತಮರಾದಾಗ ಇತರರಿಗೆ ಸಹಾಯ ಮಾಡುವ ಮನೋಭಾವ ಬೆಳಸಿಕೊಳ್ಳಲಿ ಎಂಬುದೇ ನನ್ನ ಉದ್ದೇಶ ಎಂದು ತಿಳಿಸಿದರು.

    ಸರ್ಕಾರಿ ಶಾಲೆ, ಕಾಲೇಜುಗಳ ಉಪನ್ಯಾಸಕರು ಮೆರಿಟ್ ಪಡೆದು, ಇಲಾಖೆ ಪರೀಕ್ಷೆಯಲ್ಲಿ ಆಯ್ಕೆಯಾಗಿ ಬಂದಿರುವುದರಿಂದ ಅವರು ಬುದ್ದಿವಂತರಾಗಿದ್ದು, ವಿದ್ಯಾರ್ಥಿಗಳು ಅವರ ಪಾಠ ಕೇಳಿ, ಸಲಹೆಗಳನ್ನು ಪಡೆದು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಗಳಿಸಲು ಸಾಧ್ಯ. ಉಪನ್ಯಾಸಕರು ಕೂಡ ಉತ್ತಮ ಫಲಿತಾಂಶ ಬರಲು ಶ್ರಮಿಸಿ ಎಂದು ಸಲಹೆ ನೀಡಿದರು.

    ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯದ ಜತೆಗೆ ಕ್ರೀಡೆಯೂ ಬಹುಮುಖ್ಯವಾಗಿದೆ. ಪಿಯುಸಿಯಿಂದ ಪದವಿ ಶಿಕ್ಷಣದ ವರೆಗೆ ನಮ್ಮ ಎಲ್ಲ ಇತರ ತುಂಟಾಟಗಳನ್ನು ಬಿಟ್ಟು, ಮೊಬೈಲ್ ಬಳಕೆ ಕಡಿಮೆ ಮಾಡಿ ಶ್ರಮಪಟ್ಟು ಓದಿದರೆ ಜೀವನವನ್ನು ರೂಪಿಸಿಕೊಂಡು ಹೆತ್ತವರಿಗೆ, ಶಿಕ್ಷಕರಿಗೆ, ಕಾಲೇಜಿಗೆ ಹೆಸರು ತಂದುಕೊಡಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
    ಈ ಕಾಲೇಜಿಗೆ ನೂತನ ಕಟ್ಟಡ, ಕ್ಯಾಂಪಸ್ ನಿರ್ಮಿಸಿಕೊಡಲಾಗಿದೆ. ಸ್ಥಳೀಯವಾಗಿಯೇ ನಿಮಗೆ ಎಲ್ಲ ಶಿಕ್ಷಣ ಸಿಗುತ್ತಿದ್ದು, ಬೇರೆಡೆ ಅಲೆಯುವಂತ ಪರಿಸ್ಥಿತಿ ಇಲ್ಲ ಎಂದರು.
    ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎಸ್.ನರೇಂದ್ರಕುಮಾರ್ ಮಾತನಾಡಿದರು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಮನರಂಜನೆ ನೀಡಿದರು.

    ಡಿಡಿಪಿಐ ನಾಗಮಲ್ಲೇಶ್, ಪ್ರಾಂಶುಪಾಲ ಎಂ.ಸಿ.ಚಂದ್ರಶೇಖರ್, ನಿವೃತ್ತ ಉಪನ್ಯಾಸಕ ಕೆ.ಆರ್.ಲಕ್ಕೇಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಜೆ.ಆನಂದ್‌ಕುಮಾರ್, ಸದಸ್ಯರಾದ ಕೆ.ಎಲ್.ಜಗದೀಶ್, ಚಿಕ್ಕವೀರು, ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ, ತಾಪಂ ಮಾಜಿ ಸದಸ್ಯ ಶ್ರೀನಿವಾಸಪ್ರಸಾದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts