More

    ಆದಾಯ ಕ್ರೋಡೀಕರಣಕ್ಕೆ ಆದ್ಯತೆ

    ಕೋಲಾರ: ನಗರಾಭಿವೃದ್ಧಿ ಪ್ರಾಧಿಕಾರಗಳು ಆದಾಯ ಕ್ರೋಡೀಕರಣಕ್ಕೆ ಆದ್ಯತೆ ನೀಡಿ ಹಾಗೂ ಅಭಿವೃದ್ಧಿ ಕಾಮಗಾರಿ ಮುಗಿಸುವಲ್ಲಿ ವಿಳಂಬ ಮಾಡುವ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸಿ ಎಂದು ನಗರಾಭಿವೃದ್ಧಿ ಸಚಿವ ಬಿ. ಎ. ಬಸವರಾಜ್ ಅಧಿಕಾರಿಗಳಿಗೆ ಸೂಚಿಸಿದರು.

    ಕೆಯುಡಿಎ ಕಚೇರಿ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಟಮಕದಲ್ಲಿ 1995ರಲ್ಲಿ ಬಡಾವಣೆ ನಿರ್ಮಿಸಿದ ಮೇಲೆ ಹೊಸ ಬಡಾವಣೆ ನಿರ್ಮಿಸದೆ ಇಷ್ಟು ವರ್ಷ ಏನು ಮಾಡುತ್ತಿದ್ದೀರೆಂದು ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರಲ್ಲದೆ ರೈತರ ಮನವೊಲಿಸಿ ಜಮೀನು ಪಡೆದು 50:50 ಅನುಪಾತದಲ್ಲಿ 250 ಎಕರೆ ಪ್ರದೇಶದಲ್ಲಿ ಬಡಾವಣೆ ಅಭಿವೃದ್ಧಿಗೊಳಿಸುವಂತೆ ಅಧ್ಯಕ್ಷರಿಗೆ ಸಲಹೆ ನೀಡಿದರು.

    ಕ್ರಮದ ಎಚ್ಚರಿಕೆ: ಕೋಲಾರದಲ್ಲಿ ಅಮೃತ್ ಸಿಟಿ ಯೋಜನೆಯಡಿ ಯುಜಿಡಿಗೆ ರಸ್ತೆ ಅಗೆದು ಸರಿಯಾಗಿ ಮುಚ್ಚದಿರುವ ಬಗ್ಗೆ ಸಂಸದ ಎಸ್.ಮುನಿಸ್ವಾಮಿ ಸಭೆ ಗಮನಕ್ಕೆ ತಂದಾಗ ಮುಂದೊಂದು ದಿನ ಮಾಹಿತಿ ನೀಡದೆ ಭೇಟಿ ನೀಡುವೆ, ಸಾರ್ವಜನಿಕರಿಂದ ದೂರು ವ್ಯಕ್ತವಾದಲ್ಲಿ ಕ್ರಮ ಜರುಗಿಸುವುದಾಗಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಇ ಶ್ರೀನಿವಾಸರೆಡ್ಡಿಗೆ ಎಚ್ಚರಿಕೆ ನೀಡಿದರು.
    ಕ್ರಿಮಿನಲ್ ಕೇಸ್: ಕೆಜಿಎಫ್‌ನಲ್ಲಿ 69 ಕೋಟಿ ರೂ. ವೆಚ್ಚದ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರನ್ನು ಕರೆದು ಮಾತನಾಡಿಸಿ, ಸ್ಪಂದಿಸದಿದ್ದಲ್ಲಿ ಎಫ್‌ಐಆರ್ ದಾಖಲಿಸಿ ಎಂದು ಅಧಿಕಾರಿಗೆ ಸೂಚಿಸಿದರು.

    ಮುಳಬಾಗಿಲಿನಲ್ಲಿ ನೀರು ಸರಬರಾಜಿಗೆ ಕೊರೆದಿರುವ 17 ಬೋರ್‌ವೆಲ್‌ಗೆ ಪಂಪು ಮೋಟಾರ್ ವ್ಯವಸ್ಥೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಬೇಡಿಕೆ ಇಟ್ಟಾಗ ತಕ್ಷಣ ವ್ಯವಸ್ಥೆ ಮಾಡುವಂತೆ ಅಧಿಕಾರಿಗೆ ತಾಕೀತು ಮಾಡಿದರು. ಶುದ್ಧ ನೀರು ಒದಗಿಸುವುದು ಸರ್ಕಾರದ ಕರ್ತವ್ಯ. ಸಿಆರ್‌ಎಫ್‌ನಡಿ ಹಣ ಬಿಡುಗಡೆಗೆ ಅನುಕೂಲವಾಗುವಂತೆ ಕಂದಾಯ ಸಚಿವರ ಜತೆ ಚರ್ಚಿಸಲಾಗುವುದು ಎಂದರು.

    ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಪ್ರಾಧಿಕಾರದಿಂದ ಹೊಸ ಬಡಾವಣೆ, ಸ್ವಾಗತ ಕಮಾನು, ಮೊದಲ ಹಂತದಲ್ಲಿ 6.45 ಕಿಮೀ ವರ್ತುಲ ರಸ್ತೆ ನಿರ್ಮಾಣಕ್ಕೆ ಉದ್ದೇಶಿಸಿದ್ದು ಮಂಜೂರು ಮಾಡಿಕೊಡುವಂತೆ ಮನವಿ ಮಾಡಿದರು. ಕೋಲಾರ ನಗರದಲ್ಲಿ ಅಮೃತ್ ಸಿಟಿ ಅಡಿ ಸ್ಥಾಪಿಸಿರುವ ಆರ್‌ಒ ಘಟಕಗಳಲ್ಲಿ ಕೆಲವು ಕಾರ್ಯನಿರ್ವಹಿಸದಿರುವ ಬಗ್ಗೆ ಕುಡಾ ಸದಸ್ಯ ಸತ್ಯನಾರಾಯಣರಾವ್ ದೂರಿದಾಗ ಟ್ಯಾಂಕರ್ ಮೂಲಕ ನೀರು ತುಂಬಿಸಿಕೊಂಡು ಶುದ್ಧೀಕರಿಸಿ ನೀಡಲು ಸೂಚಿಸಿದ್ದಾಗಿ ಡಿಸಿ ಸತ್ಯಭಾಮ ಹೇಳಿದರು.

    ಗುರಿ ಮೀರಿ ಸಾಧನೆ: ಜಿಲ್ಲೆಯಲ್ಲಿ 53 ಮಂದಿ ಕರೊನಾಗೆ ಮೃತಪಟ್ಟಿದ್ದಾರೆ. ಚೇತರಿಕೆ ಪ್ರಮಾಣ ಶೇ.72ರಷ್ಟಿದೆ. ಪ್ರತಿನಿತ್ಯ 600ಕ್ಕೂ ಹೆಚ್ಚು ಮಾದರಿ ಪರೀಕ್ಷಿಸುವ ಮೂಲಕ ಗುರಿ ಮೀರಿ ಸಾಧಿಸಲಾಗಿದೆ. ಕೋಲಾರ ನಗರದ ಅಲ್ಪಸಂಖ್ಯಾತರು ಅಧಿಕ ಇರುವ ವಾರ್ಡ್‌ಗಳಲ್ಲಿ ಪ್ರಕರಣ ಹೆಚ್ಚಿರುವುದರಿಂದ ಅಂಜುಮನ್ ಮುಖ್ಯಸ್ಥರು, ಸಮುದಾಯದ ಮುಖಂಡರ ಸಭೆ ಕರೆದು ಸೂಚಿಸಲಾಗಿದೆ. ಟ್ರ್ಯಾಕಿಂಗ್‌ನಲ್ಲಿ, ಕ್ವಾರಂಟೈನ್‌ನಲ್ಲಿ ಕೋಲಾರ ದ್ವಿತೀಯ ಸ್ಥಾನದಲ್ಲಿದೆ ಎಂದು ಡಿಸಿ ಸತ್ಯಭಾಮ ನುಡಿದಾಗ ಸಚಿವ ಬಸವರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.

    ವರ್ತುಲ ರಸ್ತೆ ನಿರ್ಮಾಣಕ್ಕೆ ಕ್ರಮ: ನಗರದ ಹೊರವಲಯದಲ್ಲಿ ವರ್ತುಲ ರಸ್ತೆ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಬಸವರಾಜ್ ಹೇಳಿದರು.
    ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ವರ್ತುಲ ರಸ್ತೆ ನಿರ್ಮಾಣಕ್ಕೆ ಸಂಸದರು, ವಿಧಾನ ಪರಿಷತ್ ಸದಸ್ಯರು ಮನವಿ ಸಲ್ಲಿಸಿದ್ದಾರೆ. ಪ್ರಸ್ತಾವನೆ ಸರ್ಕಾರಕ್ಕೂ ಸಲ್ಲಿಕೆಯಾಗಿದೆ. ಈ ಬಗ್ಗೆ ಸಿಎಂ ಜತೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. ರಸ್ತೆ ನಿರ್ಮಾಣದಿಂದ ನಗರದ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದರು.
    ಪ್ರಾಧಿಕಾರಗಳಿಂದ ರೈತರ ಜಮೀನು ಪಡೆದು ನಿರ್ಮಿಸುವ ಬಡಾವಣೆಗಳಲ್ಲಿ ಶೇ.50ರಷ್ಟು ಅವರಿಗೂ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಾಧಿಕಾರ ನಿರ್ಮಿಸುವ ಬಡಾವಣೆಗಳಲ್ಲಿ ಪತ್ರಕರ್ತರಿಗೆ ಶೇ.5 ಮೀಸಲಿಡಲು ಎಲ್ಲ ಪ್ರಾಧಿಕಾರಗಳ ಆಯುಕ್ತರಿಗೂ ಸೂಚಿಸಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಅನುಮೋದನೆ ನೀಡಲಾಗುವುದು ಎಂದರು.
    ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ನಗರಗಳು, 10 ಮಹಾನಗರ ಪಾಲಿಕೆಗಳು, 7 ಸ್ಮಾರ್ಟ್ ಸಿಟಿಗಳ ಕೆಲಸ ಕಾರ್ಯ ಪರಿಶೀಲಿಸುತ್ತಿದ್ದು, ಕರೊನಾ ನಡುವೆಯೂ ಅಭಿವೃದ್ಧಿ ಕೆಲಸ ವೇಗವಾಗಿ ನಡೆಯುತ್ತಿದೆ. ಕರೊನಾ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಮಾಸ್ಕ್, ಗ್ಲೌಸ್, ಸಮವಸ್ತ್ರ ನೀಡಿ ಪ್ರತಿದಿನ ಆರೋಗ್ಯ ತಪಾಸಣೆ ಮಾಡಲು ಸೂಚಿಸಲಾಗಿದೆ ಎಂದರು.

    ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಮಾತನಾಡಿ, ಕೆಸಿ ವ್ಯಾಲಿ ನೀರು ಅಮ್ಮೇರಹಳ್ಳಿ, ಕೋಲಾರಮ್ಮ ಕೆರೆಗೆ ಹರಿದಿದ್ದರೆ ನೀರಿನ ಸಮಸ್ಯೆ ಇರುತ್ತಿರಲಿಲ್ಲ. ಬೋರ್‌ವೆಲ್ ರೀಚಾರ್ಜ್ ಆಗುವಷ್ಟು ಮಳೆ ಬಂದಿಲ್ಲ, ಸಿಆರ್‌ಎಫ್ ಹಣವೂ ಸಿಗುತ್ತಿಲ್ಲ ಎಂದು ಸಚಿವರ ಗಮನಕ್ಕೆ ತಂದರು. ಜಿಪಂ ಉಪಾಧ್ಯಕ್ಷೆ ಯಶೋದಾ ಕೃಷ್ಣಮೂರ್ತಿ, ಎಸ್ಪಿ ಕಾರ್ತಿಕ್ ರೆಡ್ಡಿ, ಕುಡಾ ಸದಸ್ಯರಾದ ಅಪ್ಪಿ ನಾರಾಯಣಸ್ವಾಮಿ, ಮಮತಮ್ಮ, ಯೋಜನಾ ನಿರ್ದೇಶಕ ರಂಗಸ್ವಾಮಿ, ಕುಡಾ ಪ್ರಭಾರ ಆಯುಕ್ತ ಕೃಷ್ಣ ನಾಯಕ್, ಪಿಡಬ್ಲ್ಯುಡಿ ಎಇ ಚಂದ್ರಶೇಖರ್ ಇತರ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts