More

    ಅಧಿಕಾರಕ್ಕೆ ಬಂದರೆ ಆನ್‌ಲೈನ್ ರಮ್ಮಿಗೆ ಕಡಿವಾಣ

    ವಿಜಯವಾಣಿ ಸುದ್ದಿಜಾಲ ಕೋಲಾರ

    ಜೆಡಿಎಸ್‌ನಲ್ಲಿ ಚಿನ್ನದಂತಹ ಕಾರ್ಯಕರ್ತರು ಇದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆ ಜಾರಿಗಾಗಿ ಪ್ರಾದೇಶಿಕ ಪಕ್ಷ ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

    ತಾಲೂಕಿನ ಕುಂಬಾರಹಳ್ಳಿ ಸಮೀಪ ಗುರುವಾರ ಆಯೋಜಿಸಿದ್ದ ಕೋಲಾರ, ಬಂಗಾರಪೇಟೆ ವಿಧಾನಸಭಾ ಕ್ಷೇತ್ರಗಳ ಮುಖಂಡರು, ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಎಚ್.ಡಿ.ದೇವೇಗೌಡರು ಕಟ್ಟಿರುವ ಪಕ್ಷದಲ್ಲಿ ಎಚ್.ಡಿ.ಕುಮಾರಸ್ವಾಮಿ 2006ರಲ್ಲಿ ಮೊದಲ ಬಾರಿಗೆ ಸಿಎಂ ಆದಾಗ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಬೀದಿಗೆ ಬೀಳುತ್ತಿದ್ದ ಸಾಕಷ್ಟು ಕುಟುಂಬಗಳ ಉಳಿವಿಗೆ ಲಾಟರಿ, ಸಾರಾಯಿ ನಿಷೇಧ ಮಾಡಿದರು. ಈಗ ರಮ್ಮಿ ಸೇರಿದಂತೆ ಆನ್‌ಲೈನ್ ಗೇಮ್‌ಗಳಿಂದ ಅನೇಕರು ದಾರಿ ತಪ್ಪುತ್ತಿದ್ದಾರೆ, ಪ್ರಾದೇಶಿಕ ಪಕ್ಷ ಬಂದರೆ ಎಲ್ಲದಕ್ಕೂ ಕಡಿವಾಣ ಬೀಳಲಿವೆ ಎಂದರು.

    ದಿನಕ್ಕೊಂದು ಪ್ರಕರಣ: ಬಿಜೆಪಿ ಆಡಳಿತದಲ್ಲಿ ಬಡವರಿಗೆ ಒಂದು ಮನೆ ಕಟ್ಟಿಸಿಕೊಡಲು ಆಗಲಿಲ್ಲ. ಆದರೆ, ಶೇ.40 ಕಮಿಷನ್, ಪಿಎಸ್‌ಐ ಹಗರಣ, ಸಾಲದಿದ್ದಕ್ಕೆ ಇದೀಗ 8 ಕೋಟಿ ರೂ ಪ್ರಕರಣ ಹೀಗೆ ಪ್ರತಿದಿನವೂ ಒಂದಲ್ಲ ಒಂದು ಕಥೆ ಇರುತ್ತದೆ. ಅವರು ಕೇವಲ ಮೋದಿ ಹೆಸರಿನಲ್ಲಿ ಮಾತ್ರ ಮತ ಕೇಳುತ್ತಾರೆ ಹೊರತು ಸಾಧನಗಳೇ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು. ಎಂಎಲ್ಸಿ ಇಂಚರ ಗೋವಿಂದರಾಜು, ಸಿಎಂಆರ್ ಶ್ರೀನಾಥ್ ಮಾತನಾಡಿದರು.

    ವಡಗೂರು ಡಿ.ವಿ.ಹರೀಶ್ ಹಾಗೂ ಯುವ ಮುಖಂಡ ಸೌದ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆಯಾದರು. ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಬಂಗಾರಪೇಟೆ ಅಭ್ಯರ್ಥಿ ಮಲ್ಲೇಶ್ ಬಾಬು, ಮಾಜಿ ಎಂಎಲ್ಸಿ ತೂಪಲ್ಲಿ ಚೌಡರೆಡ್ಡಿ, ರಾಜ್ಯ ಮುಖಂಡ ಜಮೀರ್ ಪಾಷ, ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಮುಖಂಡರಾದ ಬಾಲಾಜಿ ಚನ್ನಯ್ಯ, ವಕ್ಕಲೇರಿ ರಾಮು, ಸಿಎಂಆರ್ ಹರೀಶ್, ವಡಗೂರು ರಾಮು, ಕಾಡೇನಹಳ್ಳಿ ನಾಗರಾಜ್, ಮುನಿರಾಜು, ಬಾಲ ಗೋವಿಂದ, ಅಬೀಬುಲ್ಲಾ ಖಾನ್ ಇದ್ದರು.

    ಹಾಲಿಗೆ 8 ರೂಪಾಯಿ ಪ್ರೋತ್ಸಾಹದ ಭರವಸೆ: ಪಂಚರತ್ನ ಯೋಜನೆಯಡಿ ಒಂದು ಯೋಜನೆಯನ್ನು ಜಾರಿ ಮಾಡದೇ ಇದ್ದರೂ ಪಕ್ಷ ವಿಸರ್ಜನೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ಈ ಸಮಸ್ಯೆಗೆ 2 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸುವ ಮೂಲಕ ರೈತ ಸಮುದಾಯದ ಉಳಿವಿಗೆ ಮುಂದಾಗಿದ್ದಾರೆ. ಹಾಲಿಗೆ 8 ರೂಪಾಯಿ ಪ್ರೋತ್ಸಾಹ ನೀಡುವುದಾಗಿಯೂ ತಿಳಿಸಿದ್ದಾರೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಶಕ್ತಿ ತುಂಬುವುದೇ ಪ್ರಾದೇಶಿಕ ಪಕ್ಷದ ಗುರಿ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

    ಹಗರಣಗಳಲ್ಲಿ ಮುಳುಗಿದೆ ಸರ್ಕಾರ

    ಕೋಲಾರ: ಬಿಜೆಪಿ ಸರ್ಕಾರದ ಕರ್ಮಕಾಂಡಗಳು ನಿತ್ಯ ಬಯಲಾಗುತ್ತಿವೆ. ಈ ಸರ್ಕಾರ ಹಗರಣದಲ್ಲಿ ಮುಳುಗಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು. ನಗರದ ಹೊರವಲಯದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದು ಜೆಡಿಎಸ್ ಗೆಲ್ಲಿಸಲು ತೀರ್ಮಾನಿಸಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜನರು ಈಗಾಗಲೇ ಅಧಿಕಾರ ಕೊಟ್ಟು ನೋಡಿಯಾಗಿದೆ. ರಾಜ್ಯದ ಅಭಿವೃದ್ಧಿಪಡಿಸುವಲ್ಲಿ ಎರಡೂ ಪಕ್ಷಗಳು ವಿಫಲವಾಗಿದ್ದು ಈ ಬಾರಿ ಜನರು ಬದಲಾವಣೆ ಕೋರುತ್ತಿದ್ದಾರೆ ಎಂದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರು ಶಾಶ್ವತ ಅವರೆ ನಮಗೆ ಸ್ಫೂರ್ತಿ. ಮಾ.26ರಂದು ಮೈಸೂರಿನಲ್ಲಿ ನಡೆ ಯಲಿರುವ ಸಮಾವೇಶದಲ್ಲಿ ದೇವೇ ಗೌಡರು ಪಾಲ್ಗೊಳ್ಳಲಿದ್ದಾರೆ. ವರ್ಚ್ಯುವಲ್ ವೇದಿಕೆಗಳಲ್ಲಿಯೂ ಅವರನ್ನು ಬಳಸಿಕೊಳ್ಳುತ್ತೇವೆ. ಅವರ ಮೇಲೆ ಕನ್ನಡಿಗರು ಬಹಳ ಗೌರವ ಇಟ್ಟುಕೊಂಡಿದ್ದಾರೆ ಎಂದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯಮಟ್ಟದ ನಾಯಕರು. ಅವರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಆದರೆ, ಕೋಲಾರದಲ್ಲಿ ಜೆಡಿಎಸ್ ಕಾರ್ಯಕರ್ತರು, ಅಭ್ಯರ್ಥಿ ಪ್ರಬಲವಾಗಿದ್ದಾರೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಜೆಡಿಎಸ್ ಭದ್ರಕೋಟೆ ಇದ್ದಂತೆ. ಜಿಲ್ಲೆಯಲ್ಲಿ ಈ ಬಾರಿ ಚುನಾವಣೆಯಲ್ಲಿ ಹಿಡಿತ ಸಾಧಿಸಲಿದ್ದೇವೆ ಎಂದರು. ಮಾ.20ರಂದು ಕೋಲಾರ ಜಿಲ್ಲೆಯಲ್ಲಿ ಸಮಾವೇಶ ಹಮ್ಮಿಕೊಂಡಿದ್ದು, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಜತೆಯಲ್ಲಿ ನಾನು ಭಾಗವಹಿಸುವುದಾಗಿ ತಿಳಿಸಿದರು.

    ರಾಜ್ಯದ ಬೊಕ್ಕಸದ ಹಣ ಸರಿಯಾಗಿ ಉಪಯೋಗ ಆಗಬೇಕೆಂದು ಕುಮಾರಸ್ವಾಮಿ ಪಂಚರತ್ನ ಯೋಜನೆ ರೂಪಿಸಿದ್ದಾರೆ. 77 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ನಡೆಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಕ್ಕಪಕ್ಕ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಆಡಳಿತ ನಡೆಸುತ್ತಿವೆ. ಆ ರಾಜ್ಯದ ಮುಖ್ಯಮಂತ್ರಿಗಳು ಎಚ್.ಡಿ.ದೇವೇಗೌಡರ ಮೇಲೆ ವಿಶೇಷ ಗೌರವ ಇಟ್ಟುಕೊಂಡಿದ್ದಾರೆ. ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷ ಬರಬೇಕೆಂಬ ಆಶಯ ಇಟ್ಟುಕೊಂಡಿದ್ದಾರೆ.

    ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಯುವ

    ಘಟಕದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts