More

    ಅರ್ಧ ಬಾಗಿಲು ತೆರೆದು ಕಾರ್ಯ ನಿರ್ವಹಣೆ!

    ಹುಬ್ಬಳ್ಳಿ: ಕರೊನಾ ಭೀತಿಯ ಹಿನ್ನೆಲೆಯಲ್ಲಿ ಸ್ಟೇಶನ್ ರಸ್ತೆಯಲ್ಲಿರುವ ಪ್ರಧಾನ ಅಂಚೆ ಕಚೇರಿಯು ಅರ್ಧ ಬಾಗಿಲು ತೆರೆದು ಕಾರ್ಯನಿರ್ವಹಣೆ ಮಾಡುತ್ತಿದೆ. ಈ ಅರ್ಧ ಬಾಗಿಲಲ್ಲೇ ಸಾರ್ವಜನಿಕರು ‘ಇನ್ ಆಂಡ್ ಔಟ್’ ಆಗಬೇಕಿರುವುದು ಆತಂಕಕ್ಕೆ ಕಾರಣವಾಗಿದೆ.

    ಇದು ಪ್ರಧಾನ ಅಂಚೆ ಕಚೇರಿ ಆಗಿರುವುದರಿಂದ ಸಾರ್ವಜನಿಕರ ದಟ್ಟಣೆ ಸದಾ ಇರುತ್ತದೆ. ಲಾಕ್​ಡೌನ್ ಪೂರ್ಣ ಪ್ರಮಾಣದಲ್ಲಿ ಜಾರಿಯಲ್ಲಿದ್ದಾಗ ಜನದಟ್ಟಣೆ ಇರಲಿಲ್ಲ. ಇದೀಗ ಲಾಕ್​ಡೌನ್ ಸಡಿಲಿಕೆ ನಂತರ ಸಾರ್ವಜನಿಕರ ಓಡಾಟಕ್ಕೆ ಮುಕ್ತ ಅವಕಾಶವಿರುವುದರಿಂದ ಕಚೇರಿಯಲ್ಲಿ ಎಂದಿನಂತೆ ಜನದಟ್ಟಣೆ ಹೆಚ್ಚಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ತಮ್ಮ ಕೆಲಸಗಳಿಗೆ 40-50 ಜನರು ಸರತಿ ಸಾಲಿನಲ್ಲಿ ನಿಂತಿರುತ್ತಾರೆ.

    ಪ್ರಧಾನ ಅಂಚೆ ಕಚೇರಿಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಇರುವುದು ಒಂದೇ ಬಾಗಿಲು. ಅದು ಸುಮಾರು 3 ಅಡಿ ಅಗಲದ ಕಟ್ಟಿಗೆ ಬಾಗಿಲು. ಕರೊನಾ ಭೀತಿಯಲ್ಲಿ ಹಿನ್ನೆಲೆಯಲ್ಲಿ ಇದೀಗ ಅರ್ಧ ಬಾಗಿಲು ಮುಚ್ಚಲಾಗುತ್ತಿದೆ. ಇಲ್ಲಿ ಮೊದಲಿನಿಂದಲೇ ಟೋಕನ್ ವ್ಯವಸ್ಥೆ ಇದೆ. ಸಾರ್ವಜನಿಕರು ಮೊದಲು ಟೋಕನ್ ಪಡೆಯಲು ಅಂಚೆ ಕಚೇರಿಯ ಬಾಗಿಲ ಬಳಿ ನಿಂತು ಕೇಳಬೇಕು. ಅಲ್ಲಿಯ ಸಿಬ್ಬಂದಿ ಟೋಕನ್ ನೀಡುತ್ತಾರೆ. ಬಳಿಕ ಕಚೇರಿ ಹೊರಗೆ ಸರದಿ ಸಾಲಿನಲ್ಲಿ ನಿಲ್ಲಬೇಕು.

    ಟೋಕನ್ ಪಡೆಯುವುದು, ಬಳಿಕ ತಮ್ಮ ಸರದಿ ಬಂದಾಗ ಕಚೇರಿ ಒಳಗೆ ಹೋಗುವುದು, ಕೆಲಸ ಮುಗಿದ ಬಳಿಕ ಹೊರಗೆ ಬರುವುದು, ಇವೆಲ್ಲವೂ ಅರ್ಧ ಬಾಗಿಲ ಮೂಲಕವೇ ನಡೆಯುತ್ತದೆ. ಬಾಗಿಲ ಬಳಿಕ ಸದಾ ಜನಜಂಗುಳಿ ಇರುತ್ತದೆ. ಪರಸ್ಪರ ಅಂತರದ ಮಾತೇ ಇಲ್ಲ. ಅಂಚೆ ಚೀಟಿ ಖರೀದಿಸಲು ಟೋಕನ್ ಪಡೆಯಬೇಕೇ? ಪೋಸ್ಟ್ ಮಾಡಲು ಸಹ ಸರತಿ ಸಾಲಿನಲ್ಲಿ ನಿಲ್ಲಬೇಕೇ? ಇತ್ಯಾದಿ ಸಂದೇಹಗಳ ವಿಚಾರಣೆ ನಡೆಸಲು ಸಾರ್ವಜನಿಕರು ಬಾಗಿಲ ಬಳಿ ಮುತ್ತಿಗೆ ಹಾಕಿಕೊಂಡಿರುತ್ತಾರೆ. ಇದಕ್ಕೆ ಕಾರಣ, ಒಂದೇ ಪ್ರವೇಶ ದ್ವಾರ. ಅದು ಸಹ ಅರ್ಧ ಬಾಗಿಲು!

    ಕಚೇರಿ ಹೊರಗಡೆ ಎಲ್ಲಿಯೂ ಸಹ ಸಾರ್ವಜನಿಕರಿಗಾಗಿ ಲಿಖಿತ ಮಾಹಿತಿ ಪ್ರಕಟಿಸಿಲ್ಲ. ಅಂಗವಿಕಲರು, ವಯಸ್ಸಾದವರಿಗೆ ಪ್ರತ್ಯೇಕ ವ್ಯವಸ್ಥೆ ಇಲ್ಲ. ಮೇಲಾಗಿ ಇದು ಕೇಂದ್ರ ಸರ್ಕಾರದ ಇಲಾಖೆ. ಪ್ರತಿಯೊಂದು ವ್ಯವಹಾರದ ಬಳಿಕ ಇಲ್ಲಿಯ ಸಿಬ್ಬಂದಿ ಕೈಗೆ ಸ್ಯಾನಿಟೈಸರ್ ಉಜ್ಜಿಕೊಳ್ಳುತ್ತಾರೆ. ಕಚೇರಿಯಲ್ಲಿ ಜನರಿಂದ ಅಂತರ ಕಾಯ್ದುಕೊಂಡು ವ್ಯವಹರಿಸುತ್ತಾರೆ. ಇದೆಲ್ಲ ಸರಿ, ಕರೊನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರದ ಇಲಾಖೆಯೊಂದು ಇನ್ನಷ್ಟು ವ್ಯವಸ್ಥಿತ ಕ್ರಮ ಜರುಗಿಸಬೇಕಿದೆ.

    ಇಲ್ಲಿಯ ಕಾರ್ಯ ನಿರ್ವಹಣೆ ಸಹ ನಿಧಾನಗತಿ. ಇಂದು ಹಣ ತುಂಬಿದರೆ ಎನ್​ಎಸ್​ಸಿ ಪಾಸ್​ಬುಕ್ ಪಡೆಯಲು 2 ದಿನ ಬಿಟ್ಟು ಬರಬೇಕು. ಆರ್​ಡಿ ಇದ್ದರೆ ಪಾಸ್​ಬುಕ್​ನಲ್ಲಿ ಎಂಟ್ರಿ ಮಾಡಲು ಒಂದು ದಿನ ಬಿಟ್ಟು ಬರಬೇಕು. ಹೆಸರಿಗೆ ಇದು ಪ್ರಧಾನ ಅಂಚೆ ಕಚೇರಿ. ಸಿಬ್ಬಂದಿ ಕೊರತೆ ಕಾರಣ ಇರಬಹುದು.

    ಪ್ರಧಾನ ಅಂಚೆ ಕಚೇರಿಯವರು ತಮ್ಮ ಸಿಬ್ಬಂದಿ ಬಗ್ಗೆ ಕಾಳಜಿ ತೆಗೆದುಕೊಂಡಿದ್ದಾರೆ. ಕಚೇರಿಗೆ ಬರುವ ಸಾರ್ವಜನಿಕರಲ್ಲಿ ವಯಸ್ಸಾದವರು ಇರುತ್ತಾರೆ. ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಹೊರಗೆ ನಿಲ್ಲುವುದು ಕಷ್ಟಕರ.

    |ಸೂರ್ಯಕಾಂತ ಪಾಟೀಲ, ನಾಗರಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts