More

    ಈಗ ಹೋಂ ಐಸೋಲೇಷನ್ನೇ ಗತಿ!

    ಹಾವೇರಿ: ಇದುವರೆಗೆ ಬೆಂಗಳೂರು ಹಾಗೂ ಕೆಲ ನಗರಗಳಲ್ಲಿ ಕರೊನಾ ರೋಗಿಗಳಿಗೆ ಬೆಡ್ ಸಿಗದೇ ಪರದಾಡಿದ ಪ್ರಕರಣಗಳು ವರದಿಯಾಗಿದ್ದವು. ಆದರೆ, ಈಗ ಜಿಲ್ಲೆಯಲ್ಲಿಯೂ ಇಂತಹ ಪರಿಸ್ಥಿತಿ ತಲೆದೋರುತ್ತಿರುವುದು ಆತಂಕ ಸೃಷ್ಟಿಸಿದೆ.

    ಮೇ ತಿಂಗಳಿನಿಂದಲೇ ಜಿಲ್ಲೆಯಲ್ಲಿ ಸೋಂಕು ಹರಡಲು ಆರಂಭಿಸಿತು. ಸೋಂಕು ಹರಡುವ ಸರಾಸರಿಯ ಆಧಾರದ ಮೇಲೆ ರೋಗಿಗಳಿಗೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲು ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದರು. ಆದರೆ, ಇದ್ಯಾವುದಕ್ಕೂ ಜಿಲ್ಲಾಡಳಿತ ಕೇರ್ ಮಾಡದ ಪರಿಣಾಮ ಇದೀಗ ಪಾಸಿಟಿವ್ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆ, ಕೇರ್ ಸೆಂಟರ್​ಗಳಲ್ಲಿ ಬೆಡ್​ಗಳು ಸಿಗದ ಸ್ಥಿತಿ ನಿರ್ವಣವಾಗಿದೆ.

    ಎಷ್ಟು ಬೆಡ್​ಗಳಿವೆ?: ಕರೊನಾ ಚಿಕಿತ್ಸೆಗಾಗಿ ಜಿಲ್ಲಾಡಳಿತ ಈವರೆಗೆ ಜಿಲ್ಲಾಸ್ಪತ್ರೆಯಲ್ಲಿ 78 ಬೆಡ್, ಸವಣೂರ ಆಸ್ಪತ್ರೆಯಲ್ಲಿ 45, ರಾಣೆಬೆನ್ನೂರ, ಹಿರೇಕೆರೂರ ತಾಲೂಕು ಆಸ್ಪತ್ರೆಯಲ್ಲಿ ತಲಾ 30 ಬೆಡ್​ಗಳ ಕೋವಿಡ್ ಹೆಲ್ತ್ ಕೇರ್ ಸೆಂಟರ್​ಗಳನ್ನು ಆರಂಭಿಸಿದೆ. ಹಾವೇರಿ ತಾಲೂಕಿನ ಬಸಾಪುರದಲ್ಲಿ 100, ಹಾನಗಲ್ಲ ತಾಲೂಕು ಕಲಕೇರಿಯಲ್ಲಿ 75, ಹಿರೇಕೆರೂರ ತಾಲೂಕಿನ ದೂದಿಹಳ್ಳಿಯಲ್ಲಿ 75, ಬ್ಯಾಡಗಿ ಪಟ್ಟಣದಲ್ಲಿ 50 ಬೆಡ್​ಗಳ ಕೋವಿಡ್ ಕೇರ್ ಸೆಂಟರ್​ಗಳನ್ನು ಸ್ಥಾಪಿಸಿದೆ. ಇವೆಲ್ಲ ಸೇರಿ ಒಟ್ಟು 583 ಬೆಡ್​ಗಳು ಕರೊನಾ ಪಾಸಿಟಿವ್ ರೋಗಿಗಳ ಚಿಕಿತ್ಸೆಗೆ ಸದ್ಯಕ್ಕೆ ಲಭ್ಯವಾಗಿವೆ. ಆದರೆ, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಆ. 5ಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ 657ಕ್ಕೆ ತಲುಪಿದೆ. ಹೀಗಾಗಿ, ರೋಗಿಗಳನ್ನು ಆಸ್ಪತ್ರೆ, ಕೇರ್ ಸೆಂಟರ್​ಗಳ ಬದಲು ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಲು ಜಿಲ್ಲಾಡಳಿತ ಸೂಚನೆ ನೀಡುತ್ತಿದೆ. ಇದರಿಂದ ರೋಗಿಗಳು ಅನಿವಾರ್ಯವಾಗಿ ಮನೆಯಲ್ಲಿಯೇ ಉಳಿದುಕೊಳ್ಳುವ ಸ್ಥಿತಿ ನಿರ್ವಣವಾಗಿದೆ. ಸರ್ಕಾರಿ ಆಸ್ಪತ್ರೆ, ಕೇರ್ ಸೆಂಟರ್​ಗಳಲ್ಲಿ ಬೆಡ್ ಇಲ್ಲದ ಪರಿಣಾಮ ಆ. 5ಕ್ಕೆ 79 ರೋಗಿಗಳನ್ನು ಹೋಂ ಐಸೋಲೇಷನ್ ಮಾಡಲಾಗಿದೆ.

    ಜಿಲ್ಲಾಡಳಿತದ ವೈಫಲ್ಯ : ಹೋಂ ಐಸೋಲೇಷನ್ ಮಾಡಲು ಸರ್ಕಾರ ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದೆ. ರೋಗಿಗಳ ಮನೆಯಲ್ಲಿಯೇ ಪ್ರತ್ಯೇಕ ಬೆಡ್ ರೂಂ., ಟಾಯ್ಲೆಟ್ ಸೇರಿ ಕೆಲ ಸೌಲಭ್ಯಗಳಿರಬೇಕು. ಅಲ್ಲದೆ, ಮುಖ್ಯವಾಗಿ ಅವರಿಗೆ ಸೋಂಕಿನ ಲಕ್ಷಣಗಳಿರಬಾರದು. ಆದರೆ, ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಹೆಚ್ಚಾಗಿ ತೀವ್ರ ಜ್ವರ, ಕೆಮ್ಮು, ಉಸಿರಾಟದ ತೊಂದರೆಯಿರುವವರಿಗೆ ಪಾಸಿಟಿವ್ ವಕ್ಕರಿಸುತ್ತಿದೆ. ಇವರನ್ನು ಹೋಂ ಐಸೋಲೇಷನ್ ಮಾಡಲು ನಿಯಮದಲ್ಲಿ ಅವಕಾಶವಿಲ್ಲ. ಜಿಲ್ಲಾಡಳಿತದ ಬಳಿ ಬೆಡ್ ವ್ಯವಸ್ಥೆ ಇಲ್ಲ. ಅಲ್ಲದೆ, ಯಾವ ರೋಗಿಗಳು ಹೋಂ ಐಸೋಲೇಷನ್ ಆಗಿದ್ದಾರೆ ಎಂಬ ಮಾಹಿತಿಯನ್ನು ಜಿಲ್ಲಾಡಳಿತ ಸ್ಪಷ್ಟವಾಗಿ ನೀಡುತ್ತಿಲ್ಲ. ಕೇವಲ ಅಂಕಿಸಂಖ್ಯೆಯನ್ನು ಮಾತ್ರ ಪ್ರಕಟಿಸುತ್ತಿದೆ. ಇದನ್ನೆಲ್ಲ ಗಮನಿಸಿದರೆ ಜಿಲ್ಲಾಡಳಿತ ತಾನು ಮಾಡಿದ ತಪ್ಪಿಗೆ ರೋಗಿಗಳನ್ನು ಬಲಿಪಶು ಮಾಡುತ್ತಿರುವ ಸಂಶಯವೂ ಜನರನ್ನು ಕಾಡತೊಡಗಿದೆ.

    ಹೆಚ್ಚುವರಿ ಬೆಡ್​ಗೆ ಸಿದ್ಧತೆ: ಜಿಲ್ಲೆಯಲ್ಲಿ ಜುಲೈ ಅಂತ್ಯದಿಂದ ಹೆಚ್ಚಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಲು ಆರಂಭಿಸಿದ್ದರಿಂದ ಜಿಲ್ಲಾಡಳಿತ ಹೆಚ್ಚುವರಿಯಾಗಿ 835 ಬೆಡ್​ಗಳ ವ್ಯವಸ್ಥೆ ಮಾಡಲು ಸಿದ್ಧತೆ ಕೈಗೊಂಡಿದೆ. ಇದರಲ್ಲಿ ಜಿಲ್ಲಾಸ್ಪತ್ರೆಯಲ್ಲಿ 50, ಆರು ತಾಲೂಕು ಆಸ್ಪತ್ರೆಗಳಲ್ಲಿ ತಲಾ 50, ಈಗಿರುವ ಹಾಗೂ ಹೊಸ ಕೋವಿಡ್ ಕೇರ್ ಸೆಂಟರ್​ಗಳಲ್ಲಿ 485 ಬೆಡ್​ಗಳನ್ನು ಹಾಕಲು ನಿರ್ಣಯ ಕೈಗೊಂಡು ಕೆಲಸ ಆರಂಭಿಸಿದೆ. ಆದರೆ, ಇವು ಇನ್ನೂ ಪೂರ್ಣಪ್ರಮಾಣದಲ್ಲಿ ಕಾರ್ಯಗತವಾಗಿಲ್ಲ. ಇವುಗಳು ಆರಂಭವಾದರೆ ಒಟ್ಟು 1,418 ಬೆಡ್​ಗಳು ಲಭ್ಯವಾಗುತ್ತವೆ.

    ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಣೆ

    ತುರ್ತು ಅಗತ್ಯ ಬಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿನ ಶೇ. 50ರಷ್ಟು ಬೆಡ್​ಗಳನ್ನು ವಶಪಡಿಸಿಕೊಳ್ಳುವಂತೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಆದರೆ, ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಣಿದಿರುವ ಜಿಲ್ಲಾಡಳಿತವು ಅದರ ಬದಲು ಹೊಸ ವ್ಯವಸ್ಥೆಯತ್ತಲೇ ಹೆಚ್ಚು ಗಮನಹರಿಸಿದೆ. ಹೊಸದಾಗಿ ಎಲ್ಲವನ್ನೂ ನಿರ್ಮಾಣ ಮಾಡಲು ಸಾಕಷ್ಟು ಸಮಯವೂ ಬೇಕು. ಅದರ ಬದಲು ಖಾಸಗಿ ಆಸ್ಪತ್ರೆಗಳಲ್ಲಿನ ಬೆಡ್​ಗಳನ್ನು ವಶಕ್ಕೆ ಪಡೆದು ಅಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡಲು ಮುಂದಾಗದೇ ಇರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

    ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಸೇರಿ ಈಗಾಗಲೇ ಒಟ್ಟು 583 ಬೆಡ್​ಗಳನ್ನು ಕೋವಿಡ್ ರೋಗಿಗಳಿಗೆ ಸಿದ್ಧಪಡಿಸಲಾಗಿದೆ. ಈ ವಾರದಲ್ಲಿ ಶಿಗ್ಗಾಂವಿ ತಾಲೂಕು ಆಸ್ಪತ್ರೆ ಸೇರಿ ಇನ್ನೂ 500 ಬೆಡ್​ಗಳ ವ್ಯವಸ್ಥೆ ಸಿದ್ಧಗೊಳ್ಳಲಿದೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು ಹೆಚ್ಚಾಗಿದ್ದರೂ ರೋಗ ಲಕ್ಷಣವಿಲ್ಲದವರನ್ನು ನಿಯಮದ ಪ್ರಕಾರ ಹೋಂ ಐಸೋಲೇಷನ್ ಮಾಡಲಾಗಿದೆ.
    | ಸಂಜಯ ಶೆಟ್ಟೆಣ್ಣನವರ, ಜಿಲ್ಲಾಧಿಕಾರಿ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts