More

    ಅಂಬೇಡ್ಕರ್ ಭವನ ಮೀಸಲಿಟ್ಟ ಜಾಗದಲ್ಲಿ ಇಂದಿರಾ ಕ್ಯಾಂಟೀನ್!

    ಬಾಗೇಪಲ್ಲಿ: ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮೀಸಲಿಟ್ಟಿರುವ ಸರ್ಕಾರಿ ನಿವೇಶನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಮುಂದಾಗಿರುವ ತಾಲೂಕು ಆಡಳಿತದ ಧೋರಣೆ ಖಂಡಿಸಿ ಭಾನುವಾರ ದಲಿತಪರ ಸಂಘಟನೆಗಳ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.

    ಮುಖಂಡ ಎ.ವಿ.ಪೂಜಪ್ಪ ಮಾತನಾಡಿ, 2017 ಏ.10ರಂದು ತಾಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸಾಮನ್ಯ ಸಭೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನ ಕಾಯ್ದಿರಿಸಿ, ಸರ್ವ ಸದಸ್ಯರು ಒಪ್ಪಿಗೆ ಮೇರೆಗೆ ಜಮೀನು ಮಂಜೂರಾತಿಗೆ ಕಂದಾಯ ಇಲಾಖೆಗೆ ಪ್ರಸ್ತಾಪನೆ ಸಲ್ಲಿಸಲಾಗಿತ್ತು. ಆದರೆ ಶಾಸಕರು ಅಧಿಕಾರ ದುರ್ಬಳಕೆ ಮಾಡಿಕೊಂಡು ಇಂದಿರಾ ಕ್ಯಾಂಟೀನ್ ನಿರ್ಮಿಸಲು ನಿವೇಶನ ಸಮತಟ್ಟು ಕಾಮಗಾರಿ ಪ್ರಾರಂಭಿಸಿರುವುದು ನ್ಯಾಯವೇ? ಎಂದು ಸ್ಥಳದಲ್ಲೇ ಇದ್ದ ತಹಸೀಲ್ದಾರ್ ಎಂ.ನಾಗರಾಜ್‌ರನ್ನು ಪ್ರಶ್ನಿಸಿದರು.

    ಭವನ ನಿರ್ಮಾಣಕ್ಕಾಗಿ ಕಾಯ್ದಿರಿಸಿರುವ ನಿವೇಶನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಮುಂದಾದರೆ ಹೋರಾಟಕ್ಕೆ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

    ಭವನ ನಿರ್ಮಾಣದ ಖಾಲಿ ನಿವೇಶನದಲ್ಲಿ ಗಣರಾಜ್ಯೋತ್ಸವ ದಿನದಂದು ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿಪೂಜೆ ನೇರವೇರಿಸಲಿದ್ದಾರೆ ಎಂಬ ಮಾಹಿತಿ ಪಡೆದ ದಲಿತ ಸಂಘಟನೆಗಳ ಮುಖಂಡರು ಬೆಳಗ್ಗೆಯಿಂದಲೇ ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.

    ಮುಖಂಡರಾದ ಜಿ.ಎನ್.ಅಂಜಿನಪ್ಪ, ವೆಂಕಟರವಣ, ಎಂ.ಜಿ.ಕಿರಣ್‌ಕುಮಾರ್, ನಾಗಪ್ಪ, ಟಿ.ರಾಮಪ್ಪ, ಪಿ.ಆರ್.ಸುಬ್ರಹ್ಮಣಿ, ಮುದ್ದಲಪಲ್ಲಿ ಈರಪ್ಪ, ಅಚೇಪಲ್ಲಿ ಗಣೇಶ್, ವೆಂಕಟ್ರಾಯಪ್ಪ, ಆದಿ, ಜೀವಿಕ ನಾರಾಯಣಸ್ವಾಮಿ, ಜೀವಿಕ ಲಕ್ಷ್ಮೀ ಇತರರಿದ್ದರು.

    ಪೊಲೀಸ್ ಬಿಗಿ ಬಂದೋಬಸ್ತ್:  ಇಂದಿರಾ ಕ್ಯಾಂಟೀನ್ ನಿರ್ಮಾಣದ ಭೂಮಿಪೂಜೆಗೆ ವಿರೋಧ ವ್ಯಕ್ತಪಡಿಸಿ ಮುಖಂಡರು ಪ್ರತಿಭಟನೆಗೆ ಮುಂದಾಗಿದ್ದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು, ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಸ್ಥಳಕ್ಕೆ ಬಂದ ತಹಸೀಲ್ದಾರ್ ಎಂ.ನಾಗರಾಜು, ತಾಪಂ ಇಒ ಸಿ.ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ನಾಯಕ್, ಪಿಎಸೈ ಪಿ.ಎಂ.ನವೀನ್ ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಿದರು.

    ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿರುವ ಖಾಲಿ ಸ್ಥಳದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಭವನ ಹಾಗೂ ಕ್ಯಾಂಟೀನ್ ನಿರ್ಮಾಣಕ್ಕೆ ಸರ್ಕಾರದಿಂದ ಆದೇಶ ನೀಡಿಲ್ಲ. ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ತಿರ್ಮಾನ ತೆಗೆದುಕೊಳ್ಳಲಾಗುತ್ತದೆ.
    ಎಂ.ನಾಗರಾಜು, ತಹಸೀಲ್ದಾರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts