More

    ಉದ್ಯೋಗಸ್ಥೆಗೂ ವಸತಿ ಸೌಲಭ್ಯಕ್ಕೆ ಸಿದ್ಧತೆ!

    ಬೆಳಗಾವಿ: ಉದ್ಯೋಗಸ್ಥ ಬಡ ಮಹಿಳೆಯರಿಗೆ ರಕ್ಷಣೆ ಹಾಗೂ ವಸತಿ ಸೌಲಭ್ಯ ಒದಗಿಸಲು ಮಹಿಳಾ ಸರ್ಕಾರಿ ವಸತಿ ನಿಲಯ ಕಾರ್ಯಾರಂಭಕ್ಕೆ ಕುಂದಾನಗರಿಯಲ್ಲಿ ಭರದ ಸಿದ್ಧತೆ ನಡೆದಿದೆ.

    ಎಲ್ಲವೂ ಅಂದುಕೊಂಡಂತಾದರೆ ಸೆಪ್ಟೆಂಬರ್​ ಅಂತ್ಯದಲ್ಲಿ ವಸತಿ ನಿಲಯಗಳ ಸೌಲಭ್ಯ ಉದ್ಯೋಗಸ್ಥ ಮಹಿಳೆಯರಿಗೆ ಲಭಿಸಲಿದೆ. ಎರಡನೇ ರಾಜಧಾನಿ ಖ್ಯಾತಿಯ ಬೆಳಗಾವಿ ಮಹಾನಗರದಲ್ಲಿ ಸಾವಿರಾರು ಮಹಿಳಾ ಉದ್ಯೋಗಿಗಳಿದ್ದು, ಸಕಾಲಕ್ಕೆ ವಸತಿ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ. ಖಾಸಗಿ ವಸತಿ ನಿಲಯಗಳಿದ್ದರೂ ಹೆಚ್ಚು ಹಣ ತೆರಬೇಕಾಗಿದೆ. ಇದರಿಂದ ವಿಧಿಯಿಲ್ಲದೆ ದೂರದ ಊರುಗಳಿಂದಲೇ ಸಂಚರಿಸುತ್ತಿದ್ದಾರೆ. ಇದೀಗ ಮಹಿಳೆಯರ ನೆರವಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಸತಿ ಸೌಲಭ್ಯ ಕಲ್ಪಿಸಲು ಮುಂದಾಗಿರುವುದು ಹಣ ಮತ್ತು ಸಮಯದ ಉಳಿತಾಯವಾಗಲಿದೆ.

    ಎಲ್ಲೆಲ್ಲಿ ನಿಲಯ ಸ್ಥಾಪನೆ?: ಜನಸಂಖ್ಯೆಗನುಸಾರ ಮಹಾನಗರದಲ್ಲಿ ಮೂರು ಮಹಿಳಾ ವಸತಿ ನಿಲಯ ಪ್ರಾರಂಭಕ್ಕೆ ಯೋಜನೆ ಹಾಕಿಕೊಂಡಿದೆ. ಸ್ಥಳಿಯ ಅಜಮ್​ ನಗರದ 1ನೇ ಕ್ರಾಸ್​ನ ರಿಯಾಜ್​ ಪ್ಲಾಟ್​, ಉದ್ಯಮಬಾಗ ರಾಜಾರಾಂ ನಗರದ ಜ್ಯೋತಿಬಾ ಹುಂಡ್ರೆ ಪ್ಲಾಟ್​ ಹಾಗೂ ಮಚ್ಛೆಯ ಜೈನ ಇಂಜಿನಿಯರಿಂಗ್​ ಕಾಲೇಜಿನ
    ಬಳಿ ಬಾಡಿಗೆ ಕಟ್ಟಡದಲ್ಲಿ ಆರಂಭಿಸಲಾಗುತ್ತಿದೆ. ಅದಕ್ಕಾಗಿ ಅಗತ್ಯ ಸಿಬ್ಬಂದಿ ನೇಮಕಾತಿಯೂ ನಡೆದಿದೆ.

    ಯಾರಿಗೆಲ್ಲ ಉಚಿತ?: ಬೆಳಗಾವಿಯಲ್ಲಿ ಪ್ರಾರಂಭಿಸಲಾಗುತ್ತಿರುವ ಮೂರು ವಸತಿ ನಿಲಯಗಳಲ್ಲಿ ತಲಾ 50 ಜನರಿಗೆ ಅವಕಾಶವಿದ್ದು, 40 ಮಹಿಳೆಯರಿಗೆ ರಿಯಾಯಿತಿ ದರದಲ್ಲಿ, ಎಸ್​ಸಿ, ಎಸ್​ಟಿ, ಅಲ್ಪಸಂಖ್ಯಾತ, ಬಿಪಿಎಲ್​ ವರ್ಗದ 10 ಮಹಿಳೆಯರಿಗೆ ಉಚಿತ ವ್ಯವಸ್ಥೆ ಒದಗಿಸಲಾಗುತ್ತಿದೆ.

    ಮೂರು ವಸತಿ ನಿಲಯದಲ್ಲಿ ಒಟ್ಟು 150 ಮಹಿಳೆಯರು ಇದರ ಸದುಪಯೋಗ ಪಡೆಯಬಹುದಾಗಿದೆ. ವಾರ್ಷಿಕ 50 ಸಾವಿರ ರೂ.ಕ್ಕಿಂತ ಕಡಿಮೆ ಸಂಬಳ ದುಡಿಯುವ, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರು ಇಲ್ಲಿ ವಸತಿ ಪಡೆಯಲು ಅರ್ಹರಾಗಿದ್ದಾರೆ.

    ಎಷ್ಟು ವರ್ಷ ಅವಕಾಶ?: ಒಬ್ಬ ಮಹಿಳೆ ಗರಿಷ್ಠ 3 ವರ್ಷ ವಸತಿ ಸೌಲಭ್ಯ ಪಡೆಯಬಹುದು. ಅದಕ್ಕಿಂತಲೂ ಹೆಚ್ಚಿನ ಅವಧಿಗೆ ಮುಂದುವರಿಯಬೇಕಾದರೆ ಜಿಲ್ಲಾಧಿಕಾರಿ ನೇತೃತ್ವದಲ್ಲಿನ ಜಿಲ್ಲಾ ಟಾಸ್ಕ್​ಪೋರ್ಸ್​ ಕಮಿಟಿಯಿಂದ ಅನುಮತಿ ಪಡೆಯಬೇಕು.

    ಮಕ್ಕಳಿಗೆ ಶಿಶುಪಾಲನಾ ಸೌಲಭ್ಯ: ಉದ್ಯೋಗಸ್ಥ ಮಹಿಳೆಯರ 6 ವರ್ಷದೊಳಗಿನ ಮಕ್ಕಳು ಜತೆಗೆ ವಾಸವಿದ್ದರೆ, ಅವರಿಂದ ಶುಲ್ಕ ಪಡೆದು ಶಿಶು ಪಾಲನಾ ಕೇಂದ್ರದ ಸೌಲಭ್ಯ ಒದಗಿಸಲಿದೆ. ಈ ಶಿಶು ಪಾಲನಾ ಕೇಂದ್ರದಲ್ಲಿ ಪೌಷ್ಟಿಕ ಆಹಾರ, ಆಟಿಕೆ ಸಾಮಾನು, ತೊಟ್ಟಿಲು, ಹಾಸಿಗೆ, ವೈಯಕ್ತಿಕ ಕಾಳಜಿ ವಹಿಸಲು ಸಿಬ್ಬಂದಿ ಒದಗಿಸಲಾಗುತ್ತದೆ. ಈ ಸೌಲಭ್ಯ ಸಿಗಬೇಕೆಂದರೆ ವಸತಿ ನಿಲಯದಿಂದ ಕನಿಷ್ಠ ಹತ್ತು ಮಕ್ಕಳಾದರೂ ಬೇಕು ಎನ್ನುತ್ತಾರೆ ಬೆಳಗಾವಿ ಜಿಲ್ಲಾ ಶಿಶುಪಾಲನಾ ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಸಿಬ್ಬಂದಿ. ಶುದ್ಧ ಕುಡಿಯುವ ನೀರು, ಪ್ರತ್ಯೇಕ ಶೌಚಗೃಹ ಹಾಗೂ ಸ್ನಾಹಗೃಹ ಹೊಂದಿರುವ ಕೊಠಡಿಗಳು, ಪ್ರತ್ಯೇಕ ಕಬೋರ್ಡ್​, ಸೋಲಾರ್​ ಬಿಸಿ ನೀರಿನ ವ್ಯವಸ್ಥೆ, ಮಂಚ, ತಲೆದಿಂಬು, ಹಾಸಿಗೆ, ಕಾಫಿ, ಟೀ, ತಿಂಡಿ, ಊಟ ಹಾಗೂ ದಿನದ 24 ಗಂಟೆಯೂ ವಿದ್ಯುತ್​ ಸೌಲಭ್ಯ ಪಡೆಯಬಹುದಾಗಿದೆ.

    ಬೆಳಗಾವಿಯಲ್ಲಿ ಮೂರು ಸ್ಥಳಗಳಲ್ಲಿ ಮಹಿಳಾ ವಸತಿ ನಿಲಯದ ಸೌಲಭ್ಯ ಪಡೆಯಲು ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. ನಿಲಯಗಳ ನಿರ್ವಹಣೆಗಾಗಿ ಅಗತ್ಯ ಸಿಬ್ಬಂದಿ ನೇಮಕಾತಿ ನಡೆಯುತ್ತಿದೆ. ಅರ್ಹ ಅಭ್ಯರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಟ್ಟಡಗಳನ್ನು ಅಂತಿಮಗೊಳಿಸಲಾಗುವುದು.
    | ಎ.ಎಂ.ಬಸವರಾಜ ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಳಗಾವಿ

    ಉದ್ಯೋಗಸ್ಥ ಮಹಿಳೆಗೆ ಸರ್ಕಾರದಿಂದ ವಸತಿ ನಿಲಯ ಆದಷ್ಟು ಬೇಗ ಆರಂಭಿಸಿದರೆ ಅನುಕೂಲವಾಗುವುದು. ದೂರದ ಊರುಗಳಿಂದ ಬಂದು ಹೋಗಲು ಸಮಯ ಹಾಗೂ ಹಣ ವ್ಯರ್ಥವಾಗುವುದು ತಪ್ಪುತ್ತದೆ.
    | ಅಂಜಲಿ, ಭಾರತಿ, ಸಂಗೀತಾ, ಮಲ್ಲಮ್ಮ (ಉದ್ಯಮಬಾಗದ ಉದ್ಯೋಗಿಗಳು)

    | ರವಿ ಗೋಸಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts