More

    ಆಯಸ್ಸು 2 ವರ್ಷ ಕಡಿತ!; ಕರೊನಾ ಪರಿಣಾಮ ನಿರೀಕ್ಷಿತ ಜೀವಿತಾವಧಿ ಇಳಿಕೆ, ಅಧ್ಯಯನ ವರದಿ..

    ನವದೆಹಲಿ: ಕೋವಿಡ್-19 ಸಾಂಕ್ರಾಮಿಕತೆಯ ಪರಿಣಾಮವಾಗಿ ಭಾರತದಲ್ಲಿ ಸರಾಸರಿ ಜೀವಿತಾವಧಿ ಎರಡು ವರ್ಷ ಕಡಿಮೆಯಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ. ದೇಶದಲ್ಲಿ 2019ರಲ್ಲಿ ಪುರುಷರ ನಿರೀಕ್ಷಿತ ಜೀವಿತಾವಧಿ 69.5 ವರ್ಷವಿದ್ದು 2020ರಲ್ಲಿ 67.5 ವರ್ಷಕ್ಕೆ ಇಳಿದಿದೆ. ಮಹಿಳೆಯರ ನಿರೀಕ್ಷಿತ ಆಯಸ್ಸು 72 ವರ್ಷದಿಂದ 69.8 ವರ್ಷಕ್ಕೆ ಕುಸಿದಿದೆ ಎಂದು ಅಧ್ಯಯನ ವರದಿ ಹೇಳಿದೆ.

    ಮುಂಬೈನ ಅಂತಾರಾಷ್ಟ್ರೀಯ ಜನಸಂಖ್ಯಾ ಅಧ್ಯಯನ ಸಂಸ್ಥೆ (ಐಐಪಿಎಸ್) ವಿಜ್ಞಾನಿಗಳು ನಡೆಸಿದ ಅಧ್ಯಯನ, ಜೀವಿತಾವಧಿ ಕುಸಿತದ ಬಗ್ಗೆ ಎಚ್ಚರಿಕೆ ನೀಡಿದೆ. ಐಐಪಿಎಸ್ ಪ್ರೊಫೆಸರ್ ಸೂರ್ಯಕಾಂತ್ ಯಾದವ್ ಸಿದ್ಧಪಡಿಸಿರುವ ವರದಿ ‘ಬಿಎಂಸಿ ಪಬ್ಲಿಕ್ ಹೆಲ್ತ್’ನಲ್ಲಿ ಪ್ರಕಟವಾಗಿದೆ. ನವಜಾತ ಶಿಶುಗಳು ಬದುಕುಳಿಯುವ ಸರಾಸರಿ ವರ್ಷಗಳ ಆಧಾರದಲ್ಲಿ ಹುಟ್ಟಿದಾರಭ್ಯ ನಿರೀಕ್ಷಿತ ಜೀವಿತಾವಧಿಯನ್ನು (ಲೈಫ್ ಎಕ್ಸ್​ಪೆಕ್ಟನ್ಸಿ ಅಟ್ ಬರ್ತ್) ಲೆಕ್ಕ ಹಾಕಲಾಗುತ್ತದೆ. ಆ ಮಗು ಹುಟ್ಟುವ ವೇಳೆ ಸಾವಿನ ಪ್ಯಾಟರ್ನ್ ಭವಿಷ್ಯದಲ್ಲಿಯೂ ಸ್ಥಿರವಾಗಿರುವ ಸಂದರ್ಭವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕರೊನಾ ಸೋಂಕು, 39-69 ವಯೋಗುಂಪಿನ ಪುರುಷರನ್ನು ಗರಿಷ್ಠ ಪ್ರಮಾಣದಲ್ಲಿ ಬಲಿತೆಗೆದುಕೊಂಡಿದೆ ಎಂದು ಅಧ್ಯಯನ ಆಧರಿಸಿ ಯಾದವ್ ಹೇಳಿದ್ದಾರೆ.

    ಮೂರನೇ ಅಲೆ ಭೀಕರವಲ್ಲ

    ಭಾರತದಲ್ಲಿ ಕರೊನಾ ಮೂರನೇ ಅಲೆ ಏಳುವ ಸಾಧ್ಯತೆಯಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವಂಥ ಕರೊನಾ ವೈರಸ್​ನ ಹೊಸ ರೂಪಾಂತರಿ ಸೃಷ್ಟಿಯಾಗದಿದ್ದರೆ ಮೂರನೇ ಅಲೆ ಹೆಚ್ಚು ಅಪಾಯಕಾರಿ ಆಗಲಾರದು. ಹಾಗಂತ ಸಾಂಕ್ರಾಮಿಕತೆ (ಪಾಂಡೆಮಿಕ್) ಈಗ ಸ್ಥಳೀಯ ಸೋಂಕಾಗಿದೆ (ಎಂಡೆಮಿಕ್ ) ಎನ್ನುವುದು ಇದರ ಅರ್ಥವಲ್ಲ ಎಂದೂ ತಜ್ಞರು ಎಚ್ಚರಿಸಿದ್ದಾರೆ. ದೀಪಾವಳಿ ಸಮೀಪಿಸುತ್ತಿದ್ದು ಹಬ್ಬದ ಋತು ಮುಗಿಯುತ್ತಿರುವ ಕಾಲಘಟ್ಟದಲಿ ್ಲ ವಿಜ್ಞಾನಿಗಳು ಆಶಾವಾದದ ಸುಳಿವಿನ ಜೊತೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಅಮೆರಿಕದಂಥ ದೇಶಗಳಲ್ಲಿ ಸೋಂಕಿನ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಬಗ್ಗೆ ತಜ್ಞರು ಗಮನ ಸೆಳೆದಿದ್ದಾರೆ. ಲಸಿಕೆಯ ಶತಕೋಟಿ ಡೋಸ್ ಸಾಧನೆ ಶ್ಲಾಘನೀಯ. ಆದರೆ ಮಾಡಬೇಕಾದ ಕಾರ್ಯ ಇನ್ನೂ ಬಹಳಷ್ಟಿದೆ ಎಂದು ವೈರಾಣು ತಜ್ಞ ಶಹೀದ್ ಜಮೀಲ್ ಹೇಳಿದ್ದಾರೆ.

    ದೀಪಾವಳಿ, ಈದ್​ಗೆ ಮಾರ್ಗಸೂಚಿ

    ಮುಂದಿನ ತಿಂಗಳ ದೀಪಾವಳಿ ಮತ್ತು ಈದ್ ಹಬ್ಬದ ಹಿನ್ನೆಲೆ ಯಲ್ಲಿ ಕರೊನಾ ನಿಯಂತ್ರಣ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜನರಿಗೆ ಕರೆ ನೀಡಿರುವ ಕೇಂದ್ರ ಸರ್ಕಾರ ಆನ್​ಲೈನ್ ಖರೀದಿಗೆ ಹೆಚ್ಚು ಒತ್ತು ನೀಡುವಂತೆ ಸಲಹೆ ಮಾಡಿದೆ. ಅನಗತ್ಯ ಪ್ರಯಾಣ ಮಾಡುವುದು ಬೇಡ ಎಂದೂ ಹೇಳಿದೆ. ಮಾರ್ಗಸೂಚಿಯ ಪ್ರಮುಖ ಅಂಶಗಳು ಇಲ್ಲಿವೆ.

    • ಕಂಟೇನ್ಮೆಂಟ್ ವಲಯ ಮತ್ತು ಶೇಕಡ 5ಕ್ಕಿಂತ ಅಧಿಕ ಪಾಸಿಟಿವ್ ಪರೀಕ್ಷಾ ವರದಿ ಬರುವ ಜಿಲ್ಲೆಗಳಲ್ಲಿ ಹೆಚ್ಚು ಜನರು ಸಭೆ ಸೇರುವಂತಿಲ್ಲ.
    • ಸಭೆ-ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಪಡೆಯಬೇಕು. ಭಾಗವಹಿಸುವವರ ಸಂಖ್ಯೆ ಮೇಲೆ ನಿಗಾ.
    • ಮಾಲ್, ಸ್ಥಳೀಯ ಮಾರುಕಟ್ಟೆ ಗಳು ಮತ್ತು ಪ್ರಾರ್ಥನಾ ಸ್ಥಳಗಳಲ್ಲಿ ಮಾರ್ಗಸೂಚಿಯ ಕಟ್ಟುನಿಟ್ಟಿನ ಪಾಲನೆ.
    • ಟೆಸ್ಟ್, ಟ್ರ್ಯಾಕ್​, ಟ್ರೀಟ್, ವ್ಯಾಕ್ಸಿನೇಟ್ ಹಾಗೂ ಕರೊನಾ ಮಾರ್ಗಸೂಚಿ ಪಾಲನೆ.
    • ಹೊಸ ಕೇಸ್​ಗಳ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು.

    ಲಸಿಕೆ ಉತ್ಪಾದಕರೊಂದಿಗೆ ಪ್ರಧಾನಿ ಸಭೆ

    ಕರೊನಾ-ವಿರೋಧಿ ಸಮರದಲ್ಲಿ ಭಾರತ ಶತಕೋಟಿ ಡೋಸ್ ಲಸಿಕೆಯ ಹೆಗ್ಗುರುತು ನೆಟ್ಟ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭಾರತೀಯ ವ್ಯಾಕ್ಸಿನ್ ಉತ್ಪಾದಕರೊಂದಿಗೆ ವರ್ಚುವಲ್ ಸಭೆ ನಡೆಸಿದರು. ಸೆರಂ ಸಂಸ್ಥೆ, ಭಾರತ್ ಬಯೋಟೆಕ್, ಡಾ. ರೆಡ್ಡೀಸ್ ಲ್ಯಾಬೊರೇಟರೀಸ್, ಝೈಡುಸ್ ಕ್ಯಾಡಿಲಾ, ಬಯಾಲಾಜಿಕಲ್ ಇ, ಜಿನ್ನೋವಾ ಬಯೋಫಾರ್ವ ಮತ್ತು ಪನಾಸಿಯಾ ಬಯೋಟೆಕ್ ಪ್ರತಿನಿಧಿಗಳು ಸಭೆಯಲ್ಲಿ ಇದ್ದರು. ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಮತ್ತು ರಾಜ್ಯ ಸಚಿವರಾದ ಭಾರತಿ ಪ್ರವೀಣ್ ಕೂಡ ಭಾಗವಹಿಸಿದ್ದರು.

    ರಷ್ಯಾದಲ್ಲಿ ಹೆಚ್ಚಿದ ಸಾವು

    ರಷ್ಯಾದಲ್ಲಿ ಕರೊನಾ ಸೋಂಕಿನಿಂದ ಶನಿವಾರ 1,075 ಜನರು ಮೃತಪಟ್ಟಿದ್ದು ಸಾಂಕ್ರಾಮಿಕತೆ ಆರಂಭವಾದಾಗಿನಿಂದ ದೇಶದಲ್ಲಿ ದಾಖಲಾದ ಗರಿಷ್ಠ ಮರಣ ಪ್ರಮಾಣವಾಗಿದೆ. ದಾಖಲೆಯ 37,678 ಹೊಸ ಪ್ರಕರಣಗಳೂ ವರದಿಯಾಗಿವೆ. ಬ್ರಿಟನ್, ಚೀನಾ ಮತ್ತು ಕೆಲವು ಪೂರ್ವ ಯೂರೋಪ್ ದೇಶಗಳಲ್ಲಿ ಕರೊನಾ ಸೋಂಕು ಮತ್ತೆ ಉಲ್ಬಣಿಸುತ್ತಿರುವುದರಿಂದ ಮತ್ತೆ ಅಪಾಯದ ಕತ್ತಿ ತೂಗುತ್ತಿದೆ. ಬ್ರಿಟನ್ ಮತ್ತು ರಷ್ಯಾದಲ್ಲಿ ಅತಿ ಹೆಚ್ಚು ಹೊಸ ಕೇಸ್​ಗಳು ಪತ್ತೆಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ತಿಳಿಸಿದೆ.

    ಸಾವಿನ ಸಂಖ್ಯೆ ಏರಿಕೆ

    ಕರೊನಾದಿಂದ ಮೃತಪಟ್ಟವರ ಸಂಖ್ಯೆ ಯನ್ನು ಕೇರಳ ಪರಿಷ್ಕರಿಸಿರುವುದರಿಂದ ದೇಶದಲ್ಲಿ ದೈನಿಕ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಹಿಂದೆ ಸಂಭವಿಸಿದ 292 ಸಾವುಗಳನ್ನು ಕೇರಳ ತನ್ನ ಕರೊನಾ ಮರಣ ಪಟ್ಟಿಗೆ ಸೇರಿಸಿದ್ದರಿಂದ ಶನಿವಾರ ದೈನಿಕ ಸಾವಿನ ಸಂಖ್ಯೆ 666 ಆಗಿದೆ.

    ಸೋಂಕು ಹೆಚ್ಚಳ: ಶನಿವಾರ ದೇಶದಲ್ಲಿ ಕರೊನಾ ಸೋಂಕಿನ 16,326 ಹೊಸ ಕೇಸ್ ದೃಢ ಪಟ್ಟಿವೆ. ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆ 3,41,59,562ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು 232 ದಿನಗಳಲ್ಲಿ 1,73,728ಕ್ಕೆ ಇಳಿದಿದೆ. ಕರೊನಾ ನಿಯಂತ್ರಣ ಕ್ರಮದ ಭಾಗವಾಗಿ ಭಾರತ ಸಹಿತ ದಕ್ಷಿಣ ಏಷ್ಯಾದ ಆರು ದೇಶಗಳ ವಿಮಾನ ಪ್ರಯಾಣಿಕರ ಮೇಲೆ ಹೇರಿದ್ದ ನಿರ್ಬಂಧವನ್ನು ಸಿಂಗಾಪುರ ಶನಿವಾರ ತೆಗೆದು ಹಾಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts