More

    ಅನ್ನದಾತರು ಧೃತಿಗೆಡಬಾರದು

    ಅಣ್ಣಿಗೇರಿ: ರೈತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು. ಬೆಂಬಲ ಬೆಲೆಯ ಹತ್ತಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ಜಗತ್ತನ್ನು ಕರೊನಾ ಕಾಡಿದೆ. ಅದು ರೈತರಿಗೆ ತೊಂದರೆ ಮಾಡಿದೆಯೋ, ಬಿಟ್ಟಿದೆಯೋ ಬೇರೆ ಮಾತು. ಆದರೆ, ರೈತರು ತಮ್ಮ ಬೆಳೆಗಳನ್ನು ದಲ್ಲಾಳಿಗಳಿಗೆ ಹಾಕದೆ ನೇರವಾಗಿ ಸರ್ಕಾರಕ್ಕೆ ಕೊಡುತ್ತಿರುವುದು ಸಂತೋಷದ ವಿಷಯ ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

    ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಭಾರತೀಯ ಹತ್ತಿ ನಿಗಮ (ಸಿಸಿಐ) ಆರಂಭಿಸಿದ ಬೆಂಬಲ ಬೆಲೆಯ ಹತ್ತಿ ಖರೀದಿ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಈ ವರ್ಷ ಇಳುವರಿ ಕಡಿಮೆ ಬರಬಹುದು. ಈ ಬಾರಿ ಅಣ್ಣಿಗೇರಿ ಎಪಿಎಂಸಿಯಲ್ಲಿ ಸಿಸಿಐನಿಂದ ಹತ್ತಿ ಖರೀದಿಯಲ್ಲಿ ಅಂದಾಜು 2 ಕೋಟಿ ರೂ.ಗಳಷ್ಟು ವಹಿವಾಟು ಆಗಬಹುದು. ಎಪಿಎಂಸಿ ಪ್ರಾಂಗಣದಲ್ಲಿ ರೈತರು ಹತ್ತಿ ಮಾರಾಟಕ್ಕಾಗಿ ಕಾಯುವುದು, ಮಲಗುವುದು ಬೇಡ. ಸಿಸಿಐ (ಕಾಟನ್ ಕಾಪೋರೇಷನ್ ಆಫ್ ಇಂಡಿಯಾ) ಅಧಿಕಾರಿಗಳ ಜತೆ ಸಭೆ ನಡೆಸಿ, ನೋಂದಣಿ ಪ್ರಕ್ರಿಯೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುತ್ತೇನೆ. ಯಾವುದೇ ಕಾರಣಕ್ಕೂ ರೈತರು ತಾವು ತಂದ ಫಸಲನ್ನು ಕಡಿಮೆ ಬೆಲೆಗೆ ಮಾರಿ ಮನನೊಂದು ಎಪಿಎಂಸಿ ಆವರಣದಿಂದ ಹೊರಗಡೆ ಹೋಗಬಾರದು ಎಂದು ಹೇಳಿದರು.

    ಹತ್ತಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ನಿತೀಶ ಪಾಟೀಲ, ಖರೀದಿ ಕೇಂದ್ರದಿಂದ ರೈತರಿಗೆ ಬಹಳ ಉಪಯೋಗವಾಗಿದೆ. ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಒತ್ತಾಯದಿಂದ ಈ ಖರೀದಿ ಕೇಂದ್ರವನ್ನು ತ್ವರಿತವಾಗಿ ಆರಂಭಿಸಲಾಗಿದೆ. ಧಾರವಾಡ ಜಿಲ್ಲೆಗೆ ಮೊದಲ ಹಂತದಲ್ಲಿ 54 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ 48 ಕೋಟಿ ರೂ. ಬೆಳೆ ಪರಿಹಾರ ರೈತರ ಖಾತೆಗೆ ನೇರವಾಗಿ ಜಮೆಯಾಗುತ್ತದೆ. ಇನ್ನುಳಿದ 6 ಕೋಟಿ ರೂ. ಮಳೆಯಿಂದ ಮನೆ ಬಿದ್ದ ಕುಟುಂಬಗಳಿಗೆ ನೀಡಲಾಗುವುದು ಎಂದು ತಿಳಿಸಿದರು.

    ನವಲಗುಂದ ತಹಸೀಲ್ದಾರ್ ನವೀನ ಹುಲ್ಲೂರ, ಅಣ್ಣಿಗೇರಿ ತಹಸೀಲ್ದಾರ್ ಕೊಟ್ರೇಶ ಗಾಳಿ, ಭೋಣಪ್ಪ ಫಕೀರಪ್ಪ ತಳವಾರ, ಷಣ್ಮುಖ ಗುರಿಕಾರ, ಈರಣ್ಣ ಗುರಿಕಾರ, ನಿಂಗಪ್ಪ ಬಡ್ಡೆಪ್ಪನವರ, ಚಂಬಣ್ಣ ಆಲೂರ, ಈಶಪ್ಪ ಹೊಂಬಳ, ಮಲ್ಲಿಕಾರ್ಜುನ ಹಕ್ಕರಿಕಿ, ಶಿವಯೋಗಿ ಸುರಕೋಡ, ಸಿಸಿಐ ಅಧಿಕಾರಿ ರವಿ ನಾಯಕ, ಅಣ್ಣಿಗೇರಿ ಪಿಎಸ್​ಐ ಎಲ್.ಕೆ. ಜೂಲಿಕಟ್ಟಿ, ಪೊಲೀಸ್ ಸಿಬ್ಬಂದಿ, ಎಪಿಎಂಸಿ ಸದಸ್ಯರು, ಅಣ್ಣಿಗೇರಿ ಹಾಗೂ ಸುತ್ತಲಿನ ಹಳ್ಳಿಗಳ ರೈತರು ಇದ್ದರು.

    ಸಾಂಕೇತಿಕವಾಗಿ 25 ರೈತರಿಂದ ಖರೀದಿ

    ಅಣ್ಣಿಗೇರಿ ಎಪಿಎಂಸಿಯಲ್ಲಿ ಭಾರತೀಯ ಹತ್ತಿ ನಿಗಮದಿಂದ ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿ ಕೇಂದ್ರ ಸೋಮವಾರ ಆರಂಭಗೊಂಡಿತು. ಮೊದಲ ದಿನವೇ ರೈತರು 25 ಟ್ರ್ಯಾಕ್ಟರ್​ಗಳಲ್ಲಿ ತಂದಿದ್ದ ಹತ್ತಿಯನ್ನು ಪ್ರತಿ ಕ್ವಿಂಟಾಲ್​ಗೆ 5725 ರೂ.ನಂತೆ ಸಾಂಕೇತಿಕವಾಗಿ ಖರೀದಿಸಲಾಯಿತು. ಇನ್ಮುಂದೆ ಹತ್ತಿ ಖರೀದಿ ಬಗ್ಗೆ ಎಪಿಎಂಸಿ ಆಡಳಿತ ಮಂಡಳಿಯೊಂದಿಗೆ ರ್ಚಚಿಸಿ ಇನ್ನೆರಡು ದಿನಗಳಲ್ಲಿ ಪ್ರಕಟಣೆ ಹೊರಡಿಸುತ್ತೇವೆ. ಆ ನಂತರ ರೈತರು ಹತ್ತಿ ತರಬೇಕು ಎಂದು ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಕೆ. ಸಜ್ಜನ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts