More

    ಅರ್ಜಿಗಳ ನಿರ್ವಹಣೆಗೆ ವೆಬ್​ಸೈಟ್

    ಕಾರವಾರ: ಜಿಲ್ಲೆಯಲ್ಲಿ ದಶಕಗಳಿಂದ ಬಾಕಿ ಇರುವ ಅತಿಕ್ರಮಣ ಅರ್ಜಿಗಳ ನಿರ್ವಹಣೆಗೆ ವೆಬ್​ಸೈಟ್ ರಚಿಸಲು ಜಿಲ್ಲಾಡಳಿತ ಮುಂದಾಗಿದೆ. ಇದರಿಂದ ಮುಂದಿನ ದಿನದಲ್ಲಿ ಅತಿಕ್ರಮಣ- ಸಕ್ರಮ ಅರ್ಜಿಗಳನ್ನು ಸುಲಭವಾಗಿ ವಿಲೇವಾರಿ ಮಾಡಲು ಅನುಕೂಲವಾಗುವ ನಿರೀಕ್ಷೆ ಇದೆ.

    ಜಿಲ್ಲೆಯ ಅರಣ್ಯ ಸಕ್ರಮಾತಿ ಗೊಂದಲ ಇಂದು ನಿನ್ನೆಯದಲ್ಲ. 50 ವರ್ಷಗಳ ಹಿಂದೆಯೇ ಅರಣ್ಯ ಅತಿಕ್ರಮಣ ಮಾಡಿಕೊಂಡ ಕೆಲವರ ಜಮೀನುಗಳು ಅಧಿಕಾರಿಗಳ ಬೇಜವಾಬ್ದಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಾರಣದಿಂದ ಇದುವರೆಗೂ ಸಕ್ರಮಾತಿಯಾಗಿಲ್ಲ. ವಿವಿಧ ಹಂತಗಳಲ್ಲಿ ಜನ ಸಲ್ಲಿಸಿದ ಅರ್ಜಿಗಳು ಅರಣ್ಯ, ಕಂದಾಯ ಹೀಗೆ ವಿವಿಧ ಇಲಾಖೆಗಳ ಕಚೇರಿಯಲ್ಲಿ ಕೊಳೆಯುತ್ತಿವೆ. ಕಚೇರಿಗೆ ಓಡಾಡಿ, ಕಡತಗಳ ಹಿಂದೆ ಬಿದ್ದು, ಹಣ ಖರ್ಚು ಮಾಡುವ ಕೆಲವರ ಜಮೀನುಗಳು ಮಾತ್ರ ಅವರವರ ಹೆಸರಿಗಾಗಿವೆ.

    ಪ್ರಭಾವ ಇಲ್ಲದ ಸಮಾನ್ಯ ಅತಿಕ್ರಮಣದಾರರು ಅರ್ಜಿ ಹಿಡಿದು ಕಚೇರಿಗಳಿಗೆ ಅಲೆದಾಡುತ್ತಿರುವುದೂ ಹೊಸದಲ್ಲ. ಅತಿಕ್ರಮಣ ಸಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಭಿನ್ನ, ವಿಭಿನ್ನ ಸಮಸ್ಯೆಗಳಿವೆ. ಜಿಲ್ಲೆಗೆ ಆಗಮಿಸುವ ಹಿರಿಯ ಅಧಿಕಾರಿಗಳಿಗೆ ಇವುಗಳನ್ನು ಅರಿಯುವುದು ಹಾಗೂ ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಬೇಕಾದಾಗ ಮಾಹಿತಿ ನೀಡುವುದೇ ದೊಡ್ಡ ಸವಾಲು. ಹಲವು ಬಾರಿ ದಾಖಲೆಗಳ ಸಂಗ್ರಹಕ್ಕಾಗಿ ಪತ್ರ ಬರೆಯುವುದರಲ್ಲೇ ಒಬ್ಬ ಅಧಿಕಾರಿಯ ಕಾರ್ಯಾವಧಿ ಮುಕ್ತಾಯವಾಗುತ್ತದೆ. ಇದರಿಂದ ಅತಿಕ್ರಮಣ ಸಕ್ರಮಾತಿಗೆ ಸಂಬಂಧಿಸಿದಂತೆ ಸಲ್ಲಿಕೆಯಾದ ಅರ್ಜಿಗಳನ್ನೆಲ್ಲ ಒಂದೇ ಕಡೆ ಜೋಡಿಸಿ ವೈಬ್​ಸೈಟ್​ನಲ್ಲಿ ಸಂರಕ್ಷಿಸಿಡಲು ಸಿದ್ಧತೆ ನಡೆಸಲಾಗಿದೆ.

    ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾದ ಅರ್ಜಿಗಳ ಮಾಹಿತಿಗಾಗಿ ಈಗಾಗಲೇ ಪ್ರತ್ಯೇಕ ತಂತ್ರಾಂಶದಲ್ಲಿ ಲಭ್ಯವಿದೆ. ಈಗ 1978 ರ ಪೂರ್ವದ ಅರಣ್ಯ ಅತಿಕ್ರಮಣ ಸಕ್ರಮಾತಿ ಅರ್ಜಿಗಳು ಹಾಗೂ ಹಂಗಾಮಿ ಮತ್ತು ಕಾಯಂ ಲಾಗಣಿಯ ಅರ್ಜಿಗಳ ಬಗ್ಗೆ ಪ್ರತ್ಯೇಕ ತಂತ್ರಾಂಶವನ್ನು ಎನ್​ಐಸಿ ಅಭಿವೃದ್ಧಿ ಮಾಡುತ್ತಿದೆ. ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಅದಕ್ಕೆ ಬೇಕಾದ ಡೇಟಾ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದಾರೆ.

    ಜನರಿಗೆ ಪ್ರಯೋಜನವೇನು?
    ವಿಭಿನ್ನ ಸಮಸ್ಯೆಗಳ ಅತಿಕ್ರಮಣ ಅರ್ಜಿಗಳು ಬಾಕಿ ಇವೆ. ಅವುಗಳ ಸರ್ವೆ ಕಾರ್ಯ ಈಗಾಗಲೇ ಆಗಿದೆ. ಈಗ ಇರುವುದು ಕಡತಗಳ ವಿಲೇವಾರಿ ಮಾತ್ರ. ಅತಿಕ್ರಮಣ ಅರ್ಜಿ, ಜಮೀನಿನ ವ್ಯಾಪ್ತಿ ಮುಂತಾದವುಗಳ ಬಗ್ಗೆ ಜಿಲ್ಲಾಡಳಿತಕ್ಕೆ ಸಮಗ್ರವಾಗಿ ಸ್ಪಷ್ಟ ಚಿತ್ರಣ ಸಿಕ್ಕರೆ ಸರ್ಕಾರದ ಹಂತದಲ್ಲಿ ರ್ಚಚಿಸಿ ಅದಕ್ಕೆ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳಲು ಅನುಕೂಲವಾಗಲಿದೆ ಎಂಬ ನಿಟ್ಟಿನಲ್ಲಿ ಈ ತಂತ್ರಾಂಶ ಅಭಿವೃದ್ಧಿ ಮಾಡಲಾಗುತ್ತಿದೆ ಎನ್ನುತ್ತಾರೆ ನಿರ್ಗಮಿತ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ.

    ಯಾವ್ಯಾವ ಅರ್ಜಿಗಳು?
    1978 ರ ಪೂರ್ವದ ಅತಿಕ್ರಮಣ ಸಕ್ರಮಾತಿ ಸಂಬಂಧ 2400 ಕ್ಕೂ ಅಧಿಕ ಅರ್ಜಿಗಳು.
    1972 ರ ಪೂರ್ವದ ಹಂಗಾಮಿ ಲಾಗಣಿಗಳನ್ನು ಕಾಯಂ ಲಾಗಣಿಗಳನ್ನಾಗಿ ಪರಿವರ್ತಿಸಿದ ಅರ್ಜಿಗಳು.
    ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾದ 80 ಸಾವಿರಕ್ಕೂ ಅಧಿಕ ಅರ್ಜಿಗಳ ನೋಂದಣಿ ಕಾರ್ಯವನ್ನು ಈಗಾಗಲೇ ಮಾಡಲಾಗಿದೆ.

    ಜಿಲ್ಲಾಡಳಿತದ ಸೂಚನೆಯಂತೆ ವೆಬ್​ಸೈಟ್​ಗಾಗಿ ಡೇಟಾ ಸಂಗ್ರಹಿಸುವ ಕಾರ್ಯ ನಡೆದಿದೆ. ಕೆಲವೇ ದಿನದಲ್ಲಿ ಅವುಗಳನ್ನು ಅಪ್​ಲೋಡ್ ಮಾಡಲಾಗುವುದು.
    | ವಸಂತ ರೆಡ್ಡಿ ಡಿಎಫ್​ಒ, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts