More

    ಅನಾನಸ್​ಗೆ ತಗ್ಗಿದ ಬೇಡಿಕೆ

    ಶಿರಸಿ: ಪ್ರಮುಖ ಮಾರುಕಟ್ಟೆಗಳಲ್ಲಿ ಅನಾನಸ್​ಗೆ (ಪೈನಾಪಲ್) ಬೇಡಿಕೆ ತಗ್ಗಿದ ಕಾರಣ ಬೆಲೆ ಕುಸಿತವಾಗಿದೆ. ಇದರಿಂದಾಗಿ ಜಿಲ್ಲೆಯ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಟಾವಿಗೆ ಬಂದ ಲಕ್ಷಾಂತರ ರೂಪಾಯಿ ಮೌಲ್ಯದ ಅನಾನಸ್ ಬೆಳೆ ಹೊಲದಲ್ಲಿಯೇ ಕೊಳೆಯುವ ಸ್ಥಿತಿ ಎದುರಾಗಿದೆ.

    ಜಿಲ್ಲೆಯಲ್ಲಿ 225 ಹೆಕ್ಟೇರ್​ಗೂ ಹೆಚ್ಚಿನ ಪ್ರದೇಶದಲ್ಲಿ ಅನಾನಸ್ ಕೃಷಿ ಮಾಡಲಾಗಿದೆ. ಜನವರಿಯಿಂದ ಆರಂಭವಾಗಿರುವ ಅನಾನಸ್ ಕೊಯ್ಲು ಜೂನ್​ವರೆಗೂ ನಡೆಯುತ್ತದೆ. ದಿನಕ್ಕೆ ಸರಾಸರಿ 100 ಟನ್ ಹಣ್ಣು ಕೊಯ್ಲಿಗೆ ಬರುತ್ತದೆ. ಅನಾನಸ್​ಗೆ ಮುಖ್ಯ ಮಾರುಕಟ್ಟೆಯಾಗಿದ್ದ ದೆಹಲಿ, ಪಂಜಾಬ್. ಇಲ್ಲಿ ಬೇಡಿಕೆ ಗಣನೀಯವಾಗಿ ತಗ್ಗಿರುವ ಕಾರಣ ಬೆಲೆಯಲ್ಲಿ ಏಕಾಏಕಿ ಶೇ. 50ರಷ್ಟು ಕುಸಿತವಾಗಿದೆ. ಕೆಜಿಗೆ 16 ರಿಂದ 20 ರೂಪಾಯಿವರೆಗಿದ್ದ ದರ 8 ರಿಂದ 10 ರೂ.ಗೆ ಕುಸಿದಿದೆ.

    ಒಂದಂಕಿಗೆ ಕುಸಿದ ದರ: ಒಣಭೂಮಿ ಸಾಗುವಳಿ ಹಾಗೂ ಮಡಿ ಮಾಡಿ ಅನಾನಸ್ ಸಸಿ ನೆಡಲು ಹಾಗೂ ಗೊಬ್ಬರ- ಔಷಧ ಸಿಂಪಡಿಸಲು ರೈತರು ಎಕರೆಯೊಂದಕ್ಕೆ ಸರಾಸರಿ 1 ಲಕ್ಷ ರೂ.ಗಳಿಗೂ ಹೆಚ್ಚಿನ ಹಣ ಖರ್ಚು ಮಾಡಿದ್ದರು. ತಿಂಗಳ ಹಿಂದೆ ಒಂದು ಕೆ.ಜಿ. ಅನಾನಸ್​ಗೆ ಎರಡಂಕಿ ಬೆಲೆ ಸಿಗುತ್ತಿತ್ತು. ಈಗ ಒಂದಂಕಿಗೆ ಕುಸಿದಿದೆ. ಇದು ಕರೊನಾ, ಲಾಕ್​ಡೌನ್, ನೀರಿನ ಸಮಸ್ಯೆ ಸೇರಿ ವಿವಿಧ ಸವಾಲಿನ ನಡುವೆಯೂ ಕೃಷಿ ಕಾಯಕ ಬಿಡದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎನ್ನುತ್ತಾರೆ ಬೆಳೆಗಾರ ಸೋಮಪ್ಪ ಗೌಡರ.

    ಹಣ್ಣಾದರೆ ದರ ಕಡಿಮೆ: ಅನಾನಸ್​ಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇಲ್ಲ. ಜ್ಯೂಸ್ ಸೇರಿ ಹಣ್ಣಿನ ಖಾದ್ಯ ತಯಾರಿಸುವ ಸಣ್ಣ ಕಂಪನಿಗಳು ಮಾತ್ರ ಖರೀದಿಸುತ್ತವೆ. ಉತ್ತರ ಭಾರತದ ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕೆಂದೆರೆ ಹಣ್ಣಾಗುವ 15 ದಿನಗಳ ಮೊದಲೇ ಕೀಳಬೇಕು. ಬಿಸಿಲ ಶಾಖಕ್ಕೆ ವಾಹನದಲ್ಲಿಯೇ ಜಾಸ್ತಿ ಹಣ್ಣಾದರೆ ಅಲ್ಲಿ ಕಡಿಮೆ ದರ ಸಿಗುತ್ತದೆ. ಹಾಕಿದ ಬಂಡವಾಳವೂ ಕೈಗೆ ಸಿಗುವುದಿಲ್ಲ ಎಂಬುದು ಬೆಳೆಗಾರರ ಅಭಿಪ್ರಾಯ.

    ಜಿಲ್ಲೆಯ ಅನಾನಸ್​ಗೆ ಉತ್ತರ ಭಾರತದ ಮಾರುಕಟ್ಟೆಯೇ ಪ್ರಮುಖ ಕೇಂದ್ರವಾಗಿವೆ. ಇದೀಗ ಅಸ್ಸಾಂ ಅನಾನಸ್ ಚಾಲ್ತಿಯಲ್ಲಿರುವ ಕಾರಣ ಇಲ್ಲಿನ ಹಣ್ಣಿಗೆ ಬೇಡಿಕೆ ಕಡಿಮೆಯಿದೆ. ದರದಲ್ಲಿಯೂ ಅಸ್ಸಾಂ ಹಣ್ಣು ಕಡಿಮೆ ಬೆಲೆಗೆ ಸಿಗುವ ಕಾರಣ ಇಲ್ಲಿನ ಬೆಳೆಗಾರರಿಗೆ ನಿರೀಕ್ಷಿತ ದರ ಲಭಿಸುತ್ತಿಲ್ಲ. ಇನ್ನೆರಡು ವಾರ ಇದೇ ಪರಿಸ್ಥಿತಿ ಇರಲಿದ್ದು, ನಂತರ ಅಸ್ಸಾಂ ಅನಾನಸ್ ಮಾರುಕಟ್ಟೆಗೆ ಬರುವುದು ಕಡಿಮೆಯಾಗುತ್ತದೆ. ನಂತರ ಬೆಲೆ ಏರುವ ಸಾಧ್ಯತೆಯಿದೆ.

    | ಸತೀಶ ಹೆಗಡೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

    ಅನಾನಸ್ ಸಸಿಗೆ ದುಪ್ಪಟ್ಟು ದರ ನೀಡಿ ಸಮೃದ್ಧವಾಗಿ ಬೆಳೆ ಬೆಳೆದಿದ್ದೇವೆ. ಆದರೆ, ಒಳ್ಳೆಯ ಬೆಲೆ ಮಾತ್ರ ಸಿಗುತ್ತಿಲ್ಲ. ಅನಾನಸ್ ಕಟಾವು ಮಾಡಿ ವಾಹನಕ್ಕೆ ತುಂಬಿಸಲು ಕೂಲಿ ನೀಡಲು ಈಗಿನ ಬೆಲೆ ಸಾಕಾಗುವುದಿಲ್ಲ. ಮತ್ತೊಂದು ಕಟಾವಿನಲ್ಲಾದರೂ ಲಾಭ ಪಡೆಯೋಣ ಎಂದರೆ ಬೇಸಿಗೆ ಬೆಳೆಗೆ ನೀರು ಹಾಯಿಸಲು ಸಮಸ್ಯೆ ಆಗುತ್ತದೆ. ಈ ಭಾಗದ ಖಾಸಗಿ ಕೆಲ ವಾಹನಗಳು ಖರೀದಿಗಾಗಿ ಬರುವುದನ್ನು ಹೊರತುಪಡಿಸಿದರೆ ನಿರೀಕ್ಷೆಯಂತೆ ಹಣ್ಣು ಖರೀದಿಸಲು ಪಂಜಾಬ್, ದೆಹಲಿ ಭಾಗದ ವಾಹನಗಳು ಹೊಲಕ್ಕೆ ಬರುತ್ತಿಲ್ಲ.

    | ಗಣಪತಿ ನಾಯ್ಕ ಬನವಾಸಿ ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts