More

    ಅಡಕೆಗೂ ಹನಿ ನೀರಾವರಿ ವಿಸ್ತರಣೆ; ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಮಾಹಿತಿ ; ಜಲಧಾರೆಗಳ ನಕಾಶೆ, ಅಂತರ್ಜಲ ನಿರ್ವಹಣೆ ಸಂವಹನ

    ತುಮಕೂರು: ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗೂ ಪೂರ್ವದಲ್ಲಿಯೇ ಸಣ್ಣ ನೀರಾವರಿ ಇಲಾಖೆ ಮೂಲಕ ಎಲ್ಲ ಗ್ರಾಮಗಳ ಅಂತರ್ಜಲ ಮಟ್ಟದ ಅಂಕಿ-ಅಂಶಗಳ ಕ್ರೋಡೀಕರಣ ನಡೆಯುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

    ಜಿಪಂ ಸಭಾಂಗಣದಲ್ಲಿ ಕೇಂದ್ರ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಇಲಾಖೆ ಸೋಮವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಜಲಧಾರೆಗಳ ನಕಾಶೆ ಮತ್ತು ಅಂತರ್ಜಲ ನಿರ್ವಹಣೆ ಬಗ್ಗೆ ಸಂವಹನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಎಲ್ಲ ಗ್ರಾಪಂಗಳಲ್ಲಿ ಅಂತರ್ಜಲ ಮಟ್ಟದ ಅಂಕಿ-ಅಂಶ ಸಂಗ್ರಹಣೆಗೆ ಚಾಲನೆ ನೀಡಲಾಗಿದೆ. ರೈತ ಕೊಳವೆಬಾವಿ ಕೊರೆಸುವಾಗ ಇಲಾಖೆಗೆ ಅರ್ಜಿ ಸಲ್ಲಿಸಿ ಅಂತರ್ಜಾಲದ ಮೂಲಕವೇ ನೀರಿನ ಮೂಲ ತಿಳಿದುಕೊಂಡು ಕೊಳವೆಬಾವಿ ಕೊರೆಸುವ ದಿನವೂ ಬರಬಹುದು, ಇದಕ್ಕಾಗಿ ಎಲ್ಲ ಸಮಾನ ಮನಸ್ಕ ಇಲಾಖೆಗಳು ಸಹಕಾರ ನೀಡಬೇಕು ಎಂದರು.

    ಜಿಲ್ಲೆಯ ಎಲ್ಲ ತಾಲೂಕುಗಳು ಸ್ವಾವಲಂಬಿಗಳಾಗಲು ನೀರಾವರಿಯ ಮಹತ್ವದ ಅರಿವು ಮೂಡಿಸಬೇಕಿದೆ. ಹನಿ ನೀರಾವರಿ ರೈತ ಸ್ನೇಹಿಯಾಗಿಸಬೇಕಿದೆ. ಅಡಕೆಗೂ ಹನಿ ನೀರಾವರಿ ವ್ಯವಸ್ಥೆ ವಿಸ್ತರಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದರು.

    ಕೆರೆಗಳ ಹೂಳು ಎಷ್ಟು ಪ್ರಮಾಣದಲ್ಲಿ ತೆಗೆಯಬೇಕು ಎಂಬ ವೈಜ್ಞಾನಿಕ ಅರಿವು ಮೂಡಿಸಬೇಕು, ನೀರಿನ ಮೂಲದ ಸರ್ವೇ ನಡೆಯಬೇಕು ಎಂದು ಸೂಚಿಸಿದ್ದೇನೆ. ಜಿಲ್ಲೆಯಲ್ಲಿ 400 ಅಡಿಯೊಳಗೆ ಅಂತರ್ಜಲ ಮಟ್ಟ ಬಂದರೆ ನಮ್ಮ ಯೋಜನೆ ಸಾಕಾರವಾದಂತೆ, ಇದರಿಂದ ರೈತರನ್ನು ಉಳಿಸಲು ಸಾಧ್ಯವಿದೆ ಎಂದರು.

    ನಾಲ್ಕು ಯೋಜನೆಗಳಿಂದ ಜಿಲ್ಲೆಗೆ ನೀರು ಬರುತ್ತಿದೆ, ವೃಷಭಾವತಿ ನದಿಯಿಂದಲೂ ಅರ್ಧ ಟಿಎಂಸಿ ನೀರು ತುಮಕೂರು ಗ್ರಾಮಾಂತರಕ್ಕೆ ಬರುತ್ತಿದೆ, 15 ಟಿಎಂಸಿ ನೀರನ್ನು ಜಿಲ್ಲೆಗೆ ಹಂಚಬಹುದು, ಬೆಳ್ಳಾವಿ ಹೋಬಳಿಯ ಏಳು ಕೆರೆಗೆ, ಹಾಗಲವಾಡಿ 32 ಕೆರೆಗೆ ನೀರಾವರಿ ಯೋಜನೆ ಮೀಸಲಿಟ್ಟಿದ್ದರೂ ನೀರು ಲಭ್ಯವಿಲ್ಲ. ಹಾಗಾಗಿ, ಸಣ್ಣನೀರಾವರಿ ಇಲಾಖೆ ವತಿಯಿಂದ ಸ್ವಯಂ ಪ್ರೇರಿತವಾಗಿ ನಕ್ಷೆ ತಯಾರಿಸಲಾಗಿದೆ ಎಂದರು. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಜಿ.ಎಂ.ಗಂಗಾಧರಸ್ವಾಮಿ, ಮೇಯರ್ ಬಿ.ಜಿ.ಕೃಷ್ಣಪ್ಪ ಇದ್ದರು.

    ನಮಗೆ ಲಭ್ಯವಾಗುವ ಹೇಮಾವತಿ, ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಗಳ ಮೂಲಕ ಜಿಲ್ಲೆಯ ಎಲ್ಲ ಕೆರೆಗಳಿಗೂ ನೀರು ತುಂಬಿಸುವ ಮಹತ್ವಾಕಾಂಕ್ಷೆ ಇಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ. ರೈತರಿಗೆ ನೀರು ಕೊಟ್ಟರೆ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುತ್ತಾರೆ. ಹಾಗಾಗಿ, ನೀರಾವರಿ ಯೋಜನೆಗಳಿಗೆ ವಿಶೇಷ ಕಾಳಜಿ ವಹಿಸಲಾಗಿದೆ.
    ಜೆ.ಸಿ.ಮಾಧುಸ್ವಾಮಿ, ಸಣ್ಣ ನೀರಾವರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts