More

    ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಜವಾಬ್ದಾರಿ ವಿದ್ಯಾವಂತರದ್ದು

    ಚಿಕ್ಕಬಳ್ಳಾಪುರ: ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಜವಾಬ್ದಾರಿ ವಿದ್ಯಾವಂತರ ಮೇಲಿದೆ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ರಾಜಾಕಾಂತ್ ತಿಳಿಸಿದರು.

    ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಲೋಕ ಶಿಕ್ಷಣ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಹಾಗೂ ಸಪ್ತಾಹದಲ್ಲಿ ಮಾತನಾಡಿದರು.

    ಜೀವನದಲ್ಲಿ ಆರೋಗ್ಯ ಮತ್ತು ಶಿಕ್ಷಣ ಮಹತ್ತರವಾದ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಳಕ್ಕೆ ಸರ್ಕಾರದ ಜತೆಗೆ ಸ್ವಯಂಸೇವಾ ಸಂಸ್ಥೆಗಳು ಶ್ರಮಿಸುತ್ತಿವೆ. ಉತ್ತಮ ತರಬೇತಿ, ಮಾರ್ಗದರ್ಶನ ನೀಡುತ್ತಿದ್ದು ಸದ್ವಿನಿಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.ಪ್ರತಿಯೊಬ್ಬರ ಪ್ರಾಮಾಣಿಕ ಶ್ರಮ, ಸಹಕಾರದಿಂದ ಮಾತ್ರ ಶೇ.100ರಷ್ಟು ಸಾಕ್ಷರತೆ ಗುರಿ ಸಾಧಿಸಲು ಸಾಧ್ಯವಿದ್ದು, ಸುತ್ತಲಿನ ಜನರಿಗೆ ಅಕ್ಷರ ಕಲಿಸಲು ಸಮಯ ಮೀಸಲಿಡಬೇಕು ಎಂದರು.

    ಸೇವಾ ಮನೋಭಾವದ ಕೆಲಸದಲ್ಲಿ ಯಶಸ್ಸು ನಿಶ್ಚಿತ. ವಿದ್ಯಾದಾನವು ಮಹಾದಾನಗಳಲ್ಲೊಂದಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು. ಚಿಕ್ಕಬಳ್ಳಾಪುರವನ್ನು ಸಂಪೂರ್ಣ ಅಕ್ಷರಸ್ಥರ ಜಿಲ್ಲೆಯನ್ನಾಗಿಸುವ ಗುರಿ ಸಾಧನೆಗೆ ಸಂಕಲ್ಪ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಕರೆ ನೀಡಿದರು.

    ಸಾಕ್ಷರತಾ ಬೋಧಕರನ್ನು ಸನ್ಮಾನಿಸಲಾಯಿತು. ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಂಕ್ ಮುನಿಯಪ್ಪ, ಹಿರಿಯ ವಯಸ್ಕರ ಶಿಕ್ಷಣ ಇಲಾಖೆ ಅಧಿಕಾರಿ ನಾಜಿಮಾಖಾತುನ್ ಮತ್ತಿತರರು ಇದ್ದರು.

    125 ಸಾಕ್ಷರತಾ ಗ್ರಾಮಗಳ ಘೋಷಣೆ: 2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 74,707 ಅನಕ್ಷರಸ್ಥರನ್ನು ಗುರುತಿಸಿದ್ದು 2019-20ರಲ್ಲಿ ವಿವಿಧ ಸಾಕ್ಷರತಾ ಕಾರ್ಯಕ್ರಮಗಳ ಮೂಲಕ 15,021 ಜನರನ್ನು ಸಾಕ್ಷರನ್ನಾಗಿಸಲಾಗಿದೆ. ಉಳಿದಂತೆ 59,686 ಜನರನ್ನು ಅಕ್ಷರಸ್ಥರನ್ನಾಗಿಸಲು ಶ್ರಮಿಸಲಾಗುತ್ತಿದೆ. ಈ ವರ್ಷ 13 ಗ್ರಾಪಂಗಳ 125 ಗ್ರಾಮಗಳನ್ನು ಸಂಪೂರ್ಣ ಸಾಕ್ಷರತಾ ಗ್ರಾಮಗಳನ್ನಾಗಿ ಘೋಷಿಸಲಾಗಿದೆ ಎಂದು ಜಿಲ್ಲಾ ಲೋಕ ಶಿಕ್ಷಣ ಸಮಿತಿ ಕಾರ್ಯದರ್ಶಿ ರಾಜೇಂದ್ರ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts