More

    ಉತ್ಕೃಷ್ಟ ಸ್ಥಳೀಯ ಬೆಳೆಗಿಲ್ಲ ಸಮರ್ಪಕ ಬೆಲೆ

    ಶಿರಸಿ: ಕರೊನಾ ಲಾಕ್​ಡೌನ್ ಸಂದರ್ಭದಲ್ಲಿಯೂ ದೇಶಾದ್ಯಂತ ವಿಯೆಟ್ನಾಂ ಕಾಳುಮೆಣಸಿನ ನಾಗಾಲೋಟ ಮುಂದುವರಿದ ಪರಿಣಾಮ ಸ್ಥಳೀಯ ಕಾಳುಮೆಣಸು ದರ ಚೇತರಿಸಿಕೊಳ್ಳುವ ಲಕ್ಷಣ ಕಾಣುತ್ತಿಲ್ಲ. ದರ ಏರಿಕೆಯ ನಿರೀಕ್ಷೆಯಲ್ಲಿ ಬೆಳೆಗಾರರು ದಾಸ್ತಾನಿಟ್ಟ ಉತ್ಪನ್ನವು ಗುಣಮಟ್ಟ ಕಳೆದುಕೊಳ್ಳುವ ಭೀತಿ ತಲೆದೋರಿದೆ.

    ಲಾಕ್​ಡೌನ್ ಇರುವ ಕಾರಣ ವಿದೇಶಿ ವಸ್ತುಗಳ ಆಮದು ಸ್ಥಗಿತಗೊಂಡಿದೆ. ಕಳ್ಳ ಮಾರ್ಗಗಳು ಬಂದ್ ಆಗಿವೆ. ಹೀಗಾಗಿ, ಸ್ಥಳೀಯ ಕಾಳುಮೆಣಸಿನ ದರ ಏರಬಹುದು ಎಂದು ಬೆಳೆಗಾರರು ಕಾಯುತ್ತಿದ್ದರು. ಆದರೆ, ಲಾಕ್​ಡೌನ್ ಪೂರ್ವವೇ ಜನವರಿ, ಫೆಬ್ರವರಿ ತಿಂಗಳಾಂತ್ಯಕ್ಕೆ ಅಂದಾಜು 15ರಿಂದ 20 ಸಾವಿರ ಟನ್ ವಿಯೆಟ್ನಾಂ ಕಾಳುಮೆಣಸು ದೇಶೀಯ ಮಾರುಕಟ್ಟೆ ಪ್ರವೇಶಿಸಿದೆ. ಇದು ಸ್ಥಳೀಯ ಕಾಳುಮೆಣಸಿನ ದರ ಏರಿಕೆಗೆ ತಡೆಯಾಗಿದೆ.

    ಈ ಮೊದಲೂ ವಿಯೆಟ್ನಾಂನಿಂದ ಶ್ರೀಲಂಕಾ ಮಾರ್ಗವಾಗಿ ಭಾರತಕ್ಕೆ ಮುಕ್ತ ವ್ಯಾಪಾರ ಒಪ್ಪಂದದ ಅಡಿ ಅಗ್ಗದ ದರದಲ್ಲಿ ಆಮದಾಗುತ್ತಿರುವ ಕಾಳುಮೆಣಸಿನ ಪರಿಣಾಮ ಕೆಲ ವರ್ಷದ ಹಿಂದೆ ಕೆ.ಜಿ.ಗೆ 700 ರೂಪಾಯಿಗಳಷ್ಟಿದ್ದ ದರ ಈಗ 300 ರೂ.ಗಿಂತಲೂ ಕೆಳ ಮಟ್ಟಕ್ಕೆ ಕುಸಿದಿದೆ. ಪ್ರಸ್ತುತ ಕಡಿಮೆ ಗುಣಮಟ್ಟದ ವಿಯೆಟ್ನಾಂ ಕಾಳುಮೆಣಸು ಮಾರುಕಟ್ಟೆಯಲ್ಲಿ ವಹಿವಾಟಾಗುತ್ತಿರುವ ಕಾರಣ ಸ್ಥಳೀಯ ಕಾಳುಮೆಣಸಿಗೆ ಬೆಲೆ ಏರಿಕೆ ಆಗುತ್ತಿಲ್ಲ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.

    ಉತ್ತರ ಕನ್ನಡದಲ್ಲಿ ಸಾವಿರಾರು ಹೆಕ್ಟೇರ್ ಅಡಕೆ ತೋಟಗಳಲ್ಲಿ ಉಪ ಬೆಳೆಯಾಗಿ ಕಾಳುಮೆಣಸು ಬೆಳೆಯಲಾಗುತ್ತಿದ್ದು, 10 ಸಾವಿರ ಕ್ವಿಂಟಾಲ್ ಉತ್ಪನ್ನವಿದೆ. ಜತೆಗೆ, ದರವಿಲ್ಲವೆಂದು ಆರೆಂಟು ವರ್ಷಗಳಿಂದ ಸಂಗ್ರಹಿಟ್ಟ 15 ಸಾವಿರ ಟನ್​ಗೂ ಹೆಚ್ಚು ಕಾಳುಮೆಣಸು ಬೆಳೆಗಾರರಲ್ಲಿಯೇ ಉಳಿದಿದೆ. ಈ ವರ್ಷವೂ ದರವಿಲ್ಲದ ಕಾರಣ ಹೀಗೆ ದಾಸ್ತಾನಿಟ್ಟ ಕಾಳುಮೆಣಸಿನ ಗುಣಮಟ್ಟವು ಕುಂಠಿತವಾಗುವ ಜತೆಗೆ ಧೂಳು ಹಿಡಿಯುವ ಭೀತಿ ತಲೆದೋರಿದೆ.

    ಭಾರತದಲ್ಲಿ ವಾರ್ಷಿಕ 35ರಿಂದ 40 ಸಾವಿರ ಟನ್ ಕಾಳುಮೆಣಸು ಉತ್ಪಾದನೆಯಾಗುತ್ತಿದ್ದು, ಸ್ವಂತ ಬಳಕೆಗೆ 70-75 ಸಾವಿರ ಟನ್ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಅಂದಾಜು 25 ಸಾವಿರ ಟನ್ ಕಾಳುಮೆಣಸು ಭಾರತಕ್ಕೆ ಆಮದಾಗಬೇಕು. ಆದರೆ, ವಾರ್ಷಿಕವಾಗಿ ವಿಯೆಟ್ನಾಂನಿಂದ 50-75 ಸಾವಿರ ಟನ್ ಕಾಳುಮೆಣಸು ಆಮದಾಗುತ್ತಿದೆ. ವಿಯೆಟ್ನಾಂ ಕಾಳುಮೆಣಸು ಕಳ್ಳಮಾರ್ಗದ ಮೂಲಕ ಸ್ಥಳೀಯ ಮಾರುಕಟ್ಟೆ ಪ್ರವೇಶಿಸಿದ ಪರಿಣಾಮ ಕಾಳುಮೆಣಸು ದರ ಏರಿಕೆ ಆಗುತ್ತಿಲ್ಲ. ಹೀಗಾಗಿ, ಅದು ಖಾಲಿಯಾದ ನಂತರವೇ ದರ ಹೆಚ್ಚಬಹುದಾಗಿದೆ. ಇನ್ನು ಎರಡ್ಮೂರು ತಿಂಗಳ ನಂತರವಷ್ಟೇ ಇಲ್ಲಿನ ಕಾಳುಮೆಣಸಿಗೆ ದರ ಬರುವ ಸಾಧ್ಯತೆಯಿದೆ.
    | ರವೀಶ ಹೆಗಡೆ, ಟಿ.ಎಸ್.ಎಸ್ ಪ್ರಧಾನ ವ್ಯವಸ್ಥಾಪಕ

    ಸರಿಯಾದ ದರವಿಲ್ಲದೆ ಬಹಳ ಕಾಲ ಕಳೆದಿದ್ದು, ಸಾಕಷ್ಟು ರೈತರು ಕಾಳುಮೆಣಸು ದಾಸ್ತಾನಿಟ್ಟು ನಷ್ಟ ಅನುಭವಿಸುತ್ತಿದ್ದಾರೆ. ಸ್ವದೇಶಿ ವಸ್ತು ಬಳಸುವಂತೆ ಹೇಳುವ ಕೇಂದ್ರ ಸರ್ಕಾರ ಕೃಷಿ ಉತ್ಪನ್ನಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಬೇಕು. ಕಾಳುಮೆಣಸಿಗೆ ಬೆಂಬಲ ಬೆಲೆ ಘೊಷಿಸಬೇಕು ಇಲ್ಲವೆ ಸರ್ಕಾರವೇ ಖರೀದಿಸಲು ಕ್ರಮ ಕೈಗೊಳ್ಳಬೇಕು.
    | ದೀಪಕ ದೊಡ್ಡೂರು, ಕಾಳುಮೆಣಸು ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts