More

    ಆಕಾಂಕ್ಷಿಗಳಿಗೆ ಟಿಕೆಟ್ ಕೈ ತಪ್ಪುವ ಭೀತಿ

    ಧಾರವಾಡ: ಜಿಲ್ಲಾ ಪಂಚಾಯಿತಿ ಚುನಾವಣೆಗೆ ರಾಜ್ಯ ಚುನಾವಣೆ ಆಯೋಗ ಕರಡು ಮೀಸಲಾತಿ ಪ್ರಕಟಿಸಿದೆ. ಸಾಕಷ್ಟು ವಿಳಂಬದ ನಂತರ ಘೋಷಿಸಲಾಗಿರುವ ಮೀಸಲಾತಿ ಪ್ರಮುಖ ರಾಜಕೀಯ ಪಕ್ಷಗಳ ಮುುಖಂಡರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.ಕಳೆದ ಸದಸ್ಯರ ಆಡಳಿತ ಅವಧಿ ಮೇ 13ಕ್ಕೆ ಅಂತ್ಯಗೊಂಡಿದೆ. ರಾಜ್ಯಾದ್ಯಂತ ಕರೊನಾ ಹಾವಳಿ ಹಿನ್ನೆಲೆಯಲ್ಲಿ ಚುನಾವಣೆ ನಡೆಸದಿರಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಈ ಮಧ್ಯೆ ಕ್ಷೇತ್ರಗಳ ಮರುವಿಂಗಡಣೆ ನಡೆಸಿತ್ತು. ನಂತರ ಕೋವಿಡ್ 2ನೇ ಅಲೆ ಅಪ್ಪಳಿಸಿದ್ದರಿಂದ ಮೀಸಲಾತಿ ಘೋಷಣೆ ವಿಳಂಬವಾಗಿತ್ತು.
    ಕ್ಷೇತ್ರಗಳ ಮರುವಿಂಗಡಣೆ: ಜಿಲ್ಲೆಯಲ್ಲಿ 22 ಇದ್ದ ಸದಸ್ಯ ಬಲ, ಕ್ಷೇತ್ರ ವಿಂಗಡಣೆಯ ನಂತರ 27ಕ್ಕೆ ಏರಿಕೆಯಾಗಿದೆ. ಗ್ರಾ.ಪಂ.ವಾರು ಗ್ರಾಮಗಳನ್ನು ಜಿ.ಪಂ. ಕ್ಷೇತ್ರಗಳಿಗೆ ಸೇರಿಸಲಾಗಿದೆ. ಸ್ಥಾನಗಳ ಸಂಖ್ಯೆ ಹೆಚ್ಚಳವಾಗಿದ್ದರೂ ಹಳೇ ಮುಖಗಳು ಮೀಸಲಾತಿ ಬದಲಾವಣೆಯಿಂದ ಟಿಕೆಟ್ ಕಳೆದುಕೊಳ್ಳುವುದು ಖಚಿತ.
    ಮಾಜಿ ಅಧ್ಯಕ್ಷರಿಗೆ ಅನುಕೂಲ: ಕಳೆದ ಅವಧಿಯಲ್ಲಿ ಅಧ್ಯಕ್ಷ ಪಟ್ಟ ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಮೊದಲ ಅವಧಿಗೆ ಬಿಜೆಪಿಯ ಚೈತ್ರಾ ಶಿರೂರ ಅಧ್ಯಕ್ಷೆಯಾಗಿದ್ದರು. ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾದ ನಂತರ ಅಧಿಕಾರ ಹಿಡಿದ ಕಾಂಗ್ರೆಸ್ ಪರ ವಿಜಯಲಕ್ಷ್ಮೀ ಪಾಟೀಲ ಅಧ್ಯಕ್ಷೆಯಾಗಿದ್ದರು. ಪ್ರಸಕ್ತ ಅವಧಿಯಲ್ಲಿ ಚೈತ್ರಾ ಶಿರೂರ ಅವರ ಕೋಳಿವಾಡ ಕ್ಷೇತ್ರ ಹಾಗೂ ವಿಜಯಲಕ್ಷ್ಮೀ ಪಾಟೀಲ ಪ್ರತಿನಿಧಿಸಿದ್ದ ಮೊರಬ ಕ್ಷೇತ್ರಕ್ಕೆ ಸಾಮಾನ್ಯ ಮೀಸಲಾತಿ ಬಂದಿದೆ. ಮೀಸಲಾತಿ ಬದಲಾಗದಿರುವುದರಿಂದ ಇಬ್ಬರೂ ಮತ್ತೊಮ್ಮೆ ಸ್ಪರ್ಧಿಸುವ ಸಾಧ್ಯತೆ ಇದೆ.
    ಮಹಿಳೆಯರಿಗೆ ಪ್ರಾತಿನಿಧ್ಯ: 27 ಸದಸ್ಯ ಬಲದ ಜಿ.ಪಂ.ನಲ್ಲಿ 13 ಸ್ಥಾನಗಳು ಪುರುಷರಿಗೆ ಹಾಗೂ 14 ಸ್ಥಾನಗಳು ಮಹಿಳೆಯರಿಗೆ ಮೀಸಲಿವೆ. ಗರಗ, ಕೋಳಿವಾಡ, ಮೊರಬ, ಗುಡಗೇರಿ, ಹೊನ್ನಾಪುರ, ಶಲವಡಿ, ನಲವಡಿ ಕ್ಷೇತ್ರಗಳು ಸಾಮಾನ್ಯ ಮೀಸಲಾತಿ ಇದ್ದು, ಮಹಿಳೆಯರು ಸ್ಪರ್ಧಿಸಿ ಗೆದ್ದರೆ ಅವರ ಬಲ 14ಕ್ಕಿಂತ ಹೆಚ್ಚಳವಾಗುವ ಸಾಧ್ಯತೆ ಇದೆ.
    ಮಾಜಿ ಉಪಾಧ್ಯಕ್ಷ ಕ್ಷೇತ್ರ ಬದಲು?: ಬಿಜೆಪಿ ಹಾಗೂ ಕಾಂಗ್ರೆಸ್ ಅಧಿಕಾರವಧಿಯಲ್ಲಿ ಮೀಸಲಾತಿಯ ಲಾಭ ಗಿಟ್ಟಿಸಿಕೊಂಡಿದ್ದ ಶಿವಾನಂದ ಕರಿಗಾರ ಐದೂ ವರ್ಷ ಉಪಾಧ್ಯಕ್ಷರಾಗಿದ್ದರು. ಬ್ಯಾಹಟ್ಟಿಯಿಂದ ಪ್ರತಿನಿಧಿಸಿದ್ದ ಅವರ ಕ್ಷೇತ್ರದಲ್ಲಿ ಈ ಬಾರಿ ಹಿಂದುಳಿದ ವರ್ಗ ಬ ಮಹಿಳೆ ಮೀಸಲಾತಿ ಬಂದಿದೆ. ಹಳೇ ಕ್ಷೇತ್ರದಲ್ಲಿ ಟಿಕೆಟ್ ತಪ್ಪಿದ್ದರಿಂದ ಅವರು ಈ ಬಾರಿ ಸಾಮಾನ್ಯ ಮೀಸಲಾತಿ ಇರುವ ಕೋಳಿವಾಡದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.
    ಸಿಗುತ್ತಿಲ್ಲ ಪೂರಕ ದಾಖಲೆ: 1993ರವರೆಗೆ ಅಸ್ತಿತ್ವದಲ್ಲಿದ್ದ ಜಿಲ್ಲಾ ಪರಿಷತ್ 1995ರಿಂದ ಜಿ.ಪಂ. ಆಗಿ ಪರಿವರ್ತನೆಗೊಂಡಿದೆ. ಮೀಸಲಾತಿಗೆ ಆಕ್ಷೇಪಣೆ ಸಲ್ಲಿಸುವವರು ಹಿಂದಿನ 6 ಅವಧಿಗಳ ಮೀಸಲಾತಿ ವಿವರ ಪಡೆಯಬೇಕು. ಹಿಂದಿನ ಅವಧಿಗಳ ಕರ್ನಾಟಕ ರಾಜ್ಯಪತ್ರ ಸಿಗುವುದು ಜಿಲ್ಲಾಧಿಕಾರಿ ಕಚೇರಿಯ ಚುನಾವಣೆ ಶಾಖೆಯಲ್ಲಿ. ಆಕ್ಷೇಪಣೆದಾರರು ರಾಜ್ಯ ಚುನಾವಣೆ ಆಯೋಗದ ಕಚೇರಿಗೆ ಪೂರಕ ದಾಖಲೆಗಳೊಂದಿಗೆ ಜು. 8ರವರೆಗೆ ಆಕ್ಷೇಪಣೆ ಸಲ್ಲಿಸಬಹುದು. ಆದರೆ, ಜಿಲ್ಲಾಧಿಕಾರಿ ಕಚೇರಿಯ ಚುನಾವಣೆ ಶಾಖೆಯಲ್ಲಿ ಹಿಂದಿನ ಅವಧಿಗಳ ರಾಜ್ಯಪತ್ರ ಲಭ್ಯವಿಲ್ಲ. ಹಿಂದಿನ ಅವಧಿಗಳ ಮೀಸಲಾತಿಯ ದಾಖಲೆ ಕೋರಿ ಹಲವರು ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡುತ್ತಿದ್ದಾರೆ.
    ಆಕ್ಷೇಪಣೆಗಿದೆ ಅವಕಾಶ: ಸದ್ಯ ಪ್ರಕಟವಾಗಿರುವ ಮೀಸಲಾತಿಯ ಕರಡು ಅಧಿಸೂಚನೆಗೆ ಜಿಲ್ಲೆಯ ಕೆಲ ಕ್ಷೇತ್ರಗಳಲ್ಲಿ ಅಪಸ್ವರ ಕೇಳಿಬಂದಿದೆ. ಆಯಾ ಶಾಸಕರು ತಮಗೆ ಬೇಕಾದವರಿಗೆ ಬೇಕಾದ ಮೀಸಲಾತಿ ಕೊಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕರಡು ಅಧಿಸೂಚನೆ ಪ್ರಕಟವಾದಂದಿನಿಂದ 8 ದಿನಗಳವರೆಗೆ ಮೀಸಲಾತಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶವಿದೆ. ಪೂರಕ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಕೆಯಾದಲ್ಲಿ ಕೆಲ ಕ್ಷೇತ್ರಗಳ ಮೀಸಲಾತಿ ಬದಲಾವಣೆಯಾಗುವ ಸಾಧ್ಯತೆ ಇದೆ.

    ಹಿಂದಿನ ವಿಧಾನಸಭೆ, ಲೋಕಸಭೆಯ ವಿವರ ಕೇಂದ್ರ ಚುನಾವಣೆ ಆಯೋಗದ ವೆಬ್​ಸೈಟ್​ನಲ್ಲಿ ಲಭ್ಯವಿದೆ. ಆದರೆ, ಜಿ.ಪಂ., ತಾ.ಪಂ. ಚುನಾವಣೆಯು ರಾಜ್ಯ ಚುನಾವಣೆ ಆಯೋಗದ ಸುಪರ್ದಿಯಲ್ಲಿ ನಡೆಯುತ್ತದೆ. ಈಗ ಆಕ್ಷೇಪಣೆ ಸಲ್ಲಿಸಲು ಆಯಾ ಜಿಲ್ಲಾಧಿಕಾರಿ ಕಚೇರಿಯಿಂದ ಹಿಂದಿನ ಅವಧಿಗಳ ದಾಖಲೆ ಪಡೆಯಬೇಕು. ಆದರೆ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಿಂದಿನ ಅವಧಿಗಳ ರಾಜ್ಯಪತ್ರ ಲಭ್ಯವಿಲ್ಲ ಎನ್ನುತ್ತಿದ್ದಾರೆ.
    | ಹೆಸರು ಹೇಳಲು ಇಚ್ಛಿಸದ ಆಕ್ಷೇಪಣೆದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts