More

    ಅಂಕಣ, ಜರೂರ್​ ಮಾತು: ಸಾವಿರಾರು ಮಕ್ಕಳಿಗೆ ವಿವೇಕಬೆಳಕು ತಂದ ಪರಿವಾರ! 

    ಅಂಕಣ, ಜರೂರ್​ ಮಾತು: ಸಾವಿರಾರು ಮಕ್ಕಳಿಗೆ ವಿವೇಕಬೆಳಕು ತಂದ ಪರಿವಾರ! ದರಿದ್ರ ದೇವೋಭವ, ರೋಗಿ ದೇವೋಭವ ಎಂದ ಸ್ವಾಮಿ ವಿವೇಕಾನಂದರು ಮನುಷ್ಯನಲ್ಲಿ ಅದರಲ್ಲೂ ಶೋಷಿತ, ದುಃಖಿತ, ಬಡಜನರಲ್ಲಿ ದೇವರನ್ನು ಕಂಡರು. ಅವರ ಸೇವೆಯೇ ಸಾಕ್ಷಾತ್ ಆ ಭಗವಂತನ ಸೇವೆ, ಆ ಭಾರತಾಂಬೆಯ ಸೇವೆ ಎಂದು ಘಂಟಾಘೋಷವಾಗಿ ಹೇಳಿದರು.

    ಸಿಡಿಲಸಂತ ವಿವೇಕಾನಂದರ ಪ್ರತಿ ನುಡಿ, ಅವರ ಜೀವನದ ಸಂದೇಶ ಜಗತ್ತಿನ ಕೋಟಿ-ಕೋಟಿ ಮನಸ್ಸುಗಳಿಗೆ ಪ್ರೇರಣೆ ನೀಡಿದೆ. ‘ನಾನು ಆಕಾರವೇ ಇಲ್ಲದ ರೂಪದಲ್ಲಿ ಇರುತ್ತೇನೆ’ ಎಂಬ ವಿವೇಕಾನಂದರ ಮಾತನ್ನು ಒಮ್ಮೆ ಸೂಕ್ಷ್ಮವಾಗಿ ಅವಲೋಕಿಸಿದರೆ ಸಮಾಜಕಟ್ಟುವ, ರಾಷ್ಟ್ರನಿರ್ವಣದ ಅದೆಷ್ಟೋ ಮಹಾನ್ ಕಾರ್ಯಗಳಲ್ಲಿ ಸ್ವಾಮೀಜಿ ಜೀವಂತವಾಗಿದ್ದಾರೆ ಎಂಬುದು ಅರಿವಿಗೆ ಬರುತ್ತದೆ.

    ಇವರೂ ಹಾಗೇ. ವಿವೇಕವಾಣಿಯ ಪಥದಲ್ಲಿ ಜೀವನ ರೂಪಿಸಿಕೊಂಡವರು. ಸ್ವಾರ್ಥವನ್ನು ಕಿತ್ತೊಗೆದು ಸಮಾಜಕ್ಕಾಗಿ ಬಾಳು ಮುಡುಪಾಗಿಟ್ಟರೆ ದೊರೆಯುವ ಸಾರ್ಥಕತೆ, ಸಾಕಾರಗೊಳ್ಳುವ ಅಗಾಧ ಪರಿವರ್ತನೆಯನ್ನು ಅನಾವರಣಗೊಳಿಸಿದವರು. ಐಐಟಿ, ಐಐಎಂಗಳಲ್ಲಿ ಓದಿದವರ ಪೈಕಿ ಬಹುತೇಕರು ಡಾಲರ್​ಗಳ ಕನಸು ಕಾಣಬೇಕಾದರೆ, ಈ ವ್ಯಕ್ತಿ ಶಿಕ್ಷಣ, ಜ್ಞಾನದ ಬೆಳಕನ್ನು ಅಂಧಕಾರದಲ್ಲಿರುವ ದೇಶದ ಗುಡಿಸಲುಗಳಿಗೆ ಕೊಂಡೊಯ್ಯಬೇಕೆಂದು ಸಂಕಲ್ಪಿಸಿದರು.

    ಅಂತರಾತ್ಮದ ಕರೆಗೆ ಓಗೊಟ್ಟರು. ತುಂಬು ತಾರುಣ್ಯದಲ್ಲಿ ಜೀವನವನ್ನೇ ಸಮಾಜೋತ್ಕರ್ಷಕ್ಕೆ ಮೀಸಲಾಗಿ ಇಡುವ ವೀರಸಂಕಲ್ಪ ಕೈಗೊಂಡು, ಕಳೆದ ಹದಿನಾಲ್ಕು ವರ್ಷಗಳಲ್ಲಿ ದೇಶವೇನು, ವಿದೇಶಗಳೂ ಈ ಜ್ಞಾನದ ಬೆಳಕಿನಿಂದ ಬೆರಗಾಗುವಂತೆ ಮಾಡಿದ್ದಾರೆ. ಇವರ ‘ಪರಿವಾರ’ ಹದಿನಾರು ಸಾವಿರ ಸದಸ್ಯರಿಗಿಂತಲೂ ದೊಡ್ಡದು. ಸಣ್ಣ ಗುಡಿಸಲುಗಳಿಂದ ಶುರುವಾದ ಈ ಪರಿವರ್ತನೆಯ ಯಾತ್ರೆ, ಅಸಂಖ್ಯ ಜನರ ಒಳಗಣ್ಣು ತೆರೆಸಿದೆ, ಬಾಳಿಗೊಂದು ಉದ್ದೇಶವನ್ನು ಕಲ್ಪಿಸಿದೆ. ಹದಿನಾರು ಸಾವಿರಕ್ಕಿಂತ ಅಧಿಕ ಮಕ್ಕಳ ಬದುಕು ರೂಪಿಸುತ್ತಿದೆ.

    ಇವರ ಹೆಸರು ವಿನಾಯಕ್ ಲೋಹಾನಿ. (https://parivaar.org) ಐಐಟಿ ಖರಗ್​ಪುರನಲ್ಲಿ ಬಿ.ಟೆಕ್ ಪೂರ್ಣಗೊಳಿಸಿ (2000ನೇ ಇಸ್ವಿ), ಐಐಎಂ ಕೋಲ್ಕತ್ತದಲ್ಲಿ ಎಂಬಿಎ ಪದವಿ ಪಡೆದುಕೊಂಡರು. ಅದು 2003ನೇ ವರ್ಷ. ವಿನಾಯಕರಿಗೆ ಇಪ್ಪತೆôದು ವರ್ಷ. ಉದ್ಯೋಗಕ್ಕಾಗಿ ಹಲವು ಆಫರ್​ಗಳಿದ್ದವು. ಆದರೆ, ಝುಗಮಗಿಸುವ ಕೋಲ್ಕತ್ತದ ಇನ್ನೊಂದು ದಾರುಣ ಮುಖದಲ್ಲಿ ದಟ್ಟ ಬಡತನ, ತೀವ್ರ ಅಪೌಷ್ಟಿಕತೆ, ಹಸಿವು ಇದ್ದದ್ದನ್ನು ಕಂಡಿದ್ದ ವಿನಾಯಕರು ಅಲ್ಲಿನ ಮಕ್ಕಳ ಕಂಗಳಲ್ಲಿ ಕನಸುಗಳು ಹುಟ್ಟುವ ಮೊದಲೇ ಸಾಯುತ್ತಿರುವುದನ್ನು ಗಮನಿಸಿದರು.

    ಈ ಗುಡಿಸಲುಗಳಿಗೆ ತಲುಪಿ, ಅಕ್ಷರಗಳ ಶಕ್ತಿಯಿಂದ ಅವರ ಬದುಕು ಬದಲಾಯಿಸಬೇಕೆಂದು ನಿರ್ಧರಿಸಿದರು. ಗೆಳೆಯರೆಲ್ಲ ಒಳ್ಳೆಯ ಪ್ಯಾಕೆಜ್​ಗಳ ಸಂಬಳಕ್ಕೆ ಬೇರೆ-ಬೇರೆ ಉದ್ಯೋಗಗಳಲ್ಲಿ ಸೇರಿಕೊಂಡರು. ಒಂದಿಷ್ಟು ಜಾಗ ತೆಗೆದುಕೊಂಡು ಇಂಥ ಮಕ್ಕಳಿಗೆ ಅಕ್ಷರ, ಆಶ್ರಯ ನೀಡಬೇಕೆಂದರೆ ಆಗಷ್ಟೇ ಶಿಕ್ಷಣ ಮುಗಿಸಿದ್ದ ಇವರ ಬಳಿ ದುಡ್ಡಿರಲಿಲ್ಲ. ಹಾಗಾಗಿ, ಕೋಲ್ಕತ್ತ ನಗರದ ಹೊರವಲಯವೊಂದರಲ್ಲಿ ಸಣ್ಣ ಮನೆಯನ್ನು ಬಾಡಿಗೆಗೆ ಪಡೆದು, ಮೊದಲಿಗೆ ತೀರಾ ಬಡತನದ ಹಿನ್ನೆಲೆಯ ಮೂರು ಮಕ್ಕಳನ್ನು ತಮ್ಮ ಜತೆಗೆ ಇರಿಸಿಕೊಂಡು ಓದಿಸತೊಡಗಿದರು.

    ಆಗಲೇ, ಅದಕ್ಕೆ ‘ಪರಿವಾರ’ ಎಂದು ಹೆಸರಿಟ್ಟರು. ಹದಿನೈದು ದಿನಗಳಲ್ಲೇ ಹತ್ತು ಮಕ್ಕಳು ಬಂದರು. ಎರಡು ತಿಂಗಳಲ್ಲಿ ಈ ಸಂಖ್ಯೆ ಮೂವತ್ತಾಯಿತು. ‘ಒಳ್ಳೆಯ ಉದ್ದೇಶದ ಕೆಲಸದ ಫಲಿತಾಂಶವೂ ಉತ್ತಮವೇ ಆಗಿರುತ್ತದೆ’ ಎಂದು ಲೋಹಾನಿ ತಾಯಿ ಆಶೀರ್ವದಿಸಿ, ಮೊದಲ ನೆರವು ಅವರೇ ನೀಡಿದರು. ಕಟ್ಟಡದ ಬಾಡಿಗೆ ತಿಂಗಳಿಗೆ -ಠಿ; 12 ಸಾವಿರ, ಜತೆಗೆ ಊಟ, ಶಿಕ್ಷಣದ ಖರ್ಚು. ವಿನಾಯಕ್ ಖಾಸಗಿ ತರಬೇತಿ ಕೇಂದ್ರಗಳಲ್ಲಿ ಎಂಬಿಎ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತ ಅಲ್ಲಿ ದೊರೆಯುವ ಸಂಬಳದಿಂದ ಸಂಸ್ಥೆ ನಡೆಸತೊಡಗಿದರು. ಮುಂದೆ ಕೆಲವೇ ದಿನಗಳಲ್ಲಿ ಸ್ನೇಹಿತರಿಗೆ, ಪರಿಚಯಸ್ಥರಿಗೆ ಇವರ ಕಾರ್ಯದ ಮಹತ್ವ ಅರಿವಾಯಿತು.

    ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಮಕ್ಕಳು, ಅನಾಥರಾಗಿದ್ದು ಬೀದಿಬದಿಯಲ್ಲಿ ವಾಸಿಸುತ್ತಿದ್ದ ಮಕ್ಕಳು, ರೆಡ್​ಲೈಟ್ ಏರಿಯಾದ ಬಾಲಕಿಯರು, ಕಡುಬಡತನ, ಅಪೌಷ್ಟಿಕತೆ ಸಮಸ್ಯೆಗೆ ಸಿಲುಕಿದ ಮಕ್ಕಳನ್ನು ಗುರುತಿಸಿ ‘ಪರಿವಾರ’ಕ್ಕೆ ಕರೆತಂದರು. ಈ ಮಕ್ಕಳ ಸ್ಥಿತಿ ಎಷ್ಟು ದಾರುಣವಾಗಿತ್ತೆಂದರೆ, ಇವರನ್ನು ನೋಡಿದಾಕ್ಷಣವೇ ‘ನಾವು ನಮ್ಮಿಂದಾದ ಸಹಾಯ ಮಾಡುತ್ತೇವೆ’ ಎಂದು ಜನ ಮುಂದೆ ಬಂದರು. ಸೇವಾವ್ರತಿಗಳ ತಂಡವೇ ಸಿದ್ಧಗೊಂಡಿತು. ಪಾಠ ಮಾಡಲು, ವೈದ್ಯಕೀಯ ಉಪಚಾರಕ್ಕಾಗಿ, ಸಂಸ್ಕಾರವರ್ಧನೆ, ಮೌಲ್ಯಗಳ ಅಳವಡಿಕೆಗಾಗಿ ಹಲವು ತಂಡಗಳು ಹುಟ್ಟಿಕೊಂಡವು. ಇವರಿಗೆಲ್ಲ ವಿನಾಯಕ್ ಲೋಹಾನಿ ಪ್ರೀತಿಯ ‘ದಾದಾ’. ದಾದಾನ ಮಕ್ಕಳನ್ನು ಕಂಡರೆ ಎಲ್ಲರಿಗೂ ಅಕ್ಕರೆ.

    ಸಮುದಾಯದ ಸಹಕಾರದಿಂದ ಕೋಲ್ಕತ್ತ ಹೊರವಲಯದಲ್ಲಿ ಎರಡು ಎಕರೆ ಜಾಗ ಪಡೆದು, 2004ರಲ್ಲಿ ಅಲ್ಲಿ ಕಟ್ಟಡ ನಿರ್ವಿುಸಲಾಯಿತು. ‘ಅಮರಭಾರತ ವಿದ್ಯಾಪೀಠ’ ಎಂಬ ಚೆಂದದ ಹೆಸರಿನೊಂದಿಗೆ ವಸತಿಸಹಿತ ಶಾಲೆ, ಆಶ್ರಯಕೇಂದ್ರ ಮುನ್ನಡೆಯಿತು. 2011ರಲ್ಲಿ ಬಾಲಕಿಯರಿಗಾಗಿ ಪ್ರತ್ಯೇಕವಾದ ಕ್ಯಾಂಪಸ್ ‘ಪರಿವಾರ ಶಾರದಾ ತೀರ್ಥ’ ಆರಂಭಗೊಂಡಿತು. ಬರೀ ಮೂರು ಮಕ್ಕಳಿಂದ ಆರಂಭವಾಗಿದ್ದ ಪರಿವಾರದಲ್ಲೀಗ 2,100ಕ್ಕಿಂತ ಅಧಿಕ ಮಕ್ಕಳು. ಅಂದರೆ ಇವರಿಗೆಲ್ಲ ವಸತಿಸಹಿತ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ಕಲ್ಪಿಸಲಾಗುತ್ತಿದೆ.

    ಪಶ್ಚಿಮ ಬಂಗಾಳದ ಹದಿಮೂರು, ಜಾರ್ಖಂಡ್​ನ ಮೂರು ಜಿಲ್ಲೆ ಮತ್ತು ಬಿಹಾರದ ಕೆಲ ಪ್ರದೇಶಗಳ ಮಕ್ಕಳು ಇಲ್ಲಿ ಆಶ್ರಯ ಪಡೆದಿದ್ದಾರೆ. ಐದರಿಂದ ಹದಿನೈದು ವರ್ಷ ವಯೋಮಾನದ ಈ ಮಕ್ಕಳಿಗೆ ಹೈಸ್ಕೂಲ್ ಶಿಕ್ಷಣದ ಬಳಿಕ ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿಯನ್ನೂ ‘ಪರಿವಾರ’ ಕೊಡಿಸುತ್ತಿದೆ. ಶಿಕ್ಷಣ ಎಂದಾಕ್ಷಣ ಬರೀ ಪಠ್ಯದ ಪಾಠ ಹೇಳಿಕೊಡುವುದಿಲ್ಲ. ರಾಷ್ಟ್ರವಾದದ ಮೌಲ್ಯಗಳನ್ನು, ಸಮಾಜದ ಪರ ಕಳಕಳಿಯನ್ನು ಬಾಲ್ಯದಲ್ಲಿಯೇ ತುಂಬಲಾಗುತ್ತದೆ. ಶ್ರೀರಾಮಕೃಷ್ಣ, ಸ್ವಾಮಿ ವಿವೇಕಾನಂದ, ಸೋದರಿ ನಿವೇದಿತಾರ ಸಂದೇಶಗಳ ಬುನಾದಿಯಲ್ಲಿ ಪ್ರತಿ ಮಗುವಿನ ಬದುಕು ಆದರ್ಶಮಯವಾಗಿ ರೂಪುಗೊಳ್ಳುವಂತೆ ಮಾಡಲಾಗುತ್ತಿದೆ.

    ‘ಪ್ರತೀ ಮಗು ಕೂಡ ನಮಗೆ ವಿಶೇಷ ಪ್ರೊಜೆಕ್ಟ್​ನಂತೆ. ಆತನ ಸಾಮರ್ಥ್ಯವನ್ನು ಗುರುತಿಸುತ್ತೇವೆ -ಕುಂದುಕೊರತೆಗಳನ್ನು ನೀಗಿಸುತ್ತೇವೆ’ ಎನ್ನುವ ಲೋಹಾನಿ ಆ ಮಕ್ಕಳ ವ್ಯಕ್ತಿತ್ವವಿಕಾಸಕ್ಕಾಗಿ ಹೊಸ ಚಿಂತನೆಗಳನ್ನು ಅಳವಡಿಸುತ್ತಾರೆ. ಸುಸಜ್ಜಿತ ತರಗತಿಗಳು, ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯದ ಜತೆಗೆ ವೈದ್ಯಕೀಯ ಕೇಂದ್ರ, ಪ್ರಾರ್ಥನಾ ಹಾಲ್, ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ, ಕ್ರೀಡಾಂಗಣವನ್ನು ಸಂಸ್ಥೆ ಹೊಂದಿದೆ. ಅಡಿಗೆಯವರು, ಬೋಧಕ-ಬೋಧಕತೇರ ಸೇರಿ ನೂರಾರು ಸಿಬ್ಬಂದಿಯಿದ್ದಾರೆ. ಇದೆಲ್ಲವೂ ಸಮಾಜದ ಸಹಕಾರದಿಂದಲೇ ಸಾಧ್ಯವಾಗಿದೆ. ಹಲವು ದೊಡ್ಡ ಕಂಪನಿಗಳು ಸಿಎಸ್​ಆರ್ ಅಡಿ ಸಹಾಯ ಮಾಡಿವೆ.

    ಪ್ರಸಕ್ತ, ಪ್ರತಿವರ್ಷ ಇಲ್ಲಿ ಪ್ರವೇಶ ಪಡೆಯಲು 1,500ಕ್ಕಿಂತ ಹೆಚ್ಚು ಅರ್ಜಿಗಳು ಬರುತ್ತವೆ. ಸಂಸ್ಥೆಯ ಸಿಬ್ಬಂದಿ ಹಾಗೂ ಕಾರ್ಯಕರ್ತರು ಆಯಾ ಹಳ್ಳಿ, ಪ್ರದೇಶಕ್ಕೆ ಭೇಟಿ ನೀಡಿ ಮಕ್ಕಳ ನೈಜ ಪರಿಸ್ಥಿತಿ ಅರಿಯುತ್ತಾರೆ. ಮಕ್ಕಳನ್ನು ಸಾಕಲು ಸಾಧ್ಯವೇ ಇಲ್ಲದ ಕುಟುಂಬಗಳ, ಅಂಗವಿಕಲ ಕುಟುಂಬಗಳ ಮಕ್ಕಳಿಗೆ ಮೊದಲ ಆದ್ಯತೆಯಾಗಿ ಪ್ರವೇಶ ನೀಡುತ್ತಾರೆ. ‘ನಮ್ಮ ಮಕ್ಕಳ ಬದುಕು ಬದಲಾಗಿದೆ. ಅವರ ಅಭಿವೃದ್ಧಿಯನ್ನು ಕಂಡು ತುಂಬ ಸಂತೋಷವಾಗಿದೆ’ ಎಂದು ಪಾಲಕರು ಭಾವುಕರಾಗಿ ಹೇಳುತ್ತಾರೆ.

    ಪಶ್ಚಿಮ ಬಂಗಾಳದಲ್ಲಿ ಈ ಪ್ರಯೋಗ ಯಶಸ್ವಿಯಾಯಿತು. ಇಲ್ಲಿ ಓದಿದ ಮಕ್ಕಳು ಶಿಸ್ತು, ಸ್ವಾವಲಂಬನೆ, ದೇಶಭಕ್ತಿಯ ಮೌಲ್ಯಗಳಿಂದ ಬದುಕು ಕಟ್ಟತೊಡಗಿದರು. ಇದು ವಿನಾಯಕರ ವಿಶ್ವಾಸವನ್ನು ಹೆಚ್ಚಿಸಿತು. ಹಾಗಾಗಿ, ಬೇರೆಡೆ ಈ ಪ್ರಯೋಗವನ್ನು ವಿಸ್ತರಿಸಬೇಕು ಎಂಬ ನಿರ್ಧಾರಕ್ಕೆ ಬಂದಾಗ ಗೋಚರಿಸಿದ್ದು ಮಧ್ಯಪ್ರದೇಶ. ಅಲ್ಲಿನ ಗ್ರಾಮೀಣ ಭಾಗಗಳಲ್ಲಿ ಖುದ್ದು ವಿನಾಯಕ್ ತಮ್ಮ ತಂಡದೊಂದಿಗೆ ಅಧ್ಯಯನ ಪ್ರವಾಸ ಮಾಡಿದರು. ಪರಿಸ್ಥಿತಿ ಎಷ್ಟು ವಿಶಮವಾಗಿತ್ತೆಂದರೆ ನೂರಾರು ಹಳ್ಳಿಗಳಲ್ಲಿ ಅಪೌಷ್ಟಿಕತೆಯ ಪ್ರಮಾಣ ಶೇಕಡ 80-85ರಷ್ಟಿದ್ದರೆ ಕೆಲ ಗ್ರಾಮಗಳಲ್ಲಂತೂ ಶೇ.100ರಷ್ಟು! ಪುಟ್ಟ ಮಕ್ಕಳು ಅಸ್ತಿಪಂಜರದ ಹೊದಿಕೆಯಂತಿದ್ದರು.

    ಮೊದಲು ಅವರಿಗೆ ಹೊಟ್ಟೆ ತುಂಬ ಊಟ ನೀಡದೆ ಅಕ್ಷರ ನಾಟುವುದೆಂತು ಎಂದು ಯೋಚಿಸಿ 2016ರಲ್ಲಿ ಮಧ್ಯಪ್ರದೇಶದಲ್ಲಿ ಸೇವಾಕುಟೀರಗಳನ್ನು ಆರಂಭಿಸಿದರು. ಗ್ರಾಮದ ಆಯ್ದ ಸ್ಥಳದಲ್ಲಿ ಅಂದರೆ ಸಮುದಾಯ ಭವನ, ಪಂಚಾಯತ್ ಕಚೇರಿಯ ಆವರಣ, ಸರ್ಕಾರಿ ಶಾಲೆಗಳು, ದೇವಸ್ಥಾನದ ಪ್ರಾಂಗಣಗಳಲ್ಲಿ ಈ ಸೇವಾ ಕುಟೀರಗಳನ್ನು ಆರಂಭಿಸಲಾಯಿತು. ಸರ್ಕಾರಿ ಶಿಕ್ಷಣ ವ್ಯವಸ್ಥೆ ಜತೆ ಸಂಘರ್ಷ ಮಾಡದೆ ಸಮನ್ವಯದಿಂದ ಹೊಗಬೇಕು ಎಂಬ ಚಿಂತನೆ ಲೋಹಾನಿ ಅವರದ್ದು. ಅದಕ್ಕಾಗಿಯೇ, ಸರ್ಕಾರಿ ಶಾಲೆ ಅಥವಾ ಲಭ್ಯವಾದ ಪ್ರದೇಶಗಳಲ್ಲಿ ಬೆಳಗ್ಗೆ ಮತ್ತು ಸಂಜೆ (ಶಾಲಾ ಅವಧಿ ಮೊದಲು ಮತ್ತು ನಂತರ) ತಲಾ ಮೂರು ಗಂಟೆಗಳ ತರಗತಿ ನಡೆಸಲಾಗುತ್ತದೆ. ಬೆಳಗ್ಗೆ ಮಕ್ಕಳಿಗೆ ಪೌಷ್ಟಿಕ ಉಪಹಾರ, ರಾತ್ರಿ ಊಟವನ್ನು ಒದಗಿಸಲಾಗುತ್ತಿದೆ.

    ದೇವಾಸ್, ಮಾಂಡ್ಲಾ ಸೇರಿ ಮಧ್ಯಪ್ರದೇಶದ ಎಂಟು ಜಿಲ್ಲೆಗಳ 248 ಗ್ರಾಮಗಳಲ್ಲಿ 135 ಸೇವಾ ಕುಟೀರಗಳು ಕಾರ್ಯನಿರ್ವಹಿಸುತ್ತಿದ್ದು, ಹದಿನಾಲ್ಕು ಸಾವಿರ ಮಕ್ಕಳು ಇದರ ಲಾಭ ಪಡೆದಿದ್ದಾರೆ. ಫಲಿತಾಂಶ ಈಗ ಕಾಣತೊಡಗಿದೆ. ಅಪೌಷ್ಟಿಕಾಂಶದ ಸಮಸ್ಯೆಯಿಂದ ಮಕ್ಕಳು ಚೇತರಿಸಿಕೊಂಡು, ಕಲಿಕೆಯತ್ತ ಆಸಕ್ತಿ ತೋರುತ್ತಿದ್ದಾರೆ. ಈ ಬಾರಿಯ ಸ್ವಾಮಿ ವಿವೇಕಾನಂದ ಜಯಂತಿಯಂದು (ಜನವರಿ 12) ಈ ಎಲ್ಲ 248 ಗ್ರಾಮಗಳಲ್ಲಿ ಮಕ್ಕಳು ರ‍್ಯಾಲಿ ನಡೆಸಿ, ವಿವೇಕವಿಚಾರಗಳನ್ನು ತಲುಪಿಸಿದ್ದು ಸಂಚಲನವೇ ಮೂಡಿಸಿದೆ.

    ಪಶ್ಚಿಮ ಬಂಗಾಳದ ಮಾದರಿಯಲ್ಲಿ ಇಲ್ಲೂ ವಸತಿಸಹಿತ ಶಾಲೆ-ಆಶ್ರಯ ಕೇಂದ್ರ ನಿರ್ವಿುಸುವ ಯೋಜನೆ ಕಾರ್ಯಗತವಾಗುತ್ತಿದೆ. ಕಟ್ಟಡ ನಿರ್ಮಾಣ ಶೇಕಡ 60ರಷ್ಟು ಪೂರ್ಣಗೊಂಡಿದೆ. ಬಳಿಕ ಇಲ್ಲಿ ಮೂರು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಹಲವು ಶಿಕ್ಷಣತಜ್ಞರು, ಸಂಪನ್ಮೂಲ ವ್ಯಕ್ತಿಗಳು ‘ಪರಿವಾರ’ಕ್ಕೆ ಭೇಟಿ ನೀಡಿದ್ದಾರೆ. ಮಕ್ಕಳ ಕಲ್ಯಾಣ ವಿಭಾಗದಲ್ಲಿ ಕೇಂದ್ರ ಸರ್ಕಾರ ವಿನಾಯಕರನ್ನು ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

    ‘ನೌಕರಿ ಸೇರಿಕೊಂಡಿದ್ದರೆ ನನ್ನೊಬ್ಬನ ಬಾಳು ರೂಪಿಸಿಕೊಳ್ಳುತ್ತಿದ್ದೆ. ಈಗ ನೋಡಿ ಸಾವಿರಾರು ಮಕ್ಕಳ ಬದುಕು ಬದಲಾಗಿದೆ. ಇದು ಅಕ್ಷರದ ಶಕ್ತಿ, ಶಿಕ್ಷಣದ ಶಕ್ತಿ’ ಎನ್ನುವ ವಿನಾಯಕ್ ಸಂಸ್ಥೆಯ ಖರ್ಚು ವರ್ಷಕ್ಕೆ 8 ಕೋಟಿಗಿಂತಲೂ ಹೆಚ್ಚಿದ್ದರೂ ಎಲ್ಲವೂ ಸಮಾಜದ ಬಲದಿಂದ ನಡೆಯುತ್ತಿದೆ. ಅಷ್ಟಕ್ಕೂ ಸೇವೆ ಎಂಬುದು ನಮ್ಮ ಭಾರತೀಯ ಜೀವನಪದ್ಧತಿಯ ಮೂಲಪಥ ಮತ್ತು ಮೌಲ್ಯ. ಇದನ್ನು ಅರಿತುಕೊಂಡರೆ ಸಮಾಜದಲ್ಲಿ ದುಃಖಿತರ, ಶೋಷಿತರ ಸಂಖ್ಯೆ ಕಡಿಮೆಯಾಗುತ್ತದೆ ಎನ್ನುತ್ತಾರೆ. ಅಬ್ಬಾ! ಇಂಥ ವಿವೇಕದ ಬೆಳಕು ಮಾತ್ರ ನೈಜ ಅಂಧಕಾರವನ್ನು, ಕಡುಸ್ವಾರ್ಥವನ್ನು ತೊಲಗಿಸಬಲ್ಲದು. ಹೌದಲ್ಲವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts