More

    ಆನವಟ್ಟಿಯ 140 ರೈತರ ವಿರುದ್ಧ ಕೇಸ್; ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ; ಮಲೆನಾಡು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ

    ಸಾಗರ: ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ ಶಿಡ್ಲಿಘಟ್ಟ, ಕಾತೂರು, ತಾಳಗುಪ್ಪ, ಗೆಂಡ್ಲ ಗ್ರಾಮದ 140ಕ್ಕೂ ಹೆಚ್ಚು ರೈತರ ಮೇಲೆ ಕಾನೂನು ಬಾಹಿರವಾಗಿ ಸೆಕ್ಷನ್ 64ರ ಅಡಿ ದಾಖಲಿಸಿರುವ ಪ್ರಕರಣವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ಗುರುವಾರ ಮಲೆನಾಡು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಉಪವಿಭಾಗಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
    ಸರ್ಕಾರ ರೈತರ ಪರವಾಗಿದ್ದೇವೆ ಎನ್ನುವ ಭಾಷಣ, ಘೋಷಣೆಗಳನ್ನು ಮಾಡುತ್ತಿದೆಯೇ ಹೊರತು ಅವರಿಗೆ ಯಾವುದೇ ಸಹಕಾರ ನೀಡದೆ ಕಿರುಕುಳ ನೀಡುತ್ತಿದೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ದೂರಿದರು.
    ವಿನಾಕಾರಣ ಆನವಟ್ಟಿ ಹೋಬಳಿಯ 140ಕ್ಕೂ ಹೆಚ್ಚು ರೈತರ ಮೇಲೆ ಅರಣ್ಯ ಇಲಾಖೆ ಕಾನೂನುಬಾಹಿರವಾಗಿ ಕೇಸ್ ದಾಖಲಿಸಿರುವ ಕ್ರಮ ಖಂಡನೀಯ. ಜಿಲ್ಲಾಧಿಕಾರಿಗಳು ರೈತರ ಮೇಲೆ ಹಾಕಿರುವ ಕೇಸ್ ಕಾನೂನುಬಾಹಿರವೆಂದು ಪರಿಶಿಷ್ಟ ಕಲ್ಯಾಣ ಇಲಾಖೆಯ ರಾಜ್ಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಆದರೆ ಅರಣ್ಯ ಇಲಾಖೆ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿರುವುದು ಅವರ ದಬ್ಬಾಳಿಕೆಗೆ ಸಾಕ್ಷಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಕಳೆದ 17 ತಿಂಗಳಿನಿಂದ ಈ ಭಾಗದ ರೈತರು ತಮ್ಮ ಮೇಲೆ ಹಾಕಿರುವ ಕೇಸ್ ಹಿಂದಕ್ಕೆ ಪಡೆದು, ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಸೊರಬ ಕ್ಷೇತ್ರದ ಶಾಸಕರು ಸಂಕಷ್ಟದಲ್ಲಿರುವ ರೈತರ ಬಗ್ಗೆ ಕಾಳಜಿ ವಹಿಸದೆ ಇರುವುದು ಅವರ ರೈತವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ 90ಸಾವಿರಕ್ಕೂ ಹೆಚ್ಚು ಜನರು ಅರಣ್ಯಭೂಮಿಯಲ್ಲಿ ಸಾಗುವಳಿ ಮಾಡಿದ್ದಾರೆ. ಅವರ‌್ಯಾರಿಗೂ ನೋಟಿಸ್ ಕೊಡದೆ ಕೇವಲ ಸೊರಬ ತಾಲೂಕಿನ 140 ರೈತರ ಮೇಲೆ ಕೇಸ್ ದಾಖಲಿಸಿರುವುದು ದುರುದ್ದೇಶಪೂರಿತವಾಗಿದ್ದು, ಜಿಲ್ಲಾಡಳಿತ ಇದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
    ಸ್ವತಃ ಜಿಲ್ಲಾಧಿಕಾರಿಗಳೇ ರೈತರ ಮೇಲೆ ದಾಖಲಿಸಿರುವ ಪ್ರಕರಣ ಕಾನೂನುಬಾಹಿರ ಎಂದು ಹೇಳಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ರೈತರನ್ನು ಒಕ್ಕಲೆಬ್ಬಿಸಲು ಪಣತೊಟ್ಟು ನಿಂತಂತೆ ಕಾಣುತ್ತಿದೆ. ರೈತರು ನೆಮ್ಮದಿಯಿಂದ ನಿದ್ರೆ ಮಾಡಲು ಸಹ ಸಾಧ್ಯವಾಗುತ್ತಿಲ್ಲ. ತಕ್ಷಣ ರೈತರ ಮೇಲೆ ಕಾನೂನುಬಾಹಿರವಾಗಿ ಹಾಕಿರುವ ಕೇಸ್ ಹಿಂದಕ್ಕೆ ಪಡೆಯದಿದ್ದರೆ ಉಪವಿಭಾಗಾಧಿಕಾರಿಗಳ ಕಚೇರಿಗೆ ಬೀಗ ಜಡಿದು ಕಾನೂನುಭಂಗ ಚಳವಳಿ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ. ನಾವು ಜೈಲಿಗೆ ಹೋಗಲು ಸಿದ್ಧರಿದ್ದೇವೆ. ನ್ಯಾಯಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧರಿದ್ದೇವೆ. ಸರ್ಕಾರ ರೈತರ ಪರ ಡೋಂಗಿ ಭರವಸೆ ಮತ್ತು ಯೋಜನೆಗಳನ್ನು ಘೋಷಿಸುವುದನ್ನು ಬಿಟ್ಟು ಮೊದಲು ಅಮಾಯಕ ರೈತರ ಮೇಲೆ ಹಾಕಿರುವ ಕೇಸ್‌ಗಳನ್ನು ವಾಪಸ್ ಪಡೆಯಲಿ ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts