More

    ಅಧಿಕಾರಕ್ಕಾಗಿ ನಿರಂತರವಿರಲಿ ಸ್ತ್ರೀ ಚಳವಳಿ  – ಲತಾ ಭಿಸೆ ಆಶಯ – ಎನ್‌ಎಫ್‌ಐಡಬ್ಲು ಐದನೇ ರಾಜ್ಯ ಸಮ್ಮೇಳನ 

    ದಾವಣಗೆರೆ: ಮಹಿಳೆಯರಿಗೆ ಸಂವಿಧಾನಬದ್ಧ ಅಧಿಕಾರ ಸಿಗಬೇಕೆಂಬುದು ಸ್ವಾತಂತ್ರೃ ಸಂಗ್ರಾಮ ಅವಧಿಯ ಕನಸಾಗಿದೆ. ಇದಕ್ಕಾಗಿ ಮಹಿಳಾ ಹೋರಾಟದಲ್ಲಿ ನಿರಂತರತೆ ಇರಬೇಕು ಎಂದು ಭಾರತೀಯ ಮಹಿಳಾ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯೆ ಲತಾ ಭಿಸೆ ಹೇಳಿದರು.
    ಇಲ್ಲಿನ ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ ರಸ್ತೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಭಾರತೀಯ ಮಹಿಳಾ ಒಕೂಟದ ಐದನೇ ರಾಜ್ಯ ಸಮ್ಮೇಳನದ ಬಹಿರಂಗ ಸಭೆಯನ್ನು ‘ಭಾರತದ ಮಹಿಳಾ ಚಳವಳಿಯ ಸಂಕ್ಷಿಪ್ತ ಚರಿತ್ರೆ’ ಪುಸ್ತಕ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
    ಮಹಿಳೆಯ ರಕ್ಷಣೆಯೇ ಸಂವಿಧಾನದ ರಕ್ಷಣೆಯಾಗಿದೆ. ಸ್ತ್ರೀ ಕೂಡ ದೇಶದ ನಾಗರಿಕಳು. ಗೃಹ ಕೆಲಸವಲ್ಲದೆ ಕಚೇರಿ ಕೆಲಸವನ್ನೂ ನಿಭಾಯಿಸುತ್ತಿದ್ದಾಳೆ. ಆಕೆಗೆ ಸಂವಿಧಾನಬದ್ಧ ಅಧಿಕಾರ ಸಿಗಲೇಬೇಕಿದೆ. ಇದಕ್ಕಾಗಿ ಹೋರಾಟ ತೀವ್ರವಾಗಬೇಕು ಎಂದು ಆಶಿಸಿದರು.
    ಭಾರತೀಯ ಮಹಿಳಾ ಒಕ್ಕೂಟ ಬ್ರಿಟಿಷ್ ಸಾಮ್ರಾಜ್ಯಷಾಹಿ ವಿರುದ್ಧದ ಮಾದರಿಯಲ್ಲೇ ಇಂದಿನ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಮಹಿಳೆಯರಿಗೆ ಸಂವಿಧಾನದತ್ತ ಅಧಿಕಾರ ನೀಡುವ ಸರ್ಕಾರವನ್ನು 2024ರಲ್ಲಿ ಆರಿಸಿ ತರಬೇಕಿದೆ ಎಂದರು.
    ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳಲ್ಲಿ ಹೆಣ್ಣುಮಕ್ಕಳ ಅನುಪಾತ ಕುಸಿಯುತ್ತಿದೆ. ಬಾಲ್ಯವಿವಾಹ ಹೆಚ್ಚಿವೆ. ಇನ್ನೊಂದೆಡೆ ಉದ್ಯೋಗಸ್ಥ ಮಹಿಳೆಯರ ಗರ್ಭಾಶಯ ತೆಗೆದುಹಾಕುವ ಪರಿಪಾಠ ನಡೆಯುತ್ತಿದೆ ಎಂದು ವಿಷಾದಿಸಿದರು.
    ವಲಸಿಗ ಮಹಿಳೆಯರಿಗೆ ಕೆಲಸ ಸಿಗುವುದು ಕೂಡ ಇಂದಿನ ಸವಾಲಾಗಿದೆ. ಗ್ರಾಮೀಣ ಉದ್ಯೋಗ ಖಾತ್ರಿಯಂತೆ ನಗರ ಪ್ರದೇಶಗಳಲ್ಲೂ ಮಹಿಳೆಯರಿಗಾಗಿ ಭಗತ್‌ಸಿಂಗ್ ಹೆಸರಲ್ಲಿ ಉದ್ಯೋಗ ಖಾತ್ರಿ ಯೋಜನೆ ತರುವಂತೆ ನಮ್ಮ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ ಎಂದರು.
    ಸಮಾನ ಅಧಿಕಾರಕ್ಕಾಗಿ ಭಾರತ ಸ್ವಾತಂತ್ರೃ ಸಂಗ್ರಾಮದಲ್ಲಿ ಮಹಿಳೆಯರು ದುಮುಕಿದ್ದರು. ಆದರೆ ಮುಂದಿನ ದಿನಗಳಲ್ಲಿ ಒಳ್ಳೆಯ ಭಾರತದ ನಿರೀಕ್ಷೆ ಅವರಲ್ಲಿ ಇರಲಿಲ್ಲ. ಹಿಂಸೆ-ಶೋಷಣೆೆಮುಕ್ತ, ಮಹಿಳಾ ದೌರ್ಜನ್ಯಮುಕ್ತ ಸಮಾಜ, ಸಮಾಜವಾದದ ಕನಸು ನಮ್ಮ ಹಿರಿಯರದಾಗಿತ್ತು. ಆದರೆ ಅದಿನ್ನೂ ಸಫಲವಾಗಿಲ್ಲ ಎಂದು ಹೇಳಿದರು.
    ಸತ್ಯ ಹೇಳಿದವರಿಗೆ ದೇಶದ್ರೋಹದ ಪಟ್ಟ ಕಟ್ಟುವ ಜತೆಗೆ ಹತ್ಯೆ ಮಾಡಲಾಗುತ್ತಿದೆ. ದೇಶದಲ್ಲಿ ಧಾನ್ಯಗಳ ಬೆಲೆ ಏರಿಕೆ ಹೆಚ್ಚಿದೆ. ಇದು ಮಹಿಳಾ ಶಿಕ್ಷಣದ ಮೇಲೂ ದುಷ್ಪರಿಣಾಮ ಬೀರಿದೆ. ಇದರ ವಿರುದ್ಧವೂ ಹೋರಾಟಕ್ಕಿಳಿಯಬೇಕಿದೆ. ಬೇಟಿ ಬಚಾವೋ, ಬೇಟಿ ಪಡಾವೋ ಎಂಬ ಘೋಷಣೆಯನ್ನು ಯಾರ ರೀತಿ ಈಡೇರಿಸಬೇಕು ಎಂದು ಪ್ರಶ್ನಿಸಿದರು.
    ಭಾರತೀಯ ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷೆ ಎ.ಜ್ಯೋತಿ ಮಾತನಾಡಿ ಮಹಿಳಾ ಚಳವಳಿ ಪರಿಣಾಮವಾಗಿ ದೇಶದ ಮಹಿಳೆಯರು ಅನೇಕ ಸೌಲಭ್ಯಗಳನ್ನು ಪಡೆದಿದ್ದಾರೆ. ಮಹಿಳಾ ಪರವಾದ ಅನೇಕ ಕಾನೂನುಗಳು ಬಂದಿವೆ. ಆದರೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕೆಲ ಬೆಳವಣಿಗೆಗಳು ಮಹಿಳೆಯರ ಬದುಕಿನ ಮೇಲೆ ಪರಿಣಾಮ ಬೀರಿ ಅವರ ಬದುಕಿನ ಹಕ್ಕುಗಳನ್ನು ಘಾಸಿಗೊಳಿಸುತ್ತಿವೆ. ಇದನ್ನು ಹಿಮ್ಮೆಟ್ಟಿಸಲು ಸ್ತ್ರೀಯರು ರಾಜಕೀಯ ಪ್ರಜ್ಞೆಯೊಂದಿಗೆ ಇನ್ನಷ್ಟು ಸಂಘಟನಾತ್ಮಕವಾಗಿ ಬೆಳೆಯಬೇಕಿದೆ ಎಂದರು.
    ಹಿರಿಯ ನ್ಯಾಯವಾದಿ ಟಿ.ಎಂ. ಅನ್ನಪೂರ್ಣ ಮಾತನಾಡಿ ಫೋಕ್ಸೋ ಹೆಣ್ಣುಮಕ್ಕಳಿಗಾಗಿ ಇರುವ ಬಲವಾದ ಕಾನೂನು. ಹೆಣ್ಣುಮಕ್ಕಳಿಗೆ ಉತ್ತಮ ಹಾಗೂ ಕೆಟ್ಟ ಸ್ಪರ್ಶದ ಬಗ್ಗೆ ತಾಯಂದಿರು ತಿಳಿವಳಿಕೆ ನೀಡಬೇಕಿದೆ ಎಂದೂ ಹೇಳಿದರು.
    ಕಾರ್ಯಕ್ರಮದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಜಿಲ್ಲಾ ಖಜಾಂಚಿ ಆನಂದರಾಜ್, ಎಐಕೆಎಸ್ ರಾಜ್ಯ ಪ್ರ.ಕಾರ್ಯದರ್ಶಿ ಪಿ.ವಿ.ಲೋಕೇಶ್, ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್,ಜಿ.ಉಮೇಶ್, ರಾಘವೇಂದ್ರ ನಾಯರಿ, ಎಂ.ಜಯಮ್ಮ, ಎಚ್.ಎಂ. ಸಂತೋಷ್, ಮಹೇಶ್‌ಕುಮಾರ್ ರಾಠೋಡ್, ಎಸ್.ಎಸ್.ಮಲ್ಲಮ್ಮ, ಟಿ.ಎಸ್.ನಾಗರಾಜ್, ಸಂಘಟನೆ ಜಿಲ್ಲಾಧ್ಯಕ್ಷ ಎಂ.ಬಿ.ಶಾರದಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts